ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಶಿವಲಿಂಗೇಶ್ವರ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಚರಂಡಿಗಳು ಬ್ಲಾಕ್ ಆಗಿರುವುದರಿಂದ ಮಳೆ ನೀರು ಹಾಗೂ ಚರಂಡಿಯ ಗಲೀಜು ನೀರು ರಸ್ತೆಯ ಮೇಲೆ ಹರಿದು, ಬಳಿಕ ಮನೆಗಳಿಗೆ ನುಗ್ಗಿದೆ. ಇದರಿಂದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದರು. ಮನೆಗಳಿಗೆ ಗಲೀಜು ನೀರು ನುಗ್ಗಿ ಅವಾಂತರ ಸೃಷ್ಟಿಸಿದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧವೂ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆ ಬಂದಾಗಲೆಲ್ಲ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಳೆ ಬಂದಾಗಲೆಲ್ಲ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




