ಗುಲಬರ್ಗಾ ವಿವಿಯಲ್ಲಿ ರಚನೆಯಾದ ‘ಪರೀಕ್ಷಾ ಸುಧಾರಣಾ ಉಪಸಮಿತಿ’ಯ ಕಾರ್ಯವೈಖರಿಯು ವಿದ್ಯಾರ್ಥಿಗಳಿಗೆ ಭರವಸೆಯನ್ನು ಹುಟ್ಟಿಸಿದೆ
ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾದ ಬಳಿಕ ಗುಲಬರ್ಗಾ ವಿಶ್ವವಿದ್ಯಾನಿಲಯದ ಪರೀಕ್ಷಾ ಕಾರ್ಯವಿಧಾನದಲ್ಲಿ ಆಗಿದ್ದ ಅಧ್ವಾನಗಳು ಕೊನೆಗೂ ಬಗೆಹರಿಯುತ್ತಿರುವ ಆಶಾದಾಯಕ ಬೆಳವಣಿಗೆಯಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಉತ್ತರ ಪತ್ರಿಕೆಯ ವಿಚಾರದಲ್ಲಿ ಉಂಟಾಗಿದ್ದ ಸಮಸ್ಯೆಗಳು ಶೇ. 90ರಷ್ಟು ಬಗೆಹರಿದಿರುವುದಾಗಿ ವಿವಿಯ ಮೂಲಗಳು ಖಚಿತಪಡಿಸಿವೆ.
ಪರೀಕ್ಷಾ ಫಲಿತಾಂಶ ಗೊಂದಲಕ್ಕೆ ಶೇ. 60ರಷ್ಟು ವಿದ್ಯಾವಿದ್ಯಾನಿಲಯ, ಶೇ. 20ರಷ್ಟು ಕಾಲೇಜುಗಳ ಅವ್ಯವಸ್ಥೆ, ಶೇ. 20ರಷ್ಟು ಯುಯುಸಿಎಂಎಸ್ ಸಾಫ್ಟ್‌ವೇರ್‌ನಲ್ಲಾದ ದೋಷಗಳು ಕಾರಣವಾಗಿದ್ದವು. ಇದನ್ನು ಸರಿದಾರಿಗೆ ತರುವುದು ಸವಾಲಿನ ಸಂಗತಿಯಾಗಿತ್ತು.
ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‌ನಲ್ಲಿ ರಾಜಕೀಯ ಮುಖಂಡರು, ಅವರ ಬೆಂಬಲಿಗರೇ ತುಂಬಿರುತ್ತಿದ್ದರು. ಇದರಲ್ಲಿ ಕೊಂಚ ಬದಲಾವಣೆ ತಂದ ಸರ್ಕಾರ, ಸಿಂಡಿಕೇಟ್‌ನಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರರನ್ನು ಸೇರಿಸಿತು. ಈ ವೇಳೆಗೆ ಗುಲಬರ್ಗಾ ವಿವಿಯ ಸಾವಿರಾರು ವಿದ್ಯಾರ್ಥಿಗಳು ವರ್ಷವೇ ಕಳೆದರೂ ಪರೀಕ್ಷಾ ಫಲಿತಾಂಶ ಪಡೆಯದೆ ಪರಿತಪಿಸುತ್ತಿದ್ದರು. ಸಿಂಡಿಕೇಟ್ ಸಭೆಯ ಒತ್ತಾಯದ ಮೇರೆಗೆ ಗುಲಬರ್ಗಾ ವಿವಿಯ ಸಿಂಡಿಕೇಟ್‌ನಲ್ಲಿ ‘ಪರೀಕ್ಷಾ ಸುಧಾರಣಾ ಉಪಸಮಿತಿ’ಯನ್ನು ರೂಪಿಸಲಾಯಿತು. ವಿದ್ಯಾರ್ಥಿಗಳ ಗೊಂದಲವನ್ನು ಪರಿಹರಿಸುವ ಗುರುತರ ಜವಾಬ್ದಾರಿ ಉಪಸಮಿತಿಯ ಮುಂದಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಕಾರಣ, ವಿವಿಯ ವಿದ್ಯಾರ್ಥಿಗಳ ಫಲಿತಾಂಶ ಗೊಂದಲವು ನಿಧಾನಕ್ಕೆ ಬಗೆಹರಿಯುತ್ತಿದೆ.
ಪತ್ರಕರ್ತ ಸಿದ್ದಪ್ಪ ಮೂಲಗೆ ಅವರನ್ನು ಸಬ್ ಕಮಿಟಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ರಾಘವೇಂದ್ರ ಎಂ.ಭೈರಪ್ಪ, ಶ್ರೀದೇವಿ ಎಸ್.ಕಟ್ಟಿಮನಿ, ಸಿದ್ದಪ್ಪ ಸುಳ್ಳದ ಮತ್ತು ಉದಯಕಾಂತ ಪಾಟೀಲ ಸದಸ್ಯರಾಗಿದ್ದರು. ಎರಡು ತಿಂಗಳ ಅವಧಿಯಲ್ಲಿ 12 ಸಿಂಡಿಕೇಟ್ ಸಭೆಗಳು, ಉಪಸಮಿತಿಯ 5 ಸಭೆಗಳು ಜರುಗಿರುವುದು ಅದರ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.
ಸುಮಾರು 1,000 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದವು. ಒಟ್ಟು 45 ಪಾಕೆಟ್ ಇಲ್ಲವಾಗಿದ್ದವು. ಅವನ್ನೆಲ್ಲವನ್ನೂ ಹುಡುಕಿಕೊಡದಿದ್ದರೆ ಪ್ರಕರಣ ದಾಖಲಿಸುವುದಾಗಿ ವಿವಿಯ ಸಿಬ್ಬಂದಿಗೆ ಸಿಂಡಿಕೇಟ್ ಉಪಸಮಿತಿ ಎಚ್ಚರಿಸಿತ್ತು.
ಸುಮಾರು 8,000-9,000 ವಿದ್ಯಾರ್ಥಿಗಳ ಫಲಿತಾಂಶ ಬಾಕಿ ಉಳಿದಿತ್ತು. ಈಗ 4,000 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.
ಎನ್‌ಇಪಿ ಬಂದ ಮೇಲೆ ವಿದ್ಯಾರ್ಥಿಗಳ ಮರುಪರೀಕ್ಷೆಯೇ ಆಗಿರಲಿಲ್ಲ. ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಕಾಯುತ್ತಿದ್ದರು. ಈಗ ಮರುಪರೀಕ್ಷೆಗಳೂ ಜರುಗುತ್ತಿವೆ.
‘ಈದಿನ.ಕಾಂ’ ಜೊತೆ ಮಾತನಾಡಿದ ಉಪಸಮಿತಿಯ ಅಧ್ಯಕ್ಷ ಸಿದ್ದಪ್ಪ ಮೂಲಗೆ ಅವರು, “ಬಾಕಿ ಉಳಿದಿರುವ ನಾಲ್ಕರಿಂದ ಐದು ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನೊಂದು ತಿಂಗಳೊಳಗೆ ಪ್ರಕಟಿಸುತ್ತೇವೆ. ವಿವಿ ಸಿಬ್ಬಂದಿ, ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರೆಲ್ಲರ ಸಹಕಾರದಿಂದ ಸಮಸ್ಯೆ ಬಗೆಹರಿಯುತ್ತಿದೆ” ಎಂದು ತಿಳಿಸಿದರು.
ಸಿಂಡಿಕೇಟ್ ಸಭೆಗಳ ಕುರಿತು ವಿವರಿಸಿದ ಅವರು, “ಸಾಮಾನ್ಯವಾಗಿ ಒಂದು ವರ್ಷದಲ್ಲಿ 8 ಸಿಂಡಿಕೇಟ್ ಸಭೆಗಳು ನಡೆಯುತ್ತವೆ. ಆದರೆ ಈ ಬಾರಿ ಗುಲಬರ್ಗಾ ವಿವಿಯಲ್ಲಿ ಎರಡರಿಂದ ಮೂರು ತಿಂಗಳ ಒಳಗೆ ಮುಖ್ಯ ಸಿಂಡಿಕೇಟ್‌ನ 12 ಸಭೆಗಳು, ಪರೀಕ್ಷಾ ಉಪಸಮಿತಿಯ 5 ಸಭೆಗಳು ನಡೆದಿವೆ” ಎಂದು ವಿವರಿಸಿದರು.

ಇದನ್ನೂ ಓದಿರಿ: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಐದು ದಿನ ಭಾರಿ ಚಳಿ: ಹವಾಮಾನ ಇಲಾಖೆ ಮುನ್ಸೂಚನೆ
ಕುಲಸಚಿವರಾದ ಪ್ರೊ.ಮೇಧಾವಿನಿ ಎಸ್. ಕಟ್ಟಿ ಮಾತನಾಡಿ, “ಕಳೆದ 2 ವರ್ಷಗಳಿಂದ ಫಲಿತಾಂಶ ಪ್ರಕಟವಾಗಿರಲಿಲ್ಲ. ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಾದ ತೊಡಕುಗಳೆಲ್ಲ ಬಗೆಹರಿದಿವೆ. ನಮ್ಮಲ್ಲಿ 183 ಕಾಲೇಜುಗಳಿದ್ದು, ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅಲ್ಲಿನ ಗೊಂದಲಗಳನ್ನು ನಿವಾರಿಸುವ ಕೆಲಸ ಸಾಗುತ್ತಿದೆ. ಶೇ. 60 ಫಲಿತಾಂಶ ಬಂದಿರಲಿಲ್ಲ. ಹೀಗಾಗಿ ಪುನರ್ ಪರೀಕ್ಷೆ, ಪುನರ್ ಮೌಲ್ಯಮಾಪನ ನಡೆದಿರಲಿಲ್ಲ. ಉಪಸಮಿತಿ ಆದ ಮೇಲೆ ನಾವು ನಿರಂತರ ಸಭೆಗಳನ್ನು ನಡೆಸಿ ಶೇ.90ರಷ್ಟು ಫಲಿತಾಂಶ ಹೊರಬಿಟ್ಟಿದ್ದೇವೆ. ಶೇ.10ರಷ್ಟು ಫಲಿತಾಂಶ ಮಾತ್ರ ಬಾಕಿ ಇದೆ” ಎಂದು ಮಾಹಿತಿ ನೀಡಿದರು.
“ಕಾಲೇಜಿನ ಆಡಳಿತ ಮಂಡಳಿಗಳು ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿವೆ. ಕಳೆದುಹೋಗಿದ್ದ ಎಲ್ಲ ಉತ್ತರ ಪತ್ರಿಕೆಗಳು ಸಿಕ್ಕಿವೆ. ಇನ್ನೊಂದಿಷ್ಟು ಕೆಲಸಗಳು ಬಾಕಿ ಉಳಿದಿವೆ. ಅವುಗಳನ್ನು ಬಗೆಹರಿಸುವ ಕೆಲಸದಲ್ಲಿ ವಿವಿಯು ಸಕ್ರಿಯವಾಗಿದೆ” ಎಂದರು.
“ಎನ್‌ಇಪಿ ಬಂದು ಮೂರು ವರ್ಷ ಆಯಿತು. ಮರುಪರೀಕ್ಷೆ ಒಂದೂ ಆಗಿರಲಿಲ್ಲ. ಸಬ್ ಕಮಿಟಿ ಆದ ಮೇಲೆ ಮೊದಲ ಬ್ಯಾಚಿನ ಫಸ್ಟ್ ಮತ್ತು ಸೆಕೆಂಡರ್ ಸೆಮಿಸ್ಟರ್ ಮರುಪರೀಕ್ಷೆಗಳು ನಡೆದಿವೆ. ಮೊದಲ ಬ್ಯಾಚಿನ ನಾಲ್ಕನೇ ಸೆಮಿಸ್ಟರ್ ಮತ್ತು ಎರಡನೇ ಬ್ಯಾಚಿನ ಒಂದು ಹಾಗೂ ಎರಡನೇ ಸೆಮಿಸ್ಟರ್ ಪರೀಕ್ಷೆ, ಮೂರನೇ ಬ್ಯಾಚಿನ ಫಸ್ಟ್ ಸೆಮಿಸ್ಟರ್ ಮರುಪರೀಕ್ಷೆಗೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಉನ್ನುಳಿದ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಶೀಘ್ರವೇ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
2nd batch and 3rd batch nep 1st semester repeater exam innu nadadilla brother nan tamma idane avandu 1 varsa hengu haal madtare ivru helovrilla kelovrilla