ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಧರ್ಮಸ್ಥಳ ಮತ್ತು ಸೌಜನ್ಯ ವಿಚಾರಕ್ಕೆ ಸಂಬಂಧಿಸಿ ಈದಿನ ಡಾಟ್ ಕಾಮ್ಗೆ ಮೊದಲು ಗೆಲುವು ದಕ್ಕಿದೆ.
ಧರ್ಮಸ್ಥಳ ಮತ್ತು ಸೌಜನ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸದಂತೆ ಇದ್ದ ಸಿವಿಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಧರ್ಮಸ್ಥಳ ದೇವಸ್ಥಾನ ಟ್ರಸ್ಟ್ನ ಕೆಲವರು ಈದಿನ ಡಾಟ್ ಕಾಮ್ ಯೂಟ್ಯೂಬ್ ನಿರ್ಬಂಧ ವಿಧಿಸುವಂತೆ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಏಕಸದಸ್ಯ ಪೀಠವು ಎತ್ತಿ ಹಿಡಿದಿತ್ತು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಈದಿನ ಚಾನೆಲ್ ಅನ್ನು ಯೂಟ್ಯೂಬ್ ಕೂಡ ಜುಲೈ 10ರಿಂದ ಬ್ಲಾಕ್ ಮಾಡಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ ಈದಿನ ತಂಡವು, ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಮನವಿ ಸಲ್ಲಿಸಿತ್ತು. ಅರ್ಜಿಯನ್ನು ಇಂದು (ಜು.23) ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಾಧೀಶ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು, ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದೆ. ಅಲ್ಲದೇ, ಬ್ಲಾಕ್ ಅನ್ನು ತೆರವುಗೊಳಿಸುವಂತೆ ಯೂಟ್ಯೂಬ್ಗೆ ನಿರ್ದೇಶನ ನೀಡಿದೆ.
ಈದಿನ ತಂಡದ ಪರವಾಗಿ ವಾದಿಸಿದ ಹೈಕೋರ್ಟ್ ವಕೀಲರಾದ ಕ್ಲಿಫ್ಟನ್ ಡಿ ರೊಝಾರಿಯೋ, “ಭಾರತದ ಐಟಿ ಕಾಯ್ದೆ ಅಡಿಯಲ್ಲಿ ಸರ್ಕಾರವು ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ವಿಷಯವನ್ನು ಪ್ರಕಟಿಸಿದಲ್ಲಿ ಮಾತ್ರ ನಿರ್ಬಂಧಿಸಲು ಅಥವಾ ಬ್ಲಾಕ್ ಮಾಡುವ ಅಧಿಕಾರವನ್ನು ಹೊಂದಿದೆ. ಆದರೆ, ಅದ್ಯಾವುದನ್ನು ಮಾಡದೇ ಇದ್ದರೂ ಕೂಡ ಈ ಹಿಂದಿನ ಮಧ್ಯಂತರ ಆದೇಶದ ಮೇರೆಗೆ ಈದಿನ ಯೂಟ್ಯೂಬ್ ಅನ್ನು ಬ್ಲಾಕ್ ಮಾಡಲಾಗಿದೆ. ಈದಿನ ಸಂಸ್ಥೆಯು ಈಗಾಗಲೇ 3.8 ಲಕ್ಷ ಚಂದಾದಾರರನ್ನು ಹೊಂದಿದ್ದು, ಈದಿನ ಡಾಟ್ ಕಾಮ್ ಮಾಧ್ಯಮವು ಕಳೆದ ಮೂರು ವರ್ಷಗಳಿಂದ ಸಮಾಜದ, ಸಮುದಾಯದ ಉನ್ನತಿಗಾಗಿ ಕೆಲಸ ಮಾಡುತ್ತಿರುವ ಜವಾಬ್ದಾರಿಯುವ ಮಾಧ್ಯಮ ಸಂಸ್ಥೆಯಾಗಿದೆ. ಹಾಗಾಗಿ, ಈ ಬ್ಲಾಕ್ ಮಾಡುವಂತೆ ಮಾಡಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲು ಯೂಟ್ಯೂಬ್ಗೆ ನಿರ್ದೇಶನ ನೀಡಬೇಕು” ಎಂದು ವಿನಂತಿಸಿದರು.
ಈ ಮನವಿಯನ್ನು ಪುರಸ್ಕರಿಸಿದ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು, ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಲು ಯೂಟ್ಯೂಬ್ಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಈ ಹಿಂದಿನ ಸಿವಿಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದರು. ಈ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶವನ್ನು ಹೈಕೋರ್ಟ್ ಪ್ರಕಟಿಸಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋಶಾ ಕಂಪನಿಯ ಮತ್ತೊಂದು ನಿಗೂಢ ನಾಟಕ!
ಈ ದಿನ ಡಾಟ್ ಕಾಮ್ ತಂಡದ ಪರವಾಗಿ ಹೈಕೋರ್ಟ್ನಲ್ಲಿ ವಕೀಲರಾದ ಕ್ಲಿಫ್ಟನ್ ಡಿ ರೊಝಾರಿಯೋ , ಮೈತ್ರೇಯಿ ಕೃಷ್ಣನ್ ವಾದಿಸಿದರು. ಧರ್ಮಸ್ಥಳ ದೇವಸ್ಥಾನ ಟ್ರಸ್ಟ್ನ ಪರವಾಗಿ ಹಿರಿಯ ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಹಾಜರಿದ್ದರು.
ಪರ್ಯಾಯವಾಗಿ ಕಾರ್ಯ ನಿರ್ವಹಿಸಿದ್ದ ಈದಿನ ಟಿವಿ
ಈ ಹಿಂದಿನ ಹೈಕೋರ್ಟ್ನ ಮಧ್ಯಂತರ ಆದೇಶದಿಂದಾಗಿ ಈದಿನ ಯೂಟ್ಯೂಬ್ ಚಾನೆಲ್ನನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದರಿಂದ ಈದಿನ ಟಿವಿ ಯೂಟ್ಯೂಬ್ ಚಾನೆಲ್ ಕಾರ್ಯ ನಿರ್ವಹಿಸುತ್ತಿತ್ತು.
