ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚಿತ್ರದುರ್ಗದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಒಳಮೀಸಲಾತಿ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟರ ಒಳಮೀಸಲಾತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಮಾದಿಗರ ಬಹುದಿನದ ಬೇಡಿಕೆ ಈಡೇರಿಸುವಲ್ಲಿ ಮೀನಮೇಷ ಎಣಿಸುತ್ತಿರುವುದು ಈ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಏಪ್ರಿಲ್ 24 ಇಂದು ನಡೆಯುತ್ತಿರುವ ಒಳಮೀಸಲಾತಿ ಕುರಿತ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಒಳಮೀಸಲು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ರಕ್ತಸಿಕ್ತ ಹೋರಾಟವೂ ಸೇರಿದಂತೆ ʼಜೈಲ್ ಭರೋʼ ಚಳವಳಿ ಮಾಡಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೋರಾಟಗಾರ ಬಿ ಆರ್ ಬಾಸ್ಕರ್ ಪ್ರಸಾದ್ ಮಾತನಾಡಿ, “ಮಾದಿಗರ 35 ವರ್ಷಗಳ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಚಿತ್ರದುರ್ಗದಲ್ಲಿ ಇಂದು ರಾಜ್ಯ ಮಟ್ಟದ ಒಳಮೀಸಲಾತಿ ಸಭೆ ನಡೆಸಲಾಗಿದೆ. ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಾಟಗಾರರು ಬಂದಿದ್ದಾರೆ. ಈ ಸಭೆಯಲ್ಲಿ ಒಕ್ಕೊರಲ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ತೀರ್ಮಾನ ನೋಡಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ” ಎಂದು ಕರೆ ನೀಡಿದರು.
“ಏಪ್ರಿಲ್ 24ರ ಇಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಮಾದಿಗರ ಬೇಡಿಕೆ ಈಡೇರಿಸುವ ನಿರ್ಣಯ ಕೈಗೊಂಡರೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಇಲ್ಲವಾದಲ್ಲಿ ಹೈವೇ ಬಂದ್ ಮಾಡಲಾಗುವುದು, ಶಾಸಕರು ಮತ್ತು ಮಂತ್ರಿಗಳ ಮನೆಗಳಿಗೆ ಮುತ್ತಿಗೆ ಸೇರಿದಂತೆ ಸಿಎಂ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಘೇರಾವ್ ಹಾಕಲಾಗುವುದು. ಈ ಸಮುದಾಯಕ್ಕೆ ಹೋರಾಟ ಹೊಸದಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ, ರಾಜ್ಯದ ಯಾವುದೇ ಭಾಗದಲ್ಲಿ ಅನಾಹುತಗಳು ಸಂಭವಿಸಿದರೂ ಅದಕ್ಕೆ ಸರ್ಕಾರವೇ ಹೊಣೆ” ಎಂದು ಕಿಡಿಕಾರಿದರು.
“ಒಳಮೀಸಲಾತಿ ಹಿರಿಯ ಹೋರಾಟಗಾರ ಮಾರಸಂದ್ರ ಮುನಿಯಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಒಳಮೀಸಲು ಜಾರಿ ಆಗದೆ ನೇಮಕಾತಿ ಮಾಡುವುದಿಲ್ಲ. ಆದರೆ, ಕೃಷಿ ಇಲಾಖೆಯಲ್ಲಿ 891ಹುದ್ದೆಗಳ ಅಧಿಸೂಚನೆ ಇನ್ನೂ ಅಂತರ್ಜಾಲದಲ್ಲಿ ಹಾಗೇಯೆ ಇದೆ” ಎಂದು ದೂಷಿಸಿದರು.
ಮೈಸೂರಿನ ಒಳಮೀಸಲಾತಿ ಹೋರಾಟಗಾರ ವಕೀಲ ಅರುಣ್ ಕುಮಾರ್ ಮಾತನಾಡಿ, “ಸದಾಶಿವ, ಮಾಧುಸ್ವಾಮಿ, ನಾಗಮೋಹನ್ ದಾಸ್ ಎಲ್ಲ ಆಯೋಗಗಳ ವರದಿಯಲ್ಲಿ ಮಾದಿಗರಿಗೆ ಶೇ. 6ರಷ್ಟು ಒಳಮೀಸಲು ನೀಡಲಾಗಿದೆ. ಆದರೆ, ಹೊಲೆಯರಿಗೆ, ಕೊರಚ, ಲಂಬಾಣಿ, ಬೋವಿಗಳಿಗೆ ಈ ಪ್ರಮಾಣ ಹೆಚ್ಚುತ್ತಲೇ ಬಂದಿದೆ” ಎಂಬುದನ್ನು ಅಂಕಿಅಂಶಗಳ ಸಹಿತ ವಿವರಿಸಿದರು.
“ಈಗ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಬೂಬು ಹೇಳದೇ ಶೇ.6 ರಷ್ಟು ಒಳಮೀಸಲು ಅನ್ವಯವಾಗುವ ರೀತಿಯಲ್ಲಿ ನಿರ್ಣಯಕೈಗೊಳ್ಳಬೇಕು. ಇಲ್ಲವಾದಲ್ಲಿ ಮಾದಿಗರಿಗೆ ದ್ರೋಹ ಬಗೆದಂತಾಗುತ್ತದೆ” ಎಂದು ತಿಳಿಸಿದರು.
“ಸಿದ್ದರಾಮಯ್ಯ ಸರ್ಕಾರಕ್ಕೆ ಮಾದಿಗರಿಗೆ ನೀಡಿದ ಭರವಸೆಗಳ ನೆನಪು ಇಲ್ಲವಾಗಿದೆ. ಆದ್ದರಿಂದ ಈ ಸಮುದಾಯ ಇನ್ನೂ ಹೋರಾಟ ಮಾಡಬೇಕಾಗಿದೆ. ಒಳಮೀಸಲು ಜಾರಿಗೆ ಹೊಲೆಯ ಸಚಿವರು ಸೇರಿದಂತೆ ಕೊಲಂಬೊ ಸಚಿವರು ವಿರೋಧಿಸುತ್ತಿರುವುದು ವಂಚಿತ ಸಮುದಾಯಕ್ಕೆ ಎಸಗುವ ದ್ರೋಹ. ಸರ್ಕಾರ ಇಂತಹ ನಿಲುವುಗಳಿಂದ ಮಾದಿಗರಿಗೆ ಮೋಸ ಮಾಡುತ್ತಿದೆ” ಎಂದು ದೂರಿದರು.
ಇದನ್ನೂ ಓದಿ > ಚಿತ್ರದುರ್ಗ | ಭ್ರೂಣ ಲಿಂಗ ಪತ್ತೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗಡಿ ಭಾಗದ ಮೇಲೆ ನಿಗಾ
ವಕೀಲ ಮಾಳಪ್ಪ ಕುರ್ಕಿ, ಲೇಖಕ ಸಂತೋಷ್ ಕೋಡಿಹಳ್ಳಿ, ಚಿತ್ರದುರ್ಗದ ಹಿರಿಯ ಒಳಮೀಸಲು ಹೋರಾಟಗಾರ ಬಿ ಪಿ ಪ್ರಕಾಶ್ ಮೂರ್ತಿ, ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಗುರುಮೂರ್ತಿ, ಹುಲ್ಲೂರು ಕುಮಾರಸ್ವಾಮಿ ಇದ್ದರು.





