ಸೆಪ್ಟೆಂಬರ್ 5ರಂದು ಪ್ರಜಾಸೇವೆ ಇಲಾಖೆಯನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಎರಡು ದಿನ ಸಭೆ ನಡೆಸುತ್ತಾರೆ. ಇದಕ್ಕೂ ಮೊದಲು ಜನಸಾಮಾನ್ಯರು ಸಮಸ್ಯೆಗಳ ಕುರಿತು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಎಷ್ಟು ಸಾಧ್ಯವೋ ಅಷ್ಟು ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒತ್ತಿ ಹೇಳಿದರು.
ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರಾಸ್ತಾವಿಕ ಮಾತನಾಡುತ್ತ ಹೇಳಿದರು.
“ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಳಗಳಲ್ಲೇ ವಾಸವಿದ್ದು, ಜನರಿಗೆ ಲಭ್ಯವಿರಬೇಕು. ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕಿನಲ್ಲೇ ಇರಬೇಕು” ಎಂದು ತಿಳಿಸಿದರು.
“ಜನರರು ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸುವಂತಾಗಬೇಕು. ಅಧಿಕಾರಿಗಳು ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
“ಶಾಸಕರು ತಿಂಗಳಿಗೆ ನಾಲ್ಕು ದಿನಗಳು ಪಂಚಾಯತ್ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳೇ ಜನರ ಬಳಿ ಹೋಗಬೇಕು” ಎಂದು ನಿರ್ದೇಶಿಸಿದರು.
“ಸರ್ಕಾರ ನಿವೇಶನ ರಹಿತರಿಗೆ ನಿವೇಶನ ನೀಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ನಿವೇಶನಕ್ಕೆ ಅರ್ಜಿ ಹಾಕುವಾಗ ಸೂಕ್ತ ದಾಖಲೆಗಳನ್ನು ನೀಡಬೇಕು ಮತ್ತು ಈಗಾಗಲೇ ನಿವೇಶನ ಹೊಂದಿರುವವರಿಗೆ ಅರ್ಜಿ ಹಾಕಲು ಅವಕಾಶ ನೀಡಬಾರದು” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಗಾರು ಬಿತ್ತನೆ ಅವಧಿ ಅಂತ್ಯ: ರಾಜ್ಯದಲ್ಲಿ ಶೇ.80ರಷ್ಟು ಬಿತ್ತನೆ, ಇಳುವರಿ ಕುಂಠಿತವಾಗುವ ಸಾಧ್ಯತೆ
“ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಮರುಪರಿಶೀಲನೆ ಮಾಡಬೇಕು. ಫಲಾನುಭವಿಗಳು ತಮ್ಮದೇ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಬ್ಯಾಂಕ್ ಖಾತೆ ಮೂರನೇ ವ್ಯಕ್ತಿಯ ದೂರವಾಣಿ ಸಂಖ್ಯೆ ಜೋಡಣೆ ಆಗಬಾರದು” ಎಂದು ಎಚ್ಚರಿಸಿದರು.
“ಪಂಚಾಯತ್ ಮಟ್ಟದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಬೇಕು. ಶಾಸಕರು ಸಮಿತಿ ರಚಿಸಬೇಕು. ಮಾಡದಿದ್ದರೆ ನಾವೇ ಮಾಡುತ್ತೇವೆ. ಆನ್ಲೈನ್ನಲ್ಲಿ ಭಾರತ್ ಜೋಡೋ ಯುವ ಸಂಘದ ನೋಂದಣಿಯನ್ನು ಮಾಡಲಾಗುವುದು” ಎಂದು ತಿಳಿಸಿದರು.




