ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಲ್ಕೇ ದಿನದಲ್ಲಿ ಕೆಆರ್‌ಎಸ್ ಜಲಾಶಯಕ್ಕೆ 11 ಅಡಿ ನೀರು ಹೆಚ್ಚಳವಾಗಿದೆ. ಈ ಮೂಲಕ ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿಯಾದಂತಾಗಿದೆ.
ಹಳೇ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಉತ್ತಮ ಒಳಹರಿವು ಇದ್ದು, ನಾಲ್ಕೇ ದಿನದಲ್ಲಿ 11 ಅಡಿ ಭರ್ತಿಯಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಜೂನ್ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!
ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳಹರಿವು ಇದೆ. ಕಳೆದ ನಾಲ್ಕು ದಿನದ ಹಿಂದೆ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತೆ ಎಂದು ಅಲ್ಲಿನ ಜನರು ಆತಂಕಕ್ಕೊಳಗಾಗಿದ್ದರು.
124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 100.10 ಅಡಿ ನೀರಿದೆ. 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಸದ್ಯ 22.222 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಒಳಹರಿವಿನ ಪ್ರಮಾಣ 19,448 ಕ್ಯುಸೆಕ್ ಇದ್ದು, 670 ಕ್ಯುಸೆಕ್ ಹೊರಹರಿವಿದೆ.