ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರು ತಳುಕು ಹಾಕಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಕುಮಾರಸ್ವಾಮಿ ಮತ್ತು ಪ್ರಕರಣದ ಆರೋಪಿ ನಡುವಿನ ಸಂಭಾವ್ಯ ಸಂಪರ್ಕದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. “ಪ್ರಕರಣದ ಪ್ರಮುಖ ಆರೋಪಿ ರಿತೇಶ್ ಪಾಂಡೆ ಎಂಬಾತ ಕುಮಾರಸ್ವಾಮಿ ಅವರ ನಿವಾಸದಲ್ಲಿ ಉಳಿದುಕೊಂಡಿದ್ದ. ಇದೇ ವೇಳೆ, ಅಲ್ಲಿ ಮೊಬೈಲ್ ಹಸ್ತಾಂತರ ಪ್ರಕ್ರಿಯೆಯೂ ನಡೆದಿದ್ದು, ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆ ಮೇರೆಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ” ಎಂದು ಬಹಿರಂಗಪಡಿಸಿದ್ದಾರೆ.
“ಈ ಕೃತ್ಯಕ್ಕೆ ಬಳಸಲಾದ ಮೊಬೈಲ್ ಅನ್ನು ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಅವರು ಸೆಪ್ಟೆಂಬರ್ 26 ರಂದು ದೆಹಲಿಯಲ್ಲಿ ಖರೀದಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ” ಎಂದಿದ್ದಾರೆ.
“ವಿಡಿಯೋ ಅಪ್ಲೋಡ್ ಮಾಡಲು ಸಿಮ್ ಕಾರ್ಡ್ ಬಳಸುವ ಯೋಜನೆ ಆರೋಪಿಗಳಿಗೆ ಇರಲಿಲ್ಲ. ಹೀಗಾಗಿ ಕೃತ್ಯ ನಡೆದ ಸಮಯದಲ್ಲಿ ಮೊಬೈಲ್‌ನಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲವಾದರೂ, ಸಿಸಿಬಿ ತನಿಖಾಧಿಕಾರಿಗಳು ಮೊಬೈಲ್ ಖರೀದಿಸಿದ ಸಂಪೂರ್ಣ ಜಾಲವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಜೊತೆಗೆ ಆರೋಪಿಗಳಾದ ರಿತೇಶ್ ಮತ್ತು ಪ್ರಜ್ವಲ್ ಪ್ರಸಾದ್ ನಡುವೆ ಹಣಕಾಸಿನ ವಹಿವಾಟು ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ” ಎಂದು ವಿವರಿಸಿದ್ದಾರೆ.
“ವಿಚಾರಣೆ ವೇಳೆ ಆರೋಪಿ ರಿತೇಶ್ ಕುಮಾರ್ ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಪ್ರಜ್ವಲ್ ಪ್ರಸಾದ್ ಸೂಚನೆಯಂತೆ ತಾನು ಮೊಬೈಲ್ ಖರೀದಿಸಿದ್ದಾಗಿ ಮತ್ತು ಕೇಂದ್ರ ಸಚಿವರ ಮನೆ ಬಳಿ ಬರುವಂತೆ ತಿಳಿಸಿದ ಕಾರಣ ಅಲ್ಲಿಗೆ ತೆರಳಿ ಮೊಬೈಲ್ ಹಸ್ತಾಂತರಿಸಿದ್ದಾಗಿ ಆತ ತಿಳಿಸಿದ್ದಾನೆ” ಎಂದು ವಿವರಿಸಿದ್ದಾರೆ.
ಸದ್ಯ ಸಿಸಿಬಿ ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಪ್ರಸಾದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸವನ್ನು ಸಿಸಿಬಿ ಪೊಲೀಸರು ಪರಿಶೀಲಿಸುವ ಸಾಧ್ಯತೆಯಿದೆ.




