ರಾಜ್ಯದಲ್ಲಿ ಇಂದಿನಿಂದ (ಮಾರ್ಚ್ 25) ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ಒಟ್ಟು 8,69,968 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮೊದಲ ಸಲ ವೆಬ್‌ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ 2750 ಪರೀಕ್ಷಾ ಕೇಂದ್ರಗಳಲ್ಲಿ ಈ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಮಂಡಳಿ ಸಜ್ಜಾಗಿದೆ. ವೆಬ್‌ಟೆಲಿಕಾಸ್ಟ್ ಎಂದರೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಅಧಿಕಾರಿಗಳ ಕಚೇರಿಗೆ ಕನೆಕ್ಟ್ ಆಗಿದ್ದು, ಅಧಿಕಾರಿಗಳು ಕಚೇರಿಯಿಂದಲೇ ಪರೀಕ್ಷಾ ಕೇಂದ್ರಗಳ ಚಲನವಲನದ ಮೇಲೆ ನಿಗಾ ಇಡಬಹುದಾಗಿದೆ.
ಒಟ್ಟು 8,69,968 ವಿದ್ಯಾರ್ಥಿಗಳಲ್ಲಿ 4,28,058 ಬಾಲಕಿಯರು ಮತ್ತು 4,41,910 ಬಾಲಕರು ಆಗಿದ್ದಾರೆ. ಅದೇ ರೀತಿ, 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಆಗಿದ್ದಾರೆ. ವಿಭಿನ್ನ ಸಾಮರ್ಥ್ಯವುಳ್ಳ 5,424 ವಿದ್ಯಾರ್ಥಿಗಳು ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
ವಿದ್ಯಾರ್ಥಿಗಳಿಗೆ ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಉರ್ದು ಮತ್ತು ಮರಾಠಿ ಸೇರಿ ಒಟ್ಟು ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ. ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದರೂ ಕೂಡಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ. ಆದರೆ 30 ನಿಮಿಷಕ್ಕಿಂತ ಅಧಿಕ ತಡವಾದರೆ ಪರೀಕ್ಷೆ ಬರೆಯಲು ಅವಕಾಶವಿಲ್ಲ.
ಗೋಡೆಗೆ ಮುಖ ಮಾಡಿ ಪರೀಕ್ಷೆ
ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿಕೊಂಡು ಪರೀಕ್ಷೆ ಬರೆಯಬೇಕಾಗಿದ್ದು, ಎಲ್ಲ ಕೇಂದ್ರಗಳಲ್ಲೂ ಇದೇ ರೀತಿ ಡೆಸ್ಕ್‌ಗಳನ್ನು ಜೋಡಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿದರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.
ಪರೀಕ್ಷಾ ಕೇಂದ್ರಗಳಿರುವಲ್ಲಿ 200 ಮೀಟರ್ ಸುತ್ತಳತೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಲಿನ ಜೆರಾಕ್ಸ್, ಕಂಪ್ಯೂಟರ್, ಸೈಬರ್ ಸೆಂಟರ್‌ಗಳನ್ನು ಬಂದ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಬಳಿ ಅನುಮಾನಾಸ್ಪದ ರೀತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಹೇಳಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ವೇಳಾಪಟ್ಟಿ
ಮಾರ್ಚ್ 25ರಂದು ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ ಎನ್‌ಸಿಇಆರ್‌ಟಿ, ಸಂಸ್ಕೃತ), ಮಾರ್ಚ್ 27ರಂದು ಸಮಾಜ ವಿಜ್ಞಾನ, ಮಾರ್ಚ್ 30ರಂದು ವಿಜ್ಞಾನ, ರಾಜ್ಯಶಾಸ್ತ್ರ ಪರೀಕ್ಷೆ, ಏಪ್ರಿಲ್ 2ರಂದು ಗಣಿತ, ಸಮಾಜ ಶಾಸ್ತ್ರ, ಏಪ್ರಿಲ್ 3ರಂದು ಅರ್ಥಶಾಸ್ತ್ರ, ಏಪ್ರಿಲ್ 4ರಂದು ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಮತ್ತು ಏಪ್ರಿಲ್ 6ರಂದು ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ) ಪರೀಕ್ಷೆ ನಡೆಯಲಿದೆ.