ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಅಡಿಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣ ದಾಖಲಿಸಿಕೊಂಡಿದೆ.
2026ರ ಅಕ್ಟೋಬರ್ 12ರಂದು ಕಾಂಗ್ರೆಸ್ ಕೇರಳ ಘಟಕದ ಅಧಿಕೃತ ‘X’ ಖಾತೆಯಿಂದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ವಿರುದ್ಧ ಪೋಸ್ಟ್ ಒಂದನ್ನು ಮಾಡಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದಲ್ಲದೆ, ಭಾರಿ ಟೀಕೆಗೆ ಗುರಿಯಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆ ಪೋಸ್ಟ್ ಅನ್ನು ತಕ್ಷಣವೇ ಡಿಲೀಟ್ ಮಾಡಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಕೀಲ ವಿನೀತ್ ಜಿಂದಾಲ್ ಅವರು ಅಕ್ಟೋಬರ್ 13 ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ನ್ಯಾಯಾಂಗ ನಿಂದನೆ ನಡಾವಳಿಗಳನ್ನು ಪ್ರಾರಂಭಿಸುವಂತೆ ಕೋರಿದ್ದರು. ಈ ದೂರನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 30 ರಂದು ರಿಟ್ ಅರ್ಜಿಯಾಗಿ ನೋಂದಾಯಿಸಿಕೊಂಡಿದೆ.
ವಕೀಲ ವಿನೀತ್ ಅವರ ಅದೇ ದೂರಿನಲ್ಲಿ, ಅಕ್ಟೋಬರ್ 12ರ ಸಂಜೆ ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ನಾಯಕರು ಭಾಗವಹಿಸಿದ್ದ ರಾಜಕೀಯ ಪ್ರತಿಭಟನೆ ಮತ್ತು ಘೋಷಣೆಗಳ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಈ ಪ್ರತಿಭಟನೆಯು ಯಾವುದೇ ಪೂರ್ವ ಅನುಮತಿಯಿಲ್ಲದೆ ನಡೆದಿದೆಯೇ ಮತ್ತು ಇದರಿಂದ ವಕೀಲರು, ವ್ಯಾಜ್ಯದಾರರು, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಕ್ತ ಸಂಚಾರಕ್ಕೆ ಅಡಚಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಇನ್ನು, ಈ ವಿವಾದಕ್ಕೆ ಸ್ಪಷ್ಟನೆ ನೀಡಿರುವ KPCC ಅಧ್ಯಕ್ಷ ಸನ್ನಿ ಜೋಸೆಫ್ ಅವರು, ಪಕ್ಷದ ಅಧಿಕೃತ ‘X’ ಖಾತೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಆ ಜವಾಬ್ದಾರಿಯಿಂದ ತಕ್ಷಣವೇ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಯಕರ ಗಮನಕ್ಕೆ ತರದೆ, ಅವರ ಒಪ್ಪಿಗೆ ಅಥವಾ ಸಲಹೆಯಿಲ್ಲದೆ ಮಾಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗದ ನಿಷ್ಪಕ್ಷಪಾತತೆಯ ಬಗ್ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಾಗಲಿ ಅಥವಾ ಅಸಮಾಧಾನವಾಗಲಿ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.



