ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರುವನ್, ಕೇಪ್ಮಾರಿಸ್ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿಯ ನಿಯೋಗವು ಬುಧವಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿ ವಿಚಾರಣಾ ಆಯೋಗಕ್ಕೆ ಕೆಲವು ಮನವಿ ಮಾಡಿದೆ.
“ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡದಂತೆ ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಹಿಂದುಳಿದಿರುವ De-notified communities (DNTs) ವಿಮುಕ್ತ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾದ ವರ್ಗವನ್ನು ಸೃಷ್ಟಿಸಬೇಕು ಆ ವರ್ಗದಲ್ಲಿ ಕೊರಮ, ಕೊರಮ, ಕುರವನ್ ಮತ್ತು ಕೇಪ್ ಮಾರಿಸ್ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ಸಮಾನವಾಗಿ ಹಿಂದುಳಿದಿರುವ ಜಾತಿಗಳನ್ನು ಒಂದೇ ವರ್ಗದಲ್ಲಿ ಸೇರಿಸಿ ಸಮರ್ಪಕ ಮೀಸಲಾತಿ (Adequate Representation) ಆಧಾರದಲ್ಲಿ ಶೇ.6 ಹೆಚ್ಚುವರಿ ಒಳಮೀಸಲಾತಿ ನೀಡಬೇಕು” ಎಂದು ಕೋರಿದೆ.
“ಪರಿಶಿಷ್ಟ ಜಾತಿಯಲ್ಲಿರುವ ಸಮುದಾಯಗಳಲ್ಲಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅತಿ ಹಿಂದುಳಿದ ಮಾದರಿಯಲ್ಲಿ ವರ್ಗಗಳನ್ನು ಸೃಜಿಸಬೇಕು ಇದು ಜಾತಿ- ಉಪಜಾತಿ ಗುಂಪುಗಳಾಗಬಾರದು” ಎಂದು ನಿಯೋಗ ಮನವಿ ಮಾಡಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ “ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಪರಿಶೀಲಸಿ, ನಿರ್ಧರಿಸಲಾಗುವುದು” ಎಂದು ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಮಾಜಿ ಉಪಾಧ್ಯಕ್ಷ ಎಂ.ವೆಂಕಟೇಶ್, ವಕೀಲರಾದ ಕಿರಣ್ ಕುಮಾರ್ ಕೊತ್ತಗೆರೆ, ಮಹದೇವು ಚಾಮರಾಜನಗರ, ಗಂಗಾಧರ್, ನೆಲಮಂಗಲ, ಮಲ್ಲೇಶ್, ರವಿಮಹದೇವು ಬೆಂಗಳೂರು, ಮನ್ಮಂಥ್, ಹಾಗೂ ಮಹಿಳಾ ಮುಖಂಡರಾದ ಭೀಮಪುತ್ರಿ ನಾಗಮ್ಮ, ಚಂದ್ರಿಕಾ, ಸಂಶೋಧಕರಾದ ಡಾ.ರಾಜೇಶ್ ಹಾಗೂ ವಿವಿಧ ಜಿಲ್ಲೆಗಳ ಕುಳುವ (ಕೊರಮ-ಕೊರಚ) ಸಮಾಜದ ವಿವಿಧ ಸಂಘಟನೆಯ ಮುಖಂಡರು ಇದ್ದರು.