- ಬಿಜೆಪಿಯಲ್ಲಿದ್ದ ಮಹಿಳೆಯರು ಕೂಡಾ ನನ್ನ ಪರ ನಿಲ್ಲಲಿಲ್ಲ
- ಪರಿಷತ್ ಬುದ್ಧಿವಂತರ ಚಾವಡಿ, ಅಲ್ಲಿ ಎಲ್ಲರೂ ಧೃತರಾಷ್ಟ್ರ ಆಗಬಾರದು
ನಾನು ಒಬ್ಬಳು ತಾಯಿ. ಹೆಣ್ಣುಮಗಳು. ಸಿ ಟಿ ರವಿ ಹೇಳಿಕೆಯಿಂದ ನನಗೆ ಅವಮಾನವಾಗಿದೆ, ನಾನು ದುಃಖಿತಳಾಗಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಿನ್ನೆ ಸದನದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸುತ್ತಿದ್ದೆವು. ಸದನವನ್ನು ಸಭಾಪತಿ 10 ನಿಮಿಷಗಳ ಕಾಲ ಮುಂದೂಡಿದ್ದರು. ನಾನು ಸದನದಲ್ಲಿ ನನ್ನ ಆಸನದಲ್ಲಿ ಕುಳಿತಿದ್ದೆ. ಆ ಸಂದರ್ಭದಲ್ಲಿ ಎಂಎಲ್‌ಸಿ ಸಿ.ಟಿ. ರವಿ ಅವರು ನನಗೆ ಕೆಟ್ಟ ಪದ ಬಳಸಿದ್ದಾರೆ. ಇದರಿಂದ ನನಗೆ ಬಹಳ ನೋವಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
ಸಿ. ಟಿ. ರವಿ ಅವರು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಡ್ರಗ್ ವ್ಯಸನಿ ಎಂದು ಹೇಳಿದಾಗ ನಾನು ಕೂಡ ಸಿ.ಟಿ. ರವಿ ಅವರಿಗೆ ನೀವು ಕೂಡಾ ಮಾಡಿದ ಅಪಘಾತ ಪ್ರಕರಣಕ್ಕೆ ನಿಮ್ಮನ್ನು ಕೊಲೆಗಡುಕ ಎನ್ನಬಹುದಾ ಎಂದಾಗ ಅವರು ನನಗೆ ಆ ಕೆಟ್ಟ ಪದವನ್ನು ಪ್ರಯೋಗಿಸಿದರು. ಆದರೆ ಈ ಹೇಳಿಕೆಯಿಂದ ನನಗೆ ಸಾಕಷ್ಟು ನೋವಾಗಿದ್ದು, ಬಿಜೆಪಿಯಲ್ಲಿದ್ದ ಮಹಿಳೆಯರು ಕೂಡ ನನ್ನ ಪರ ನಿಲ್ಲದಿರುವುದು ನನಗೆ ಬಹಳ ನೋವು ತಂದಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು
ವಿಧಾನ ಪರಿಷತ್ ಬುದ್ಧಿವಂತರ ಚಾವಡಿ. ಅಲ್ಲಿ ಎಲ್ಲರೂ ಧೃತರಾಷ್ಟ್ರ ಆಗಬಾರದಿತ್ತು. ನಾನು ಕೂಡಾ ಒಬ್ಬ ತಾಯಿ. ಅಕ್ಕ, ಅತ್ತೆ. ನನ್ನನ್ನು ನೋಡಿ ಸಾವಿರಾರು ಮಹಿಳೆಯರು ನಾವು ರಾಜಕಾರಣಕ್ಕೆ ಬರಬೇಕೆಂದುಕೊಂಡಿರುತ್ತಾರೆ. ಆದರೆ ಸದನದಲ್ಲಿ ಆದ ಪರಿಸ್ಥಿತಿಯಲ್ಲಿ ಒಬ್ಬ ಮಹಿಳೆಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಲ್ಲ ಎಂದು ಸಚಿವೆ ದುಃಖ ವ್ಯಕ್ತಪಡಿಸಿದರು.
