ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಶಾಖೆಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡ ಕೈಗೊಂಡಿರುವ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಗತಿಸಿದೆ.
ಬ್ಯಾಂಕ್ ಆಫ್ ಬರೋಡ 2,482 ಹುದ್ದೆಗಳ ನೇಮಕಾತಿಯಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆ ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ. ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳಿಗೆ ಗೌರವ ನೀಡುವುದರ ಜತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಬ್ಯಾಂಕುಗಳಲ್ಲಿ ಕನ್ನಡಿಗರ ಉದ್ಯೋಗ ಹಾಗೂ ಬ್ಯಾಂಕಿಂಗ್ ಸೇವೆಗಳಲ್ಲಿ ಕನ್ನಡದ ಬಳಕೆಗಾಗಿ ಕರವೇ ಹೋರಾಟ ನಡೆಸುತ್ತ ಬಂದಿದೆ. ಕರ್ನಾಟಕದ ಬ್ಯಾಂಕ್ ಶಾಖೆಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು, ಅರ್ಜಿ ನಮೂನೆಗಳು, ಚಲನ್ಗಳು ಹಾಗೂ ಗ್ರಾಹಕ ಸೇವೆಗಳು ಕನ್ನಡದಲ್ಲಿರಬೇಕು ಮತ್ತು ಬ್ಯಾಂಕ್ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ.
2017ರಲ್ಲಿ ಬ್ಯಾಂಕ್ ನೇಮಕಾತಿಯಲ್ಲಿ ಹೊರರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಿ ಸ್ಥಳೀಯ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರವೇ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಿತ್ತು. ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಸೇವೆ ನೀಡಬೇಕು ಮತ್ತು ಕನ್ನಡ ಬಾರದ ಸಿಬ್ಬಂದಿಗೆ ಕನ್ನಡ ಕಲಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿತ್ತು.
ಗ್ರಾಮೀಣ ಬ್ಯಾಂಕ್ಗಳ ನೇಮಕಾತಿ ಪರೀಕ್ಷೆಗಳಲ್ಲೂ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ಸ್ಥಳೀಯ ಭಾಷೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ, ಮುತ್ತಿಗೆ ಹಾಗೂ ಮನವಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. 2021ರ ಸೆಪ್ಟೆಂಬರ್ 14ರಂದು ಹಿಂದಿ ಹೇರಿಕೆ ವಿರೋಧಿಸಿ ನಡೆದ ರಾಜ್ಯವ್ಯಾಪಿ ಹೋರಾಟದ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಅಧಿಕ ಬ್ಯಾಂಕ್ಗಳ ಎದುರು ಪ್ರತಿಭಟನೆ ನಡೆಸಿ ಬ್ಯಾಂಕಿಂಗ್ ಸೇವೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾಗಿ ನಾರಾಯಣಗೌಡ ತಿಳಿಸಿದ್ದಾರೆ.
2025ರಲ್ಲಿ ನಡೆದ ಕರವೇ ಮಹಾಸಂಘರ್ಷ ಯಾತ್ರೆಯಲ್ಲೂ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಬೇಡಿಕೆಯನ್ನು ಪ್ರಮುಖವಾಗಿ ಮುಂದಿಡಲಾಗಿತ್ತು. ಇದೇ ವೇಳೆ ಎಸ್ಬಿಐ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕರ್ನಾಟಕದ ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಬಳಕೆ ಹಾಗೂ ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿಯ ನೇಮಕಾತಿಯ ಅಗತ್ಯವನ್ನು ಒತ್ತಿಹೇಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಆಫ್ ಬರೋಡದ ಕ್ರಮ ಕೇವಲ ಆ ಬ್ಯಾಂಕಿಗೆ ಸೀಮಿತವಾಗದೆ ದೇಶದ ಎಲ್ಲ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಗೂ ಮಾದರಿಯಾಗಬೇಕು ಎಂದು ಕರವೇ ಒತ್ತಾಯಿಸಿದೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಇಲ್ಲಿನ ಜನರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದು ಹಾಗೂ ಸ್ಥಳೀಯ ಯುವಜನರಿಗೆ ಉದ್ಯೋಗದಲ್ಲಿ ನ್ಯಾಯಯುತ ಅವಕಾಶ ನೀಡುವುದು ಅಗತ್ಯ. ಇದೇ ನೀತಿ ದೇಶದ ಎಲ್ಲ ರಾಜ್ಯಗಳಿಗೂ ಅನ್ವಯಿಸಬೇಕು. ಆಯಾ ರಾಜ್ಯಗಳ ಬ್ಯಾಂಕ್ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು ಸಹಜ ನ್ಯಾಯ ಎಂದು ನಾರಾಯಣಗೌಡ ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರು | ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಕರ್ನಾಟಕದ ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕನ್ನಡ ಜ್ಞಾನ ಕಡ್ಡಾಯಗೊಳಿಸಬೇಕು. ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಸೇರಿದಂತೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಸಮಾನ ಅವಕಾಶ ನೀಡಬೇಕು. ಕರ್ನಾಟಕದ ಬ್ಯಾಂಕ್ ಹುದ್ದೆಗಳಿಗೆ ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯಯುತ ಆದ್ಯತೆ ದೊರೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟವಾದ ರಾಷ್ಟ್ರೀಯ ನೀತಿ ರೂಪಿಸಬೇಕು. ಆರ್ಬಿಐ ಹಾಗೂ ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗಳ ಮೂಲಕ ಬ್ಯಾಂಕುಗಳ ಶಾಖೆಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಮಾರ್ಗಸೂಚಿ ರೂಪಿಸಬೇಕು ಎಂದು ಕರವೇ ಒತ್ತಾಯಿಸಿದೆ.
“ಬ್ಯಾಂಕ್ಗಳಲ್ಲಿ ಕನ್ನಡ, ಬ್ಯಾಂಕ್ ಉದ್ಯೋಗಗಳಲ್ಲಿ ಕನ್ನಡಿಗ” ಎಂಬ ಹೋರಾಟವನ್ನು ಮುಂದೆಯೂ ಇನ್ನಷ್ಟು ಬಲವಾಗಿ ಮುಂದುವರಿಸಲಾಗುವುದು ಎಂದು ನಾರಾಯಣಗೌಡ ಹೇಳಿದ್ದಾರೆ.





