ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ, ‘ನಾನು ತಿನ್ನಲ್ಲ – ತಿನ್ನೋಕೂ ಬಿಡಲ್ಲ’ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ, ಇಂದಿನ ಸನ್ನಿವೇಶಗಳು ಅವರ ಭರವಸೆಗಳಿಗೆ ವಿರುದ್ಧವಾಗಿವೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬೇರುಗಳು ಭಾರೀ ಆಳವಾಗಿ ಇಳಿದಿದೆ ಎಂಬುದನ್ನು ಕೇಂದ್ರ ಕಾವಲು ಆಯೋಗದ (ಸಿವಿಸಿ) ಇತ್ತೀಚಿನ ವಾರ್ಷಿಕ ವರದಿ ಬಿಚ್ಚಿಟ್ಟಿದೆ.
ಸಿವಿಸಿ ವರದಿಯ ಪ್ರಕಾರ, 2025ರ ಒಂದೇ ವರ್ಷದಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಾಗೂ ಆಡಳಿತಾತ್ಮಕ ಸಂಸ್ಥೆಗಳ ವಿರುದ್ಧ ಬರೋಬ್ಬರಿ 70,584 ಭ್ರಷ್ಟಾಚಾರದ ದೂರುಗಳು ದಾಖಲಾಗಿವೆ. ದೇಶದ ಸಾಮಾನ್ಯ ನಾಗರಿಕರು ಪ್ರತಿದಿನ ಅವಲಂಬಿಸುವ ಬ್ಯಾಂಕಿಂಗ್ ಮತ್ತು ಭಾರತೀಯ ರೈಲ್ವೆ ಇಲಾಖೆಗಳೇ ಈ ಲಂಚಗುಳಿತನ ಮತ್ತು ಅಕ್ರಮಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.
ಸರ್ಕಾರಿ ಇಲಾಖೆಗಳ ವಿರುದ್ಧ 2025ರಲ್ಲಿ ದಾಕಲಾಗಿರುವ ಒಟ್ಟು 70,584 ಭ್ರಷ್ಟಾಚಾರದ ದೂರುಗಳಲ್ಲಿ 64,905 ದೂರುಗಳನ್ನು ಅದೇ ವರ್ಷದ ಡಿಸೆಂಬರ್ 31ರೊಳಗೆ ಇತ್ಯರ್ಥಪಡಿಸಲಾಗಿದೆ. ಆದಾಗ್ಯೂ, ಸುಮಾರು 5,679 ದೂರುಗಳು ಇಂದಿಗೂ ಸೂಕ್ತ ತನಿಖೆಯಿಲ್ಲದೆ ಬಾಕಿ ಉಳಿದಿವೆ. ನಿಯಮಾವಳಿಗಳ ಪ್ರಕಾರ ಪ್ರತಿ ದೂರಿನ ತನಿಖೆಯನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗಿದ್ದರೂ, ಬಾಕಿ ಇರುವ ಪ್ರಕರಣಗಳಲ್ಲಿ 2,002ಕ್ಕೂ ಹೆಚ್ಚು ದೂರುಗಳು ಮೂರು ತಿಂಗಳ ಸುದೀರ್ಘ ಗಡುವನ್ನು ಮೀರಿವೆ ಎಂದು ವರದಿ ವಿವರಿಸಿದೆ.
ಬ್ಯಾಂಕಿಂಗ್ ಮತ್ತು ರೈಲ್ವೆ ವಲಯದಲ್ಲೇ ಅತಿ ಹೆಚ್ಚು ಲಂಚಗುಳಿತನ
ಜನಸಾಮಾನ್ಯರ ಆರ್ಥಿಕ ವಹಿವಾಟಿನ ಕೇಂದ್ರವಾಗಿರುವ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬ್ಯಾಂಕ್ಗಳ ವಿರುದ್ಧ ಅತೀ ಹೆಚ್ಚು ದೂರುಗಳು ದಾಖಲಾಗಿದ್ದು, ಬರೋಬ್ಬರಿ 9,933 ಪ್ರಕರಣಗಳು ದಾಖಲಾಗಿವೆ. ಬ್ಯಾಂಕಿಂಗ್ ಅಧಿಕಾರಿಗಳ ಅಕ್ರಮ, ಸಾಲ ಮಂಜೂರಾತಿಯಲ್ಲಿ ಲಂಚ ಹಾಗೂ ಆಡಳಿತಾತ್ಮಕ ಲೋಪಗಳ ಕುರಿತು ಬಂದ ದೂರುಗಳಲ್ಲಿ 9,520 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದರೂ, ಇನ್ನು 413 ದೂರುಗಳು ಬಾಕಿಯಿವೆ.
ಇನ್ನು, ದೇಶದ ಜೀವನಾಡಿ ಎಂದೇ ಕರೆಯಲ್ಪಡುವ ರೈಲ್ವೆ ಇಲಾಖೆಯಲ್ಲೂ ಅಕ್ರಮಗಳ ಸರಣಿ ಮುಂದುವರಿದಿದ್ದು, ಎರಡನೇ ಅತಿ ಹೆಚ್ಚು, ಅಂದರೆ 9,381 ದೂರುಗಳು ಬಂದಿವೆ. ಇದರಲ್ಲಿ 8,754 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 627 ಪ್ರಕರಣಗಳಲ್ಲಿ ಇನ್ನೂ ಸೂಕ್ತ ತನಿಖೆಗಳು ನಡೆಯಬೇಕಿದೆ.
ನಗರಾಭಿವೃದ್ಧಿ ಮತ್ತು ದೆಹಲಿಯ ಸ್ಥಳೀಯ ಸಂಸ್ಥೆಗಳಲ್ಲಿ ಸಾಲು ಸಾಲು ಅಕ್ರಮ
ನಗರ ಪ್ರದೇಶದ ಮೂಲಸೌಕರ್ಯ ನಿರ್ವಹಿಸುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ 6,531 ದೂರುಗಳು ಬಂದಿದ್ದರೆ, ಸ್ಥಳೀಯ ಆಡಳಿತ ಸಂಸ್ಥೆಗಳ ವಿರುದ್ಧ 4,834 ದೂರುಗಳು ಸಲ್ಲಿಕೆಯಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯ ಮಹಾನಗರ ಪಾಲಿಕೆ, ದೆಹಲಿ ಜಲ ಮಂಡಳಿ ಹಾಗೂ ದೆಹಲಿ ಸಾರಿಗೆ ನಿಗಮದಂತಹ ಸಂಸ್ಥೆಗಳು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ತೀವ್ರ ಭ್ರಷ್ಟಾಚಾರ ನಡೆಸುತ್ತಿವೆ ಎಂಬುದು ಆಯೋಗಕ್ಕೆ ಬಂದ ದೂರುಗಳಿಂದ ಸಾಬೀತಾಗಿದೆ. ದೆಹಲಿ ಆಡಳಿತ ಯಂತ್ರದ ವಿರುದ್ಧ 2,804 ದೂರುಗಳು ದಾಖಲಾಗಿವೆ ಎಂದು ವರದಿ ಹೇಳಿದೆ.
ಗಮನಾರ್ಹವಾಗಿ, ಪ್ರಧಾನಿ ಮೋದಿ ಅವರ ಅತ್ಯಾಪ್ತ ಅಮಿತ್ ಶಾ ನಿರ್ವಹಿಸುತ್ತಿರುವ ಗೃಹ ಸಚಿವಾಲಯದ ವಿರುದ್ಧ 2,036 ಪ್ರಕರಣಗಳು ದಾಖಲಾಗಿವೆ. ಜೊತೆಗೆ, ಇದೇ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರ ವಿರುದ್ಧವೇ ಪ್ರತ್ಯೇಕವಾಗಿ 2,633 ದೂರುಗಳು ದಾಖಲಾಗಿವೆ ಎಂದು ವರದಿ ವಿವರಿಸಿದೆ.
ಅಂತೆಯೇ, ನೈಸರ್ಗಿಕ ಸಂಪನ್ಮೂಲ ಮತ್ತು ಇಂಧನ ಕ್ಷೇತ್ರಗಳೂ ಭ್ರಷ್ಟಾಚಾರದಲ್ಲಿ ಮುಳುಗಿವೆ. ಕಲ್ಲಿದ್ದಲು ವಲಯದ ಅಧಿಕಾರಿಗಳ ವಿರುದ್ಧ 4,118, ಹಣಕಾಸು ಕ್ಷೇತ್ರದ ಅಧಿಕಾರಿಗಳ ವಿರುದ್ಧ 3,107 ಹಾಗೂ ಪೆಟ್ರೋಲಿಯಂ ಸಚಿವಾಲಯದ ವ್ಯಾಪ್ತಿಯಲ್ಲಿ 2,722 ದೂರುಗಳು ದಾಖಲಾಗಿವೆ. ಇನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯ ವಿರುದ್ಧ 2,139 ದಾಖಲಾಗಿವೆ.
ಈ ಲೇಖನ ಓದಿದ್ದೀರಾ?: ಶೇ.7.8 ಜಿಡಿಪಿ ಅಪ್ಪಟ ಕಣ್ಕಟ್ಟು ಎಂದರು ನಿವೃತ್ತ ಅಧಿಕಾರಿ ಸುಭಾಷ್ ಗರ್ಗ್!
ಇಷ್ಟೇ ಅಲ್ಲದೆ, ಶಿಕ್ಷಣ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರ (2,030), ಕಾರ್ಮಿಕ ಸಚಿವಾಲಯ (1,894), ವಿಮಾ ಕಂಪನಿಗಳು (1,536), ದೂರಸಂಪರ್ಕ (1,469), ರಕ್ಷಣಾ ಸಚಿವಾಲಯ (1,410), ಆಹಾರ ಮತ್ತು ಸಾರ್ವಜನಿಕ ವಿತರಣೆ (1,123), ಉಕ್ಕು ಸಚಿವಾಲಯ (1,023) ಹಾಗೂ ಅಂಚೆ ಇಲಾಖೆಯಲ್ಲೂ (1,003) ಭ್ರಷ್ಟಾಚಾರದ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ.
ಸಿವಿಸಿ ಮಧ್ಯಪ್ರವೇಶ ಮತ್ತು ತುರ್ತು ಕ್ರಮದ ಅಗತ್ಯ
ಕೇಂದ್ರ ಕಾವಲು ಆಯೋಗವು 2025ರ ಅವಧಿಯಲ್ಲಿ ನೇರ ಶಿಸ್ತುಕ್ರಮಕ್ಕಾಗಿ 18,651 ದೂರುಗಳನ್ನು ವಿವಿಧ ಇಲಾಖೆಗಳಲ್ಲಿರುವ ಸಿವಿಸಿ ಆಯುಕ್ತರಿಗೆ ರವಾನಿಸಿದೆ. ಈ ಪೈಕಿ, ಸ್ಥಳೀಯ ಸಂಸ್ಥೆಗಳ ವಿರುದ್ಧವೇ ಸಿವಿಸಿ 4,110 ಪ್ರಕರಣಗಳನ್ನು ತನಿಖೆಗೆ ಒಳಪಡಿಸಿದೆ. ಬ್ಯಾಂಕ್ಗಳ ವಿರುದ್ಧ 1,749, ರೈಲ್ವೆ ವಿರುದ್ಧ 1,428, ಪೆಟ್ರೋಲಿಯಂ ವಿರುದ್ಧ 1,318 ಹಾಗೂ ರಕ್ಷಣಾ ಸಚಿವಾಲಯದ ವಿರುದ್ಧ 1,016 ದೂರುಗಳನ್ನು ಸಿವಿಸಿ ತನಿಖೆಗೆ ಗುರಿಯಾಗಿಸಿದೆ.
ಸಿವಿಸಿಯ ಈ ಬೃಹತ್ ಅಂಕಿಅಂಶಗಳು ದೇಶದ ಆಡಳಿತ ಯಂತ್ರದಲ್ಲಿ ಸುಧಾರಣೆಯ ಜರೂರತ್ತನ್ನು ಸ್ಪಷ್ಟವಾಗಿ ಸಾರುತ್ತಿವೆ. ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲಿನ ಜನಸಾಮಾನ್ಯರ ವಿಶ್ವಾಸವನ್ನು ಮರಳಿ ಗಳಿಸಬೇಕಾದರೆ, ಇಂತಹ ದೂರುಗಳನ್ನು ಕಾಲಮಿತಿಯೊಳಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಮೇಲ್ವಿಚಾರಣೆ ತರದಿದ್ದರೆ, ಭ್ರಷ್ಟಾಚಾರದ ಈ ವ್ಯಾಧಿ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ನುಂಗಿಹಾಕುವ ಅಪಾಯವೂ ಇದೆ.




