ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆಸಿದ ಪೂರ್ವಭಾವಿ ಮರು ಪರೀಕ್ಷೆಯಲ್ಲಿ, ಭಾಷಾಂತರದ ಕಾರಣಕ್ಕೆ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆ ಅನ್ಯಾಯ ಸರಿಪಡಿಸುವವರೆಗೂ ಫಲಿತಾಂಶವನ್ನು ತಡೆ ಹಿಡಿಯಬೇಕು’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರಗೂರು ಪತ್ರ ಬರೆದಿದ್ದು, ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿದ್ದಾರೆ.
‘ಮೊದಲು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಭಾಷಾಂತರದಲ್ಲಿ ತಪ್ಪುಗಳು ಆಗಿದ್ದವು. ಹೀಗಾಗಿ ಮರುಪರೀಕ್ಷೆ ನಡೆಸಲಾಯಿತು. ಅದರಲ್ಲೂ ಕನ್ನಡ ಭಾಷಾಂತರದ ಸಮಸ್ಯೆ ಇದ್ದೇ ಇದೆ. ಅದರಿಂದ ಉಂಟಾದ ಗೊಂದಲದ ಕಾರಣಕ್ಕೆ ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಅನುತ್ತೀರ್ಣರಾಗಿದ್ದಾರೆ’ ಎಂದು ಪತ್ರದಲ್ಲಿ ಬರಗೂರು ವಿವರಿಸಿದ್ದಾರೆ.
‘ಪೂರ್ವಭಾವಿ ಮರುಪರೀಕ್ಷೆಯಲ್ಲಿ ಉತ್ತೀರ್ಣರಾದ ಕನ್ನಡದ ಅಭ್ಯರ್ಥಿಗಳ ಪ್ರಮಾಣ ಶೇ 15–20ರಷ್ಟು ಮಾತ್ರ. ಕನ್ನಡ ಅನುವಾದದಲ್ಲಿ ಹೀಗೆ ಪದೇ ಪದೇ ತಪ್ಪುಗಳು ಆಗುತ್ತಿದ್ದರೆ, ಕನ್ನಡ ಏಕೆ ಬೇಕು ಎಂಬ ಮನೋಭಾವ ಬೆಳೆಯುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು ಮೆಟ್ರೋ ದರ ಏರಿಕೆ ವಿರುದ್ಧ ಸಹಿ ಸಂಗ್ರಹಕ್ಕೆ ತಡೆಯೊಡ್ಡಿದ ಪೊಲೀಸರು: ಬೆಂಬಲಕ್ಕೆ ನಿಂತ ಜನ
‘ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ನಂತರ ಇಂಗ್ಲಿಷ್‌ಗೆ ಅನುವಾದಿಸುವುದು ಸರಿಯಾದ ಕ್ರಮ. ಆದರೆ ಇಲ್ಲಿ ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಇದು ಕರ್ನಾಟಕ ಆಡಳಿತ ಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
‘ಕನ್ನಡದ ಬದಲು ಇಂಗ್ಲಿಷ್‌ಗೆ ಆದ್ಯತೆ ನೀಡಿ, ಆಡಳಿತ ಭಾಷಾ ನೀತಿಯನ್ನು ಉಲ್ಲಂಘಿಸಿದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಕನ್ನಡದಲ್ಲಿ ಪರೀಕ್ಷೆ ಬರೆದವರು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
