ಪವನ ವಿದ್ಯುತ್ ಉತ್ಪಾದನೆ ನವೀಕರಿಸಬಹುದಾದ ಇಂಧನ ವಲಯದ ಕೇಂದ್ರಬಿಂದುವಾಗಿದೆ. 1331.48 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧಿಸಿದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ʼಗ್ಲೋಬಲ್ ವಿಂಡ್ ಡೇʼ ಸಮ್ಮೇಳನ ಉದ್ದೇಶಿಸಿ ಮಾತನಾಡಿ, “ಪವನ ವಿದ್ಯುತ್ ಉತ್ಪಾದನೆಯಲ್ಲಿ ತಮಿಳುನಾಡು 1136.37 ಮೆಗಾವ್ಯಾಟ್ ಉತ್ಪಾದಿಸಿ ದ್ವಿತೀಯ ಮತ್ತು ಗುಜರಾತ್ 954.76 ಮೆಗಾವ್ಯಾಟ್ ಉತ್ಪಾದಿಸಿ ತೃತೀಯ ಸ್ಥಾನದಲ್ಲಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯದ ಕಾರ್ಯತಂತ್ರದ ಕೇಂದ್ರಬಿಂದುವಾಗಿವೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರಸಕ್ತ ವರ್ಷ ನವೀಕರಿಸಬಹುದಾದ ಇಂಧನ ಬಜೆಟ್ ಅನ್ನು ಶೇ.53ರಷ್ಟು ಹೆಚ್ಚಿಸಿದೆ. ₹26,549 ಕೋಟಿ ಬಜೆಟ್‌ಗೆ ಏರಿದೆ. ಇದರಲ್ಲಿ ಹೆಚ್ಚಿನ ಪಾಲು ಪವನ ವಿದ್ಯುತ್ ಉತ್ಪಾದನೆಗೆ ಮೀಸಲಿರಿಸಲಾಗಿದೆ” ಎಂದರು.
“ಭಾರತದ ಪವನ ವಿದ್ಯುತ್ ಸಾಮರ್ಥ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಶೇ.10.5ಕ್ಕಿಂತ ಹೆಚ್ಚಾಗಿದ್ದು, 51.5 ಗಿಗಾವ್ಯಾಟ್‌ಗೆ ತಲುಪಿದೆ. ಇದರೊಂದಿಗೆ ದೇಶದ ನವೀಕರಿಸಬಹುದಾದ ಇಂಧನ ವಲಯ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ದೇಶದ ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಪ್ರತಿ ವರ್ಷ ಶೇ.17.13 ರಷ್ಟು ಹೆಚ್ಚಾಗುತ್ತಿದೆ. ಸದ್ಯ 226.74 ಗಿಗಾವ್ಯಾಟ್ ತಲುಪಿದೆ” ಎಂದು ಹೇಳಿದರು.

“ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಗಾಧ ಸಾಧನೆಗೈಯ್ಯುತ್ತಿದೆ. ಜಾಗತಿಕವಾಗಿ 4ನೇ ಅತಿ ದೊಡ್ಡ ಪವನ ವಿದ್ಯುತ್ ಸ್ಥಾಪಿತ ಹಾಗೂ 3ನೇ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಪವನ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಮಧ್ಯಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಹೊಸ ರಾಜ್ಯಗಳಿಗೂ ವಿಸ್ತರಿಸಲಾಗುವುದು. ಗುಜರಾತ್ ಮತ್ತು ತಮಿಳುನಾಡಿನಲ್ಲಿ 4GW ಉತ್ಪಾದನೆಗೆ ಸ್ಥಳ ಗುರುತಿಸಿ ಟೆಂಡರ್ ಸಿದ್ಧಪಡಿಸಲಾಗುತ್ತಿದೆ. ಪವನ ವಿದ್ಯುತ್ ಮತ್ತು ಹಸಿರು ವಿದ್ಯುತ್ ತಂತ್ರಗಳಲ್ಲಿ 24 ತಾಸೂ ಸಂಯೋಜಿಸಲಾಗಯತ್ತದೆ. ಗ್ರಿಡ್ ಆಧುನೀಕರಣ, ಸ್ಥಳೀಯವಾಗಿ ಪವನ ವಿದ್ಯುತ್ ಉತ್ಪಾದನೆ ಉತ್ತೇಜಿಸಲು ಪ್ರಮುಖ ಆದ್ಯತೆ ನೀಡಲಾಗುತ್ತಿದೆ” ಎಂದು ವಿವರಿಸಿದರು.
ಜಾಗತಿಕ ಉತ್ಪಾದನಾ ಹಬ್ ಆಗಲಿದೆ ಭಾರತ
“ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಉತ್ಪಾದನಾ ಹಬ್ ಆಗುವಲ್ಲಿ ನವೀಕರಿಸಬಹುದಾದ ಇಂಧನ ವಲಯವೂ ಮಹತ್ತರ ಕೊಡುಗೆ ನೀಡಲಿದೆ. ದೇಶದ ಉತ್ಪಾದನಾ ವಲಯಕ್ಕೆ ಅಗತ್ಯ ಇಂಧನ ಬೇಡಿಕೆ ಪೂರೈಸುವಲ್ಲಿ ಸೌರ ಶಕ್ತಿ, ಪವನ ಶಕ್ತಿ, ಹಸಿರು ಇಂಧನ ಮೂಲಗಳಿಂದ ಸಾಧ್ಯವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.