ರಾಜ್ಯವನ್ನು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ, ಕೃಷಿಗಾಗಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಿಂದ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿ ಬಸವನ ಬಾಗೇವಾಡಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತಹಸೀಲ್ದಾರ್ ಕಚೇರಿ ಮುಂದುಗಡೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, “ತೀವ್ರ ಬರಗಾಲ ಪರಿಸ್ಥಿತಿ ಇದ್ದರೂ 238 ತಾಲೂಕುಗಳ ಪೈಕಿ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ರೈತ ವಿರೋಧಿ ನೀತಿ” ಎಂದು ಆರೋಪಿಸಿದರು.
ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಮುಖಂಡರಾದ ವಿಠ್ಠಲ್ ಬಿರಾದರ್ ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿ 13 ತಾಲೂಕುಗಳ ಪೈಕಿ ನಿಡಗುಂದಿ, ಕೊಲ್ಹಾರ ಹಾಗೂ ವಿಜಯಪುರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ 10 ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ತಾರತಮ್ಯ ಧೋರಣೆಯಾಗಿದೆ” ಎಂದು ದೂರಿದರು.
“ಮುಂಗಾರು ಆರಂಭದಲ್ಲಿ ಕೆಲವೆಡೆ ಅಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ರೈತರು ತೊಗರಿ, ಶೇಂಗಾ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ನಂತರ ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಬೆಳೆಗಳು ಒಣಗಿ ಹಾನಿಗೀಡಾಗಿವೆ. ಬಿತ್ತನೆ, ಗೊಬ್ಬರ, ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂಪಾಯಿ ಸಾಲ ಮಾಡಿರುವ ರೈತರು ಇದೀಗ ಬೆಳೆ ನಷ್ಟದಿಂದ ಸಾಲ ತೀರಿಸಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಸಂಘದ ಮುಖಂಡರು ಹೇಳಿದರು.
ಜಿಲ್ಲಾ ಅಧ್ಯಕ್ಷ ಉಮೇಶ ವಾಲಿಕಾರ್ ಮಾತನಾಡಿ, “ಸಾಲದ ಒತ್ತಡದಿಂದ ರೈತರು ಮಾನಸಿಕವಾಗಿ ಕುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ವಿಜಯಪುರ ಜಿಲ್ಲೆಯ ವಾಸ್ತವ ಬರ ಪರಿಸ್ಥಿತಿ ಅರಿಯಲು ಮುಖ್ಯಮಂತ್ರಿ ಸ್ವತಃ ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಮಳೆ ಹಾಗೂ ಬೆಳೆ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಬೇಕು” ಎಂದು ಒತ್ತಾಯಿಸಿದರು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಬರ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಉಳಿದ 10 ತಾಲೂಕುಗಳನ್ನು ಕೈಬಿಟ್ಟಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ವಿಜಯಪುರ ಜಿಲ್ಲೆಯ ಉಳಿದ 10 ತಾಲೂಕುಗಳು ಸೇರಿದಂತೆ ಇಡೀ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ಕೃಷಿಗಾಗಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಿಂದ ಪಡೆದಿರುವ ರೈತರ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಆಗ್ರಹಿಸಿದರು.
ರೈತರ ಹಿತಾಸಕ್ತಿಗೆ ಸರ್ಕಾರ ಸ್ಪಂದಿಸದಿದ್ದರೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.





