2025-26ನೇ ಸಾಲಿನ ಶಿಕ್ಷಣಿಕ ವರ್ಷ ಆರಂಭಕ್ಕೆ ಕೆಲವೇ ದಿನಗಳ ಬಾಕಿ ಇವೆ. ಆದರೆ, ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಈ ಕೊರತೆಯನ್ನು ನೀಗಿಸಲು ಸರ್ಕಾರವು ರಾಜ್ಯಾದ್ಯಂತ 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದೆ.
ಮೇ 29ರಿಂದ ಶಾಲೆಗಳು ಆರಂಭವಾಗುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳು ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಮತ್ತು ನಿರಂತರತೆ ಇರಲಿ ಎಂಬ ಉದ್ದೇಶದಿಂದಾಗಿ ‘ಅತಿಥಿ ಶಿಕ್ಷಕ’ ಹುದ್ದೆಗಳಾಗಿ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
“ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ. ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತಿನ ಮೇಲೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳು: ಆಗಿದ್ದೇನು, ಆಗಬೇಕಿರುವುದೇನು?
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಪ್ರೌಢಶಾಲೆಗಳಿಗೆ 11,000 ಅತಿಥಿ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಲಾಗಿದೆ.ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನಕ್ಕಾಗಿ ಅವಶ್ಯವಿರುವ ಅನುದಾನ ಪಡೆಉಯಲು ಅಥಿತಿ ಶಿಕ್ಷಕರ ಜಿಲ್ಲಾ, ತಾಲೂಕುವಾರು ವಿವರಗಳೊಂದಿಗೆ ಪ್ರಸ್ತಾವವನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸರ್ಕಾರ ಸೂಚಿಸಿದೆ.