ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಲು ಹೋದ ತನ್ನ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಹಲವು ಬಾರಿ ಅತ್ಯಾಚಾರವೆಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಆರೋಪಿಸಿದ್ದಾರೆ.
ಮೇ 1ರಂದು ಎಸ್‌ಐಟಿ ತಂಡ 44 ವರ್ಷದ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿದೆ.
ಮಾಧ್ಯಮವೊಂದು ವರದಿಸಿರುವ ಎಫ್‌ಐಆರ್ ದಾಖಲೆಯ ಮಾಹಿತಿಯಂತೆ, ಮಹಿಳೆ ತಾನು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾಗ ತನ್ನ ಭಾಗದ ಹಲವು ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡುವ ಸಲುವಾಗಿ ಶಾಸಕ ಹಾಗೂ ಸಂಸದರ ಮನೆಗೆ ಆಗಾಗ ತೆರಳುತ್ತಿದ್ದರು.
2021ರಲ್ಲಿ ನಡೆದ ಒಂದು ಘಟನೆಯನ್ನು ಮಹಿಳೆ ವಿವರಿಸಿದ್ದಾರೆ. ತಮ್ಮ ಭಾಗದ ಸ್ಥಳೀಯ ಕಾಲೇಜೊಂದರಲ್ಲಿ ಕೆಲವು ಮಹಿಳಾ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಪ್ರವೇಶ ದೊರಕಿಸಿಕೊಡುವಂತೆ ಹೋಗಿದ್ದರು. ಅಂದು ಸಂಸದರು ಕೆಲಸದಲ್ಲಿ ನಿರತರಾಗಿದ್ದು, ಮರುದಿನ ಬರುವಂತೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ರಾಡಿಯಲ್ಲಿ ಕಳೆದು ಹೋದದ್ದು ಹೆಣ್ಣಿನ ಘನತೆ ಅಷ್ಟೇ ಅಲ್ಲ, ʼಸಾಮಾಜಿಕ ಶೀಲʼ ಬೀದಿಗೆ ಬಿದ್ದಿದೆ
“ಮರು ದಿನ ನಾನು ಹಾಸನದಲ್ಲಿನ ಸಂಸದರ ಕಚೇರಿಗೆ ತೆರಳಿದೆ. ಹಲವು ಮಂದಿ ಇರುವುದರಿಂದ ಕಚೇರಿ ಸಿಬ್ಬಂದಿ ಮೊದಲ ಮಹಡಿಯಲ್ಲಿ ಕಾಯುವಂತೆ ತಿಳಿಸಿದರು. ಪ್ರಜ್ವಲ್ ಎಲ್ಲ ಮಹಿಳೆಯರನ್ನು ಕಳಿಸಿದ ನಂತರ ನನ್ನನ್ನು ಕೊಠಡಿಯೊಳಗೆ ಕರೆದ. ಕೊಠಡಿಯೊಳಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ನನ್ನ ಕೈಹಿಡಿದು ಎಳೆದುಕೊಂಡು ಕೊಠಡಿಯ ಬಾಗಿಲನ್ನು ಮುಚ್ಚಿದ” ಎಂದು ಸಂತ್ರಸ್ತೆ ದಾಖಲಿಸಿದ್ದಾರೆ.
“ನಾನು ಸಂಸದನನ್ನು ಕೊಠಡಿಯ ಬಾಗಿಲು ಏಕೆ ಮುಚ್ಚಿದರೆಂದು ಕೇಳಿದೆ. ಸಂಸದ ಏನು ಆಗುವುದಿಲ್ಲ ಎಂದು ಮಂಚದ ಮೇಲೆ ಕೂರಿಸಿದರು. ನಿನ್ನ ಪತಿಗೆ ಕಡಿಮೆ ಮಾತನಾಡಲು ಹೇಳು ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದರು. ನಿನ್ನ ಪತಿಯಿಂದ ನನ್ನ ತಾಯಿ ಭವಾನಿ ರೇವಣ್ಣ ಅವರಿಗೆ ಎಂಎಲ್‌ಎ ಟಿಕೆಟ್ ತಪ್ಪಿ ಹೋಯಿತು. ನಿನ್ನ ಪತಿ ರಾಜಕೀಯವಾಗಿ ಮೇಲೆ ಬರಬೇಕಾದರೆ ನಾನು ಹೇಳಿದಂತೆ ಕೇಳಬೇಕು ಎಂದು ಪ್ರಜ್ವಲ್ ಎಚ್ಚರಿಸಿದ” ಎಂದು ಮಹಿಳೆ ಹೇಳಿದ್ದಾರೆ.
“ನಂತರ ಪ್ರಜ್ವಲ್ ನನ್ನನ್ನು ಮಂಚದ ಮೇಲೆ ತಳ್ಳಿ ನನ್ನನ್ನು ವಿವಸ್ತ್ರಳನ್ನಾಗಿ ಮಾಡಿದ. ನಾನು ನಿರಾಕರಿಸಿ ಕಿರುಚಿದ್ದಕ್ಕೆ ನನ್ನ ಬಳಿ ಗನ್ ಇರುವುದಾಗಿ ಹೇಳಿ ಮುಂದೆ ನೀನು, ನಿನ್ನ ಪತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಜೀವ ಬೆದರಿಕೆಯೊಡ್ಡಿದ” ಎಂದು ಮಹಿಳೆ ಪೊಲೀಸರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಅನಂತರ ಸಂಸದ ನನ್ನ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವೆಸಗಿದ. ಅದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡ. ಇದರ ಬಗ್ಗೆ ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಸಿದ. ಈ ಘಟನೆ ನಡೆದ ನಂತರದಲ್ಲಿ ಆಗಾಗ ನನ್ನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದ. ವಿಡಿಯೋ ಕರೆಯ ವೇಳೆ ನನ್ನನ್ನು ಬೆತ್ತಲಾಗುವಂತೆ ಹೇಳುತ್ತಿದ್ದ. ಇದಲ್ಲದೆ ಹಲವು ಬಾರಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ” ಎಂದು ಮಹಿಳೆ ಹೇಳಿದ್ದಾರೆ.
ಸಂಸದನ ಬಗ್ಗೆ ಭಯಗೊಂಡ ಕಾರಣ ಮಹಿಳೆ ಈ ಘಟನೆಯನ್ನು ಎಲ್ಲೂ ಹೇಳಿರಲಿಲ್ಲ. ಲೈಂಗಿಕ ಹಗರಣ ಬೆಳಕಿಗೆ ಬಂದು ಕರ್ನಾಟಕ ಸರ್ಕಾರ ಎಸ್‌ಐಟಿ ರಚನೆಯನ್ನು ಮಾಡಿದ ನಂತರ ವಿಶೇಷ ತನಿಖಾ ತಂಡದ ಮುಂದೆ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಈ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣನ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್) (ಒಂದೇ ಮಹಿಳೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗುವುದು), 506(ಬೆದರಿಸುವಿಕೆ), 354ಎ(1)(ದೈಹಿಕ ಸಂಪರ್ಕ ಹಾಗೂ ಇಷ್ಟವಿಲ್ಲದ ಲೈಂಗಿಕ ಚಟುವಟಿಕೆಗಳು), 354ಬಿ (ಹಲ್ಲೆ ಅಥವಾ ವಿವಸ್ತ್ರಗೊಳಿಸುವ ಉದ್ದೇಶದೊಂದಿಗೆ ಅಪರಾಧವೆಸಗುವುದು) ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಜ್ವಲ್ ಹಾಗೂ ಆತನ ತಂದೆ ಹೆಚ್ ಡಿ ರೇವಣ್ಣ ವಿರುದ್ಧ ಏ.28 ರಂದು ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಕೂಡ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮೇ.2 ರಂದು ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಹೆಚ್ ಡಿ ರೇವಣ್ಣ ಹಾಗೂ ಆತನ ಸಹಾಯಕನ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
