ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕರೆ ಭೂಮಿ ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಚಂದ್ರಶೇಖರ್ ನಡುವಿನ ವಾಗ್ಯುದ್ಧ ಮುನ್ನೆಲೆಯಲ್ಲಿದೆ. ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. “ನಾನು ಆರೋಪಿಯೇ ಇರಬಹುದು. ಆದರೆ, ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಂ ಚಂದ್ರಶೇಖರ್ ಸರಣಿ ಅಪರಾಧಗಳನ್ನು ಎಸಗಿದ್ದಾರೆ. ಆತ ಅಧಿಕಾರಿ ಸೋಗಿನಲ್ಲಿರುವ ಕ್ರಿಮಿನಲ್” ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಎಚ್.ಡಿ ಕುಮಾರಸ್ವಾಮಿ ಅವರನ್ನು ಶುಕ್ರವಾರ ವಿಚಾರಣೆ ಒಳಪಡಿಸಿದ್ದರು. ವಿಚಾರಣೆ ಎದುರಿಸಿದ್ದ ಕುಮಾರಸ್ವಾಮಿ ಶನಿವಾರ ಪ್ರತಿಕಾಗೋಷ್ಠಿ ನಡೆಸಿದ್ದರು. ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸುತ್ತಿರುವ ಎಡಿಜಿಪಿ ಚಂದ್ರಶೇಖರ್ ವಿರುದ್ಧವೇ ಆರೋಪ ಮಾಡಿದ್ದರು. “ಚಂದ್ರಶೇಖರ್ ಹಿನ್ನೆಲೆ ಗೊತ್ತಾ? ಈ ವ್ಯಕ್ತಿ ಹಿನ್ನೆಲೆ ಹುಡುಕಿ ಹೊರಟಾಗ ಗೊತ್ತಾಗಿದ್ದು, ಹಿಮಾಚಲ ಪ್ರದೇಶದ ಕೇಡರ್ನಲ್ಲಿ ಇರಬೇಕಾದವರು. ಯುಪಿಎಸ್ಸಿಯಲ್ಲಿ ಆಯ್ಕೆಯಾಗಿ ಹಿಮಾಚಲದಲ್ಲಿ ಕೆಲಸ ಮಾಡಬೇಕಾದವನು. ಮಾನ್ಯತಾ ಟೆಕ್ ಪಾರ್ಕ್ ಮುಂಭಾಗ 38 ಮಹಡಿಗಳ ಬಿಲ್ಡಿಂಗ್ಅನ್ನು ತನ್ನ ಹೆಂಡತಿ ಹೆಸರಿನಲ್ಲಿ ಕಟ್ಟುತ್ತಿದ್ದಾರೆ. ಅದು ಕೂಡ ರಾಜಕಾಲುವೆ ಜಾಗದಲ್ಲಿ” ಎಂದು ಆರೋಪಿಸಿದ್ದರು.
ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಚಂದ್ರಶೇಖರ್, “ಹಂದಿಗಳ ಜೊತೆ ಗುದ್ದಾಡುವುದಿಲ್ಲ. ಕರ್ತವ್ಯ ನಿರ್ವಹಿಸುವ ವೇಳೆ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಯಾವ ಕ್ರಿಮಿನಲ್, ಯಾವ ಆರೋಪಿಗಳ ಜೊತೆ ವಿರೋಧ ಕಟ್ಟಿಕೊಳ್ಳುತ್ತೇವೋ ಅವರು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ” ಎಂದಿದ್ದರು.
ಚಂದ್ರಶೇಖರ್ ಜೊತೆಗಿನ ತಮ್ಮ ಕಿತ್ತಾಟದಲ್ಲಿ ಕಾಂಗ್ರೆಸ್ ಸಚಿವರನ್ನೂ ಕುಮಾರಸ್ವಾಮಿ ಎಳೆದು ತಂದಿದ್ದಾರೆ. “ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳುವುದು? ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ನನ್ನ ಸರ್ಕಾರದಲ್ಲಿಯೂ ಕೆಲಸ ಮಾಡಿದ್ದರು, ನಿಜ. ನಾನು ಇಲ್ಲವೆನ್ನುವುದಿಲ್ಲ. ಆದರೆ, ಊರು ಮೇಯೋಕೆ, ಸಿಕ್ಕಸಿಕ್ಕ ಕೊಚ್ಚೆಯಲ್ಲಿ ಉರುಳಾಡೋಕೆ, ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ. ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ” ಎಂದಿದ್ದಾರೆ. “ನಿಮಗೆ ಅಂತಹ ಎದೆಗಾರಿಕೆ ಇದೆಯಾ” ಎಂದು ಕಾಂಗ್ರೆಸ್ ಸಚಿವರನ್ನು ಪ್ರಶ್ನಿಸಿದ್ದಾರೆ.
“ಹೀಗೆಯೇ ಪತ್ರ ಬರಿ ಎಂದು ಹೇಳಿಕೊಟ್ಟು ಅಧಿಕಾರಿಯಿಂದ ಪತ್ರ ಬರೆಸಲಾಗಿದೆ. ಆ ಪತ್ರ ಬರೆಸಿದವರು ಯಾರು ಎಂಬುದು ನನಗೆ ಗೊತ್ತಾಗಿದೆ. ಕೆಪಿಸಿಸಿ ಕಚೇರಿಯಿಂದಲೇ ಪತ್ರ ಬಹಿರಂಗವಾಗಿದೆ ಎಂಬುದೂ ಗೊತ್ತಿದೆ. ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಮ್ಮ (ಕಾಂಗ್ರೆಸ್) ನಿಕೃಷ್ಟ ಸ್ಥಿತಿ ನನಗೆ ಬಂದಿಲ್ಲ. ಬರುವುದೂ ಇಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.