ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಪ್ರಾಣೇಶ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು. ತಮ್ಮ ಪರಿಷತ್ ಸದಸ್ಯತ್ವ ರದ್ದತಿಯನ್ನು ಪ್ರಶ್ನಿಸಿ ಪ್ರಾಣೇಶ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪರಿಣಾಮ, ಪ್ರಾಣೇಶ್ ಅವರು ಪರಿಷತ್ ಸದಸ್ಯತ್ವ ಅಧಿಕೃತವಾಗಿ ರದ್ದಾಗಿದೆ. ಅಲ್ಲದೆ, ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ಅವರಿಗೆ ಗೆಲುವು ದೊರೆತಿದ್ದು, ಅವರ ಪರಿಷತ್ ಸದಸ್ಯತ್ವ ಖಾತ್ರಿಯಾಗಿದೆ.
2021ರ ಡಿಸೆಂಬರ್ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್ನಿಂದ ಗಾಯತ್ರಿ ಶಾಂತೇಗೌಡ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾಗಿದ್ದ 2,410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಅಂತಿಮವಾಗಿ 1,188 ಮತಗಳನ್ನು ಪಡೆದಿದ್ದ ಎಂ.ಕೆ. ಪ್ರಾಣೇಶ್ ಅವರು ತಮ್ಮ ಪ್ರತಿಸ್ಪರ್ಧಿ ಗಾಯತ್ರಿ ಶಾಂತೇಗೌಡ (1,182 ಮತಗಳು) ಎದುರು ಕೇವಲ ಆರು ಮತಗಳ ಅತ್ಯಲ್ಪ ಅಂತರದಿಂದ ಜಯಗಳಿಸಿದ್ದರು.
ಆದರೆ, ಈ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪಷ್ಟ ನಿಯಮ ಉಲ್ಲಂಘನೆಯಾಗಿದೆ ಎಂದು ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಶೃಂಗೇರಿ, ಕೊಪ್ಪ, ಎನ್.ಆರ್. ಪುರ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯತ್ಗಳ 12 ನಾಮನಿರ್ದೇಶಿತ ಸದಸ್ಯರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದು ಕಾನೂನುಬಾಹಿರ ಮತ್ತು ಅವರಿಗೆ ಮತದಾನದ ಹಕ್ಕಿರುವುದಿಲ್ಲ ಎಂದು ಗಾಯತ್ರಿ ವಾದಿಸಿದ್ದರು.
ಈ ವಾದವನ್ನು ಪುರಸ್ಕರಿಸಿದ್ದ ಹೈಕೋರ್ಟ್, ಆ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪ್ರತ್ಯೇಕವಾಗಿ ಇಟ್ಟು ಮತಗಳ ಮರು ಎಣಿಕೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಅದರಂತೆ 2025ರ ಫೆಬ್ರವರಿ 28ರಂದು ಚಿಕ್ಕಮಗಳೂರಿನಲ್ಲಿ ಮತಗಳ ಮರು ಎಣಿಕೆ ಪ್ರಕ್ರಿಯೆ ನಡೆದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮುಚ್ಚಿದ ಲಕೋಟೆಯಲ್ಲಿ ಮರು ಎಣಿಕೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮರು ಮತ ಎಣಿಕೆಯಲ್ಲಿ ಗಾಯತ್ರಿ ಅವರು ಗೆಲುವು ಸಾಧಿಸಿದ್ದರು ಎಂದು ಹೇಳಲಾಗಿದೆ.
ಇದೇ ಸಮಯದಲ್ಲಿ, ಹೈಕೋರ್ಟ್ ನೀಡಿದ್ದ ಈ ಮರು ಎಣಿಕೆಯ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ.” ಪ್ರಾಣೇಶ್ ಅವರ ಅರ್ಜಿಯಲ್ಲಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲ” ಎಂದು ಹೇಳಿರುವ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ಈ ತೀರ್ಪಿನಿಂದಾಗಿ 2021ರ ಚುನಾವಣೆಯ ಫಲಿತಾಂಶ ತಲೆಕೆಳಗಾಗಿದ್ದು, ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವ ರದ್ದತಿಯಾಗಿದೆ. ಗಾಯತ್ರಿ ಶಾಂತೇಗೌಡ ಅವರು ಅಧಿಕೃತವಾಗಿ ವಿಧಾನಪರಿಷತ್ನ ಸದಸ್ಯೆಯಾಗಲಿದ್ದಾರೆ.



