ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಮುಖಂಡರಾದ ಸಿದ್ರಾಮಪ್ಪ ಆಣದೂರೆ ಮತ್ತು ಬಾಬುರಾವ ಹುಣಸನಾಳೆ ಅವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾಲ್ಕಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
“ಕರ್ನಾಟಕದ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು, ತೀವ್ರ ಬರಗಾಲ ಎದುರಿಸುತ್ತಿರುವ ಭಾಲ್ಕಿ ತಾಲೂಕನ್ನು ಮಾತ್ರ ಪಟ್ಟಿಯಿಂದ ಹೊರಗಿಡಲಾಗಿದೆ. ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿದ್ದರೂ, ಭಾಲ್ಕಿ ಸೇರಿದಂತೆ ಔರಾದ್, ಹುಲಸೂರು ಹಾಗೂ ಕಮಲನಗರ ತಾಲೂಕುಗಳನ್ನು ಪಟ್ಟಿಗೆ ಸೇರಿಸಿಲ್ಲ. ವಾಸ್ತವವಾಗಿ ಬೀದರ್ ಜಿಲ್ಲೆ ಸಂಪೂರ್ಣವಾಗಿ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ಭಾಲ್ಕಿ ತಾಲೂಕಿನಲ್ಲಿ ಆರಂಭದಲ್ಲಿ ಸ್ವಲ್ಪ ಮಳೆಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ ನಂತರ ಮಳೆ ಕೈಕೊಟ್ಟ ಪರಿಣಾಮ ಅನೇಕ ಕಡೆ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆಯದೇ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಇದರಿಂದ ರೈತರು ಹಾಗೂ ಕೃಷಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
ಭಾಲ್ಕಿ ತಾಲೂಕನ್ನು ಕೂಡಲೇ ಬರಪೀಡಿತ ಪಟ್ಟಿಗೆ ಸೇರಿಸಿ, ರೈತರಿಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರೈತರು ವಿವಿಧ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್ಗಳ ಮೂಲಕ ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಕಬ್ಬಿಗೆ ಪ್ರತಿ ಟನ್ಗೆ ₹5 ಸಾವಿರ ದರ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿದರು.

ರೈತರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ಇದನ್ನೂ ಓದಿ : KPSC ಹಗರಣ : ಬಸವರಾಜ ಎಂಬ ನಿರುದ್ಯೋಗಿ ʼದಲ್ಲಾಳಿ ದಂಧೆʼ ಮಾಡಿ ಕೋಟ್ಯಾಧೀಶನಾದ ಕಥೆ!
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಶೇಷರಾವ ಕಣಜಿ, ಮಾಹಾನಂದಾ ದೇಶಮುಖ, ಅನೀಲಕುಮಾರ ರಂಜೇರಿ, ಆರ್.ಪಿ. ಬಿರಾದಾರ, ವಿನಿತಾ ಮಾಶೆಟ್ಟೆ, ಭೌರಾವ ಪಾಟೀಲ, ವಾಗೇಶ ಪಾಟೀಲ, ಸುಧಾಕರ ಬೋಬಡೆ, ಸೋಮನಾಥ ಟೋಕರೆ, ಸಂಜೀವಕುಮಾರ ಹುಣಜೆ, ಶರದ ಪಾಟೀಲ, ರಂಗರಾವ ಬಿರಾದಾರ ಕಾಕನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.





