ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ ಜನಚಳವಳಿಗಳು, ಪ್ರಾದೇಶಿಕ ಅಸ್ಮಿತೆಯ ಹೋರಾಟಗಳು ಹಾಗೂ ವಸಾಹತುಶಾಹಿಯ ವಿರುದ್ಧದ ಸಂಘರ್ಷಗಳು ಈ ದಿನದ ವಿಶೇಷ ಮಹತ್ವವನ್ನು ಸಾರಿವೆ.
ನವೆಂಬರ್ 1 – ಕನ್ನಡಿಗರಿಗೆ ಸಂಭ್ರಮದ ಕರ್ನಾಟಕ ರಾಜ್ಯೋತ್ಸವದ ದಿನ. ನಾಡಗೀತೆ, ಕನ್ನಡ ಬಾವುಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕನ್ನಡನಾಡಿನ ಇತಿಹಾಸವನ್ನು ಸ್ಮರಿಸುವ ಸಂಭ್ರಮ ಇಂದು ರಾಜ್ಯದಾದ್ಯಂತ ಮನೆ ಮಾಡಿದೆ. ಅಂದಹಾಗೆ, ಈ ದಿನದ ವಿಶೇಷತೆ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ಛತ್ತೀಸ್ಗಢ, ಹರಿಯಾಣ, ಕೇರಳ, ಮಧ್ಯಪ್ರದೇಶ, ಪಂಜಾಬ್ ಹಾಗೂ ತಮಿಳುನಾಡು ಸೇರಿದಂತೆ ಎಂಟು ರಾಜ್ಯಗಳ ರಚನೆ – ಮರುರಚನೆಯ ಇತಿಹಾಸವೂ ಬೆಸೆದುಕೊಂಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದೆಹಲಿ, ಲಕ್ಷದ್ವೀಪ ಹಾಗೂ ಪುದುಚೇರಿ ಸೇರಿದಂತೆ ಐದು ಕೇಂದ್ರಾಡಳಿತ ಪ್ರದೇಶಗಳೂ ಇದೇ ದಿನ ಐತಿಹಾಸಿಕ ಮಹತ್ವ ಹೊಂದಿವೆ.
1956: ಭಾರತದ ರಾಜಕೀಯ ನಕ್ಷೆಯನ್ನೇ ಬದಲಿಸಿದ ವರ್ಷ
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ಇಂದಿನಂತೆ ರಾಜ್ಯಗಳ ಗಡಿಗಳಿರಲಿಲ್ಲ. ಬ್ರಿಟಿಷರ ಆಡಳಿತದ ಪ್ರಾಂತ್ಯಗಳು, ರಾಜಮನೆತನಗಳ ಸಂಸ್ಥಾನಗಳು ಹಾಗೂ ವಿವಿಧ ಆಡಳಿತ ಪ್ರದೇಶಗಳು ಸೇರಿ ಭಾರತ ರೂಪುಗೊಂಡಿತ್ತು. ಆದರೆ, ಈ ಗಡಿಗಳು ಜನರ ಭಾಷೆ ಮತ್ತು ಸಂಸ್ಕೃತಿಗೆ ಅನುಗುಣವಾಗಿರಲಿಲ್ಲ.
ಕನ್ನಡಿಗರು ಬೇರೆಬೇರೆ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ತೆಲುಗು, ಮಲಯಾಳಂ ಹಾಗೂ ಇತರ ಭಾಷಿಕರೂ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಹೀಗಾಗಿ ತಮ್ಮ ಭಾಷೆಯಲ್ಲಿ ಆಡಳಿತ, ಶಿಕ್ಷಣ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಮಾನ್ಯತೆ ನೀಡಬೇಕೆಂಬ ಬೇಡಿಕೆಗಳು ಬಲಗೊಂಡವು.
ತೆಲುಗು ಭಾಷಿಕರ ಪ್ರತ್ಯೇಕ ರಾಜ್ಯದ ಹೋರಾಟ ಇದರಲ್ಲಿ ಮಹತ್ವದ ಪಾತ್ರ ವಹಿಸಿತು. ಪೊಟ್ಟಿ ಶ್ರೀರಾಮುಲು ಅವರ ಉಪವಾಸ ಸತ್ಯಾಗ್ರಹ ಮತ್ತು 1952ರಲ್ಲಿ ಅವರ ನಿಧನದ ನಂತರ ಪ್ರತ್ಯೇಕ ಆಂಧ್ರ ರಾಜ್ಯದ ಬೇಡಿಕೆ ತೀವ್ರಗೊಂಡಿತು. ಪರಿಣಾಮ, 1953ರ ಅಕ್ಟೋಬರ್ 1ರಂದು ಆಂಧ್ರ ರಾಜ್ಯ ರಚನೆಯಾಯಿತು.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯಗಳ ಮರುವಿಂಗಡನಾ ಆಯೋಗವನ್ನು ರಚಿಸಿತು. ಆಯೋಗದ ಶಿಫಾರಸುಗಳ ಆಧಾರದಲ್ಲಿ 1956ರ ರಾಜ್ಯಗಳ ಮರುವಿಂಗಡನಾ ಕಾಯ್ದೆ ಜಾರಿಗೆ ಬಂದಿತು.
1956ರ ನವೆಂಬರ್ 1ರಂದು ಭಾರತದ ಆಡಳಿತಾತ್ಮಕ ನಕ್ಷೆಯಲ್ಲಿ ಮಹತ್ವದ ಬದಲಾವಣೆಗಳಾದವು. ದೇಶವು 14 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮರರಚನೆಯಾಯಿತು.
ಕರ್ನಾಟಕ: ಕನ್ನಡಿಗರ ಏಕೀಕರಣದ ಕನಸು ನನಸಾದ ದಿನ
ಕರ್ನಾಟಕದ ಇಂದಿನ ಸ್ವರೂಪ ದಶಕಗಳ ಕನ್ನಡ ಏಕೀಕರಣ ಚಳವಳಿಯ ಫಲವಾಗಿದೆ. ಸ್ವಾತಂತ್ರ್ಯಕ್ಕೂ ಮೊದಲು ಕನ್ನಡ ಭಾಷಿಕ ಪ್ರದೇಶಗಳು ಮೈಸೂರು ಸಂಸ್ಥಾನ, ಬಾಂಬೆ ಪ್ರಾಂತ್ಯ, ಹೈದರಾಬಾದ್ ನಿಜಾಮರ ಆಡಳಿತ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಸೇರಿದಂತೆ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದವು.
ಅಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರಂತಹ ನಾಯಕರು, ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದವು. ಎಲ್ಲದರ ಫಲವಾಗಿ, 1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ಆದರೆ, ಈ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದದ್ದು 1973ರ ನವೆಂಬರ್ 1ರಂದು.
2026ಕ್ಕೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣವಾಗಿ 70 ವರ್ಷಗಳು ಪೂರ್ಣಗೊಂಡಿವೆ. ಈ ಸಂಭ್ರಮದ ಜೊತೆಗೆ ಪ್ರಾದೇಶಿಕ ಅಸಮಾನತೆ, ಕನ್ನಡ ಮಾಧ್ಯಮ ಶಿಕ್ಷಣ ಹಾಗೂ ಸ್ಥಳೀಯ ಉದ್ಯೋಗಾವಕಾಶಗಳ ಕುರಿತು ಆತ್ಮಾವಲೋಕನದ ಅಗತ್ಯವೂ ಇದೆ.
ಕೇರಳ: ಮಲಯಾಳಂ ಭಾಷಿಕರ ಏಕೀಕರಣ
ಕರ್ನಾಟಕದಂತೆಯೇ ಕೇರಳವೂ 1956ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದಿತು. ಈ ದಿನವನ್ನು ಅಲ್ಲಿ ‘ಕೇರಳ ಪಿರವಿ’ ಎಂದು ಆಚರಿಸಲಾಗುತ್ತದೆ.
ಈ ಹಿಂದೆ ಮಲಯಾಳಂ ಭಾಷಿಕ ಪ್ರದೇಶಗಳು ತಿರುವಾಂಕೂರು, ಕೊಚ್ಚಿನ್ ಹಾಗೂ ಮದ್ರಾಸ್ ಪ್ರಾಂತ್ಯದ ಮಲಬಾರ್ ಪ್ರದೇಶಗಳಲ್ಲಿ ಹಂಚಿಹೋಗಿದ್ದವು. ಭಾಷಾವಾರು ಮರುರಚನೆಯ ಸಂದರ್ಭದಲ್ಲಿ ಈ ಪ್ರದೇಶಗಳನ್ನು ಒಗ್ಗೂಡಿಸಿ ಕೇರಳ ರಾಜ್ಯ ರಚಿಸಲಾಯಿತು.
ಅದೇ ಸಮಯದಲ್ಲಿ ತಮಿಳು ಭಾಷಿಕ ಕನ್ಯಾಕುಮಾರಿ ಪ್ರದೇಶವನ್ನು ಮದ್ರಾಸ್ ರಾಜ್ಯಕ್ಕೆ ಸೇರಿಸಲಾಯಿತು. ನಂತರದ ದಶಕಗಳಲ್ಲಿ ಶಿಕ್ಷಣ, ಆರೋಗ್ಯ, ಭೂಸುಧಾರಣೆ ಹಾಗೂ ಸಾಮಾಜಿಕ ಕಲ್ಯಾಣದ ಮೂಲಕ ಕೇರಳ ತನ್ನದೇ ಆದ ಅಭಿವೃದ್ಧಿ ಮಾದರಿಯನ್ನು ರೂಪಿಸಿಕೊಂಡಿತು.
ಆಂಧ್ರಪ್ರದೇಶ: ಏಕೀಕರಣ ಮತ್ತು ತೆಲಂಗಾಣ ವಿಭಜನೆ
ಆಂಧ್ರಪ್ರದೇಶದ ಇತಿಹಾಸವು ಭಾಷಾವಾರು ರಾಜ್ಯಗಳ ಹೋರಾಟದೊಂದಿಗೆ ನೇರ ಸಂಬಂಧ ಹೊಂದಿದೆ. 1953ರಲ್ಲಿ ರಚನೆಯಾಗಿದ್ದ ಆಂಧ್ರ ರಾಜ್ಯವನ್ನು, 1956ರ ನವೆಂಬರ್ 1ರಂದು ಹಿಂದಿನ ಹೈದರಾಬಾದ್ ರಾಜ್ಯದ ತೆಲುಗು ಭಾಷಿಕ ತೆಲಂಗಾಣ ಪ್ರದೇಶದೊಂದಿಗೆ ವಿಲೀನಗೊಳಿಸಿ ಆಂಧ್ರಪ್ರದೇಶ ರಚಿಸಲಾಯಿತು.
ಆದರೆ, ಒಂದೇ ಭಾಷೆ ಮಾತನಾಡುವ ಜನರ ನಡುವೆ ಪ್ರಾದೇಶಿಕ ಅಭಿವೃದ್ಧಿ, ಉದ್ಯೋಗ, ನೀರಾವರಿ ಹಾಗೂ ಸಂಪನ್ಮೂಲಗಳ ಹಂಚಿಕೆಯ ಕುರಿತು ಅಸಮಾನತೆಗಳು ಮುಂದುವರಿದವು.
ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತೆಲಂಗಾಣ ಚಳವಳಿ ಬಲಗೊಂಡು, 2014ರ ಜೂನ್ 2ರಂದು ತೆಲಂಗಾಣ ಪ್ರತ್ಯೇಕ ರಾಜ್ಯವಾಯಿತು.
ತಮಿಳುನಾಡು: ಎರಡು ಐತಿಹಾಸಿಕ ದಿನಗಳ ವಿಶೇಷತೆ
ತಮಿಳುನಾಡಿನ ಇತಿಹಾಸದಲ್ಲಿಯೂ 1956ರ ನವೆಂಬರ್ 1 ಮಹತ್ವದ್ದು. ಅಂದು ಭಾಷಾವಾರು ಮರುರಚನೆಯ ಮೂಲಕ ಮದ್ರಾಸ್ ರಾಜ್ಯದ ಗಡಿಗಳನ್ನು ಬದಲಾಯಿಸಲಾಯಿತು. ಆದರೆ, ಆಗ ರಾಜ್ಯಕ್ಕೆ ತಮಿಳುನಾಡು ಎಂಬ ಹೆಸರಿರಲಿಲ್ಲ. ದ್ರಾವಿಡ ಚಳವಳಿ ಮತ್ತು ತಮಿಳು ಭಾಷಾ ಅಸ್ಮಿತೆಯ ಹೋರಾಟಗಳ ಪರಿಣಾಮವಾಗಿ 1967ರ ಜುಲೈ 18ರಂದು ಮದ್ರಾಸ್ ರಾಜ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು. 1969ರಲ್ಲಿ ಹೆಸರು ಬದಲಾವಣೆ ಕಾನೂನಾತ್ಮಕವಾಗಿ ಜಾರಿಗೆ ಬಂತು.
ಹೀಗಾಗಿ, ನವೆಂಬರ್ 1 ಭಾಷಾವಾರು ಗಡಿ ಮರುರಚನೆಯ ದಿನವಾದರೆ, ಜುಲೈ 18 ತಮಿಳುನಾಡು ಎಂಬ ಹೆಸರಿನ ನಿರ್ಣಯಕ್ಕೆ ಸಂಬಂಧಿಸಿದ ದಿನವಾಗಿದೆ. ರಾಜ್ಯದಲ್ಲಿ ಈ ಎರಡೂ ದಿನಗಳ ಐತಿಹಾಸಿಕ ಮಹತ್ವವನ್ನು ಸ್ಮರಿಸಲಾಗುತ್ತದೆ.
ಮಧ್ಯಪ್ರದೇಶ ಮತ್ತು ಛತ್ತೀಸ್ಗಢ: ಒಂದೇ ದಿನದ ಎರಡು ಇತಿಹಾಸಗಳು
1956ರ ನವೆಂಬರ್ 1ರಂದು ಹಿಂದಿನ ಮಧ್ಯಪ್ರದೇಶ, ಮಧ್ಯಭಾರತ, ವಿಂಧ್ಯಪ್ರದೇಶ ಹಾಗೂ ಭೋಪಾಲ್ ಸೇರಿದಂತೆ ವಿವಿಧ ಆಡಳಿತ ಪ್ರದೇಶಗಳನ್ನು ಮರುಸಂಘಟಿಸಿ ಹೊಸ ಮಧ್ಯಪ್ರದೇಶ ರಾಜ್ಯವನ್ನು ರೂಪಿಸಲಾಯಿತು.
ನಂತರ, 2000ರ ನವೆಂಬರ್ 1ರಂದು ಮಧ್ಯಪ್ರದೇಶದಿಂದ ಛತ್ತೀಸ್ಗಢವನ್ನು ಪ್ರತ್ಯೇಕಿಸಿ ಭಾರತದ 26ನೇ ರಾಜ್ಯವನ್ನಾಗಿ ರಚಿಸಲಾಯಿತು. ಛತ್ತೀಸ್ಗಢದ ಪ್ರತ್ಯೇಕ ರಾಜ್ಯದ ಬೇಡಿಕೆಯ ಹಿಂದೆ ಬುಡಕಟ್ಟು ಸಮುದಾಯಗಳ ಅಸ್ಮಿತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸ್ಥಳೀಯ ಸಂಪನ್ಮೂಲಗಳ ಮೇಲೆ ಹಕ್ಕು ಪಡೆಯುವ ಆಶಯಗಳಿದ್ದವು.
ಪಂಜಾಬ್ ಮತ್ತು ಹರಿಯಾಣ: ಭಾಷಿಕ ಹೋರಾಟದಿಂದ ಹೊಸ ರಾಜ್ಯ
1947ರ ದೇಶ ವಿಭಜನೆಯ ನಂತರ ಪಂಜಾಬ್ನಲ್ಲಿ ಭಾಷಿಕ ಮತ್ತು ಪ್ರಾದೇಶಿಕ ಮರುರಚನೆಯ ಬೇಡಿಕೆ ಹೆಚ್ಚಾಯಿತು. ಪಂಜಾಬಿ ಭಾಷಿಕರ ಪ್ರತ್ಯೇಕ ರಾಜ್ಯಕ್ಕಾಗಿ ‘ಪಂಜಾಬಿ ಸುಬಾ’ ಚಳವಳಿ ನಡೆಯಿತು. ಅಕಾಲಿದಳ ಸೇರಿದಂತೆ ವಿವಿಧ ಸಂಘಟನೆಗಳು ಈ ಹೋರಾಟದಲ್ಲಿ ಪಾತ್ರ ವಹಿಸಿದ್ದವು.
ಪರಿಣಾಮ, 1966ರ ನವೆಂಬರ್ 1ರಂದು ಹಿಂದಿನ ಪಂಜಾಬ್ನ ಹಿಂದಿ ಭಾಷಿಕ ಪ್ರದೇಶಗಳನ್ನು ಪ್ರತ್ಯೇಕಿಸಿ ಹರಿಯಾಣ ರಾಜ್ಯ ರಚಿಸಲಾಯಿತು. ಕೆಲವು ಪರ್ವತ ಪ್ರದೇಶಗಳನ್ನು ಹಿಮಾಚಲ ಪ್ರದೇಶಕ್ಕೆ ಸೇರಿಸಲಾಯಿತು. ಪಂಜಾಬ್ ಹೊಸ ಗಡಿಗಳೊಂದಿಗೆ ಮುಂದುವರಿಯಿತು.
ಈ ಲೇಖನ ಓದಿದ್ದೀರಾ?: ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು
2026ಕ್ಕೆ ಪಂಜಾಬ್ ಮರುರಚನೆ ಮತ್ತು ಹರಿಯಾಣ ರಾಜ್ಯ ಸ್ಥಾಪನೆಯಾಗಿ 60 ವರ್ಷಗಳು ಪೂರ್ಣಗೊಂಡಿವೆ. ಆದರೂ, ಎರಡೂ ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ಮತ್ತು ಚಂಡೀಗಢದ ಸ್ಥಾನಮಾನದ ವಿವಾದಗಳು ಇಂದಿಗೂ ಮುಂದುವರಿದಿವೆ.
ಚಂಡೀಗಢ ಮತ್ತು ದೆಹಲಿ: ಕೇಂದ್ರಾಡಳಿತ ಪ್ರದೇಶಗಳ ವಿಶೇಷ ಇತಿಹಾಸ
ಪಂಜಾಬ್–ಹರಿಯಾಣ ಮರುರಚನೆಯ ಸಂದರ್ಭದಲ್ಲಿ 1966ರ ನವೆಂಬರ್ 1ರಂದು ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ವಿಶೇಷವೆಂದರೆ, ಚಂಡೀಗಢ ಇಂದಿಗೂ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ.
ದೆಹಲಿಯಲ್ಲಿಯೂ 1956ರ ನವೆಂಬರ್ 1ರಂದು ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆಯಿತು. ಹಿಂದೆ ‘ಸಿ ವರ್ಗದ ರಾಜ್ಯ’ವಾಗಿದ್ದ ದೆಹಲಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಯಿತು. ನಂತರ, 1991ರ ಸಂವಿಧಾನ ತಿದ್ದುಪಡಿಯ ಮೂಲಕ ದೆಹಲಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು.
ಅಂಡಮಾನ್–ನಿಕೋಬಾರ್ ಮತ್ತು ಲಕ್ಷದ್ವೀಪ: ದ್ವೀಪಗಳ ಆಡಳಿತಾತ್ಮಕ ಗುರುತು
1956ರ ನವೆಂಬರ್ 1ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಪಡೆದವು.
ಅಂತೆಯೇ, ಲಕ್ಷದ್ವೀಪವೂ 1956ರ ನವೆಂಬರ್ 1ರಂದು ಮದ್ರಾಸ್ ರಾಜ್ಯದಿಂದ ಪ್ರತ್ಯೇಕಗೊಂಡು ಕೇಂದ್ರಾಡಳಿತ ಪ್ರದೇಶವಾಯಿತು. ಆಗ ‘ಲಕ್ಕದೀವ್, ಮಿನಿಕಾಯ್ ಹಾಗೂ ಅಮಿನಿದೀವಿ ದ್ವೀಪಗಳು’ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಈ ಪ್ರದೇಶವನ್ನು 1973ರಲ್ಲಿ ಲಕ್ಷದ್ವೀಪ ಎಂದು ಮರುನಾಮಕರಣ ಮಾಡಲಾಯಿತು.
ಪುದುಚೇರಿ: ಫ್ರೆಂಚ್ ವಸಾಹತುಶಾಹಿಯಿಂದ ವಿಮೋಚನೆಯ ದಿನ
ಪುದುಚೇರಿಯ ನವೆಂಬರ್ 1ರ ಇತಿಹಾಸ ಉಳಿದ ಪ್ರದೇಶಗಳಿಗಿಂತ ಭಿನ್ನವಾಗಿದೆ. ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಪುದುಚೇರಿ, ಕಾರೈಕಾಲ್, ಮಾಹೆ ಹಾಗೂ ಯಾನಂ ಪ್ರದೇಶಗಳು ಫ್ರೆಂಚ್ ಆಡಳಿತದಲ್ಲಿಯೇ ಮುಂದುವರಿದಿದ್ದವು.
ಸ್ಥಳೀಯ ಜನರ ಹೋರಾಟ ಮತ್ತು ಭಾರತದೊಂದಿಗೆ ವಿಲೀನಗೊಳ್ಳಬೇಕೆಂಬ ಬೇಡಿಕೆಯ ಪರಿಣಾಮವಾಗಿ 1954ರ ನವೆಂಬರ್ 1ರಂದು ಫ್ರೆಂಚ್ ಆಡಳಿತದಿಂದ ಅಧಿಕಾರ ಹಸ್ತಾಂತರ ನಡೆಯಿತು. ಆದರೂ, ಕಾನೂನಾತ್ಮಕ ಅಧಿಕಾರ ಹಸ್ತಾಂತರ ಪೂರ್ಣಗೊಂಡದ್ದು 1962ರ ಆಗಸ್ಟ್ 16ರಂದು.
ಹೀಗಾಗಿ, ನವೆಂಬರ್ 1ಅನ್ನು ಪುದುಚೇರಿಯಲ್ಲಿ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
ನವೆಂಬರ್ 1ರೊಂದಿಗೆ ಬೆಸೆದುಕೊಂಡಿರುವ ಈ ಎಲ್ಲ ಇತಿಹಾಸಗಳಲ್ಲಿ ಒಂದು ಮಹತ್ವದ ಸಾಮ್ಯತೆಯಿದೆ. ಅದು; ಜನರು ತಮ್ಮ ಭಾಷೆ, ಸಂಸ್ಕೃತಿ, ಪ್ರಾದೇಶಿಕ ಅಸ್ಮಿತೆ ಹಾಗೂ ಆಡಳಿತಾತ್ಮಕ ಹಕ್ಕುಗಳಿಗಾಗಿ ಹೋರಾಡಿದ್ದಾರೆ ಎಂಬುದು.
ಕನ್ನಡ ಏಕೀಕರಣ ಚಳವಳಿ, ಐಕ್ಯ ಕೇರಳದ ಆಶಯ, ತೆಲುಗು ಭಾಷಿಕರ ಹೋರಾಟ, ಪಂಜಾಬಿ ಸುಬಾ ಚಳವಳಿ, ಛತ್ತೀಸ್ಗಢದ ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಪುದುಚೇರಿಯ ವಿಮೋಚನಾ ಹೋರಾಟ — ಇವೆಲ್ಲವೂ ಜನರ ರಾಜಕೀಯ ಮತ್ತು ಸಾಂಸ್ಕೃತಿಕ ಆಶಯಗಳ ಅಭಿವ್ಯಕ್ತಿಗಳು.



