ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಘೋಷಿಸಿದೆ. ಆಗಸ್ಟ್ 25 ಮತ್ತು 26ರಂದು ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರ ಅನುಕೂಲಕ್ಕಾಗಿ 1500 ಹೆಚ್ಚುವರಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ, ಆಗಸ್ಟ್ 27 ಮತ್ತು 31ರಂದು ರಾಜ್ಯದ ಹಾಗೂ ಅಂತಾರಾಜ್ಯದ ಹಲವು ಪ್ರಮುಖ ನಗರಗಳಿಂದ ಬೆಂಗಳೂರಿಗೆ ಮರಳಿ ಬರುವ ಪ್ರಯಾಣಿಕರಿಗಾಗಿ ವಿಶೇಷ ಬಸ್ಸುಗಳನ್ನು ಸಂಚಾರಕ್ಕೆ ಬಿಡಲಾಗುತ್ತದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಹಲವು ಸ್ಥಳಗಳಿಗೆ ಬಸ್ಸುಗಳನ್ನು ಹೆಚ್ಚುವರಿಯಾಗಿ ಸಂಚಾರಕ್ಕೆ ಬಿಡಲಾಗುತ್ತದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ, ಕುಶಾಲನಗರ, ಪಿರಿಯಾಪಟ್ಟಣ ಮೊದಲಾದ ಕಡೆಗಳಿಗೆ ಸೇವೆ ವಿಸ್ತರಿಸಲಾಗಿದ್ದು, ತಮಿಳುನಾಡು ಹಾಗೂ ಕೇರಳದ ಮಧುರೈ, ಚೆನ್ನೈ, ಕೊಯಮತ್ತೂರು, ತ್ರಿಶೂರ್, ಏರ್ನಾಕುಲಂ ಮುಂತಾದ ಕಡೆಗಳಿಗೆ ಶಾಂತಿನಗರ ಬಸ್ ನಿಲ್ದಾಣದಿಂದ ವಿಶೇಷ ಬಸ್ಸುಗಳು ಸಂಚರಿಸಲಿವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಸಂದರ್ಭದಲ್ಲಿ ನೀಡಲಾಗುವ ಬಸ್ ನಿಲ್ದಾಣ ಅಥವಾ ಪಿಕ್-ಅಪ್ ಪಾಯಿಂಟ್ ವಿವರಗಳನ್ನು ಗಮನಿಸಲು ನಿಗಮವು ಮನವಿ ಮಾಡಿದೆ. ಇ-ಟಿಕೆಟ್ ಬುಕ್ಕಿಂಗ್‌ನ್ನು ನಿಗಮದ ಅಧಿಕೃತ ವೆಬ್‌ಸೈಟ್(www.ksrtc.karnataka.gov.in) ಮುಖಾಂತರ ಮಾಡಬಹುದಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹೇಶ್ ಶೆಟ್ಟಿ ತಿಮರೋಡಿ ಬಂಧನ; ಜನರ ಪ್ರಶ್ನೆಗಳಿಗೆ ಸರ್ಕಾರದ ಉತ್ತರ ಏನು?
ಅದೇ ರೀತಿ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ಅಂತಾರಾಜ್ಯದ ಪ್ರಮುಖ ನಗರಗಳಲ್ಲಿರುವ ನಿಗಮದ ಬುಕ್ಕಿಂಗ್ ಕೌಂಟರ್‌ಗಳ ಮೂಲಕ ಸಹ ಮುಂಗಡ ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಬುಕ್ ಮಾಡಿದರೆ ಶೇಕಡಾ 5 ರಷ್ಟು ರಿಯಾಯಿತಿ ಮತ್ತು ಹೋಗುವ-ಬರುವ ಪ್ರಯಾಣವನ್ನು ಒಟ್ಟಿಗೆ ಕಾಯ್ದಿರಿಸಿದರೆ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ದೊರೆಯಲಿದೆ.
ನಿಗಮವು ಹೆಚ್ಚುವರಿ ಬಸ್ಸುಗಳ ವೇಳಾಪಟ್ಟಿ ಹಾಗೂ ಅವು ಹೊರಡುವ ಸ್ಥಳಗಳ ವಿವರಗಳನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೆ ಲಭ್ಯವಿರಿಸಿದೆ. ಹಬ್ಬದ ಸಮಯದಲ್ಲಿ ಸಾರ್ವಜನಿಕರ ಪ್ರಯಾಣಿಕ ಒತ್ತಡವನ್ನು ಗಮನಿಸಿ, ರಾಜ್ಯದ ವಿವಿಧ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದಲೂ ಅಗತ್ಯವಿದ್ದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಸಂಚಾರಕ್ಕೆ ಬಿಡಲಾಗುವುದು ಎಂದು ನಿಗಮವು ತಿಳಿಸಿದೆ.