ರಾಮಮಂದಿರ ಲೂಟಿ | ಕಳುವಾಗಿದ್ದು ಹಣ ಮಾತ್ರವಲ್ಲ, ಜನರ ನಂಬಿಕೆಯೂ!

Date:

ಅಯೋಧ್ಯೆಯಲ್ಲಿ ನಡೆದ ಅತಿ ದೊಡ್ಡ ಕಳವು ಕೇವಲ ಹಣದ ಕಳವಲ್ಲ. ಅದು ವಿಶ್ವಾಸದ ಕಳವು. ರಾಮಮಂದಿರ ಟ್ರಸ್ಟ್ ಅನ್ನು ‘ಟ್ರಸ್ಟ್’ ಎಂದು ಕರೆಯುವುದಕ್ಕೆ ಕಾರಣವಿದೆ. ಟ್ರಸ್ಟಿಗಳ ಮೊದಲ ಕರ್ತವ್ಯ ಆಸ್ತಿಪಾಸ್ತಿಗಳನ್ನು ನಿರ್ವಹಿಸುವುದಲ್ಲ; ಕೋಟ್ಯಂತರ ಭಕ್ತರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಾಪಾಡುವುದು. ಅದಕ್ಕಾಗಿಯೇ ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರ ಕಾಣಿಕೆ ದುರುಪಯೋಗವಾಗಿದೆ ಎಂಬ ಆರೋಪವು ಸಾಮಾನ್ಯ ಹಣಕಾಸು ಹಗರಣವಲ್ಲ. ನಂಬಿಕೆ ದ್ರೋಹವೂ ಕೂಡ!

- Advertisement -

ರಾಮಮಂದಿರಕ್ಕೆ ಕೋಟ್ಯಂತರ ಭಾರತೀಯರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಿದ್ದರು. ಕೆಲವರು ತಮ್ಮ ಒಂದು ದಿನದ ಕೂಲಿಯನ್ನು, ಕೆಲವರು ಆಭರಣಗಳನ್ನು, ಇನ್ನೂ ಕೆಲವರು ನಿವೃತ್ತಿ ವೇತನದ ಉಳಿತಾಯವನ್ನು ಅಥವಾ ಕುಟುಂಬದ ಅಮೂಲ್ಯ ಆಸ್ತಿಗಳನ್ನು ಸಮರ್ಪಿಸಿದ್ದರು. ಅವರು ಹಾಗೆ ಮಾಡಿದ್ದು, ಭಾರತದ ನಾಗರಿಕತೆಯ ಇತಿಹಾಸದಲ್ಲಿ ಮಹತ್ವದ ಕ್ಷಣವೊಂದರ ಭಾಗವಾಗಿದ್ದೇವೆ ಎಂಬ ನಂಬಿಕೆಯಿಂದ. ತಾವು ನೀಡಿದ ಪ್ರತಿಯೊಂದು ರೂಪಾಯಿಯೂ ಸತ್ಯ, ನ್ಯಾಯ ಹಾಗೂ ನೈತಿಕತೆಯ ಪ್ರತೀಕವಾದ ಶ್ರೀರಾಮನ ಸೇವೆಗೆ ಬಳಸಲಾಗುತ್ತದೆ ಎಂಬ ವಿಶ್ವಾಸದಿಂದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಆದ್ದರಿಂದ, ಈ ಪ್ರಕರಣವನ್ನು ನಿರ್ವಹಿಸಿದ ರೀತಿಯು, ಕಳವು ಆರೋಪಕ್ಕಿಂತಲೂ ಹೆಚ್ಚಿನ ಆತಂಕ ಹುಟ್ಟಿಸುವ ಪ್ರಶ್ನೆಗಳನ್ನು ಎತ್ತುತ್ತದೆ. ಗಮನಾರ್ಹವಾಗಿ, ಮೊದಲ ಪ್ರಶ್ನೆಯೇ ಭಕ್ತರ ಕಾಣಿಕೆಗಳನ್ನು ಸಂರಕ್ಷಿಸುವ ಹೊಣೆ ಹೊತ್ತಿದ್ದ ಸಂಸ್ಥೆಯ ಕುರಿತಾಗಿದೆ. ಭಾರೀ ಪ್ರಮಾಣದ ಹಣಕಾಸು ಅಕ್ರಮಗಳ ಗಂಭೀರ ಆರೋಪಗಳು ಹೊರಬಂದಾಗ, ಪ್ರಾಥಮಿಕ ತನಿಖೆಗಳು ವ್ಯವಸ್ಥಾತ್ಮಕ ವೈಫಲ್ಯಗಳತ್ತ ಬೆರಳು ತೋರಿದಾಗ, ತನಿಖೆ ನಡೆಯುತ್ತಿರುವ ಅವಧಿಯಲ್ಲೇ ಆ ಸಂಸ್ಥೆಯ ಆಡಳಿತ ಮಂಡಳಿಯು ಈಗಿರುವಂತೆಯೇ ಮುಂದುವರಿಯಬೇಕೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಅನ್ನು ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ರಚಿಸಲಾಗಿತ್ತು. ಹಗರಣ ಬೆಳಕಿಗೆ ಬಂದ ಬಳಿಕ, ಅದರ ಪ್ರಧಾನ ಕಾರ್ಯದರ್ಶಿ ಮತ್ತು ಒಬ್ಬ ಟ್ರಸ್ಟಿ ರಾಜೀನಾಮೆ ನೀಡಿದ್ದಾರೆ. ಆದರೆ, ಸಂಸ್ಥೆಯ ಸಂಪೂರ್ಣ ವ್ಯವಸ್ಥೆಯೇ ವಿಫಲವಾಗಿದೆ ಎಂಬ ಅನುಮಾನ ಮೂಡಿದರೆ, ತನಿಖೆ ಆರಂಭವಾದ ಕೂಡಲೇ ಟ್ರಸ್ಟ್ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬೇಕಿತ್ತಲ್ಲವೇ? ಆದರೂ, ಟ್ರಸ್ಟ್‌ ಅಮಾನತು ಮಾಡದೇ ಇರುವುದೇಕೆ? ಅಥವಾ ವಿಸರ್ಜಿಸದಿರುವುದೇಕೆ? ಇದು ಯಾರನ್ನಾದರೂ ಮುಂಚಿತವಾಗಿಯೇ ತಪ್ಪಿತಸ್ಥರೆಂದು ಪರಿಗಣಿಸುವ ಪ್ರಶ್ನೆಯಲ್ಲ; ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸುವ ಪ್ರಶ್ನೆ.

ಎರಡನೇ ಪ್ರಶ್ನೆ; ಟ್ರಸ್ಟ್‌ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಪಾತ್ರದ ಕುರಿತಾದುದು. ಆಡಳಿತಾಧಿಕಾರಿಗಳಿಗೆ ಜವಾಬ್ದಾರಿ ಎಂದರೆ ಉತ್ತರದಾಯಿತ್ವ ಎಂಬ ಮೌಲ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಅಪಾರ ಪ್ರಮಾಣದ ಸಾರ್ವಜನಿಕ ದೇಣಿಗೆಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳು ಸ್ಥಾನ ಹೊಂದಿದ್ದರೆ, ಅವರ ಮೇಲ್ವಿಚಾರಣೆಯ ಪಾತ್ರವೇನು? ಅವರು ಕೇವಲ ಅಧಿಕಾರದ ಪ್ರತೀಕಗಳಾಗಿದ್ದರೇ? ಅಥವಾ ಹಣಕಾಸಿನ ಶಿಸ್ತು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವ ಹೊಣೆಗಾರಿಕೆಯೂ ಅವರದ್ದಾಗಿತ್ತೇ?

ಸಾರ್ವಜನಿಕ ಸಂಸ್ಥೆಗಳು ಅಧಿಕಾರದ ಮೇಲ್ಮಟ್ಟದಲ್ಲಿರುತ್ತವೆ. ಆದ್ದರಿಂದ, ಉತ್ತರದಾಯಿತ್ವ ಕೆಳಮಟ್ಟದಲ್ಲೇ ಕೊನೆಗೊಳ್ಳುವ ತತ್ವದ ಮೇಲೆ ಅವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇಬ್ಬರು ಟ್ರಸ್ಟ್ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದರೆ, ಟ್ರಸ್ಟ್‌ನಲ್ಲಿದ್ದ ಆಡಳಿತಾಧಿಕಾರಿಗಳ ಹೊಣೆಗಾರಿಕೆಯ ಪಾತ್ರವೇನು?

ಮೂರನೇ ಪ್ರಶ್ನೆ; ಆರಂಭದಿಂದಲೇ ಅನುಸರಿಸಲಾದ ತನಿಖಾ ವಿಧಾನಕ್ಕೆ ಸಂಬಂಧಿಸಿದೆ. ಹಣಕಾಸು ಅಪರಾಧಗಳಲ್ಲಿ ಸಮಯವೇ ಅತಿ ದೊಡ್ಡ ಶತ್ರು ಎಂಬುದು ಪ್ರತಿಯೊಬ್ಬ ತನಿಖಾಧಿಕಾರಿಗೂ ಗೊತ್ತಿರುವ ಸಂಗತಿ. ಎಲೆಕ್ಟ್ರಾನಿಕ್ ದಾಖಲೆಗಳನ್ನು ಬದಲಾಯಿಸಬಹುದು, ಸಿಸಿಟಿವಿ ದೃಶ್ಯಗಳು ಅಳಿಸಿಹೋಗಬಹುದು, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಬಹುದು, ಆಸ್ತಿಗಳನ್ನು ವರ್ಗಾಯಿಸಬಹುದು, ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಹುದು. ಆದರೂ ಆರಂಭಿಕ ಪ್ರತಿಕ್ರಿಯೆ ಆಶ್ಚರ್ಯಕರ ರೀತಿಯಲ್ಲಿ ಅವ್ಯವಸ್ಥಿತವಾಗಿತ್ತು. ತಕ್ಷಣವೇ ಎಫ್‌ಐಆರ್ ದಾಖಲಿಸಿ, ಲಭ್ಯವಿರುವ ಪ್ರತಿಯೊಂದು ಸಾಕ್ಷ್ಯವನ್ನೂ ಸಂರಕ್ಷಿಸುವ ಬದಲು, ಆಡಳಿತಾತ್ಮಕ ಕ್ರಮಗಳ ಮೂಲಕ ಪ್ರಕ್ರಿಯೆ ಆರಂಭಿಸಲಾಯಿತು.

ಆದ್ದರಿಂದ ಇನ್ನೂ ಅನೇಕ ಪ್ರಶ್ನೆಗಳು ಉತ್ತರ ಕಾಣದೆ ಉಳಿದಿವೆ. ಸಾಕ್ಷ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂರಕ್ಷಿಸಬಹುದಿತ್ತೇ? ಬ್ಯಾಂಕ್ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಹಣಕಾಸು ವ್ಯವಹಾರಗಳನ್ನು ಕೂಡಲೇ ಸುರಕ್ಷಿತಗೊಳಿಸಲಾಗಿತ್ತೇ?

ನಾಲ್ಕನೇ ಪ್ರಶ್ನೆ; ತನಿಖೆಯ ಸ್ವರೂಪದ ಕುರಿತಾಗಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಪರಿಣಾಮಕಾರಿ ವ್ಯವಸ್ಥೆಯಾಗಬಹುದು. ಆದರೆ, ಅದು ಪ್ರಕರಣಕ್ಕೆ ಅಗತ್ಯವಾದ ಪರಿಣತಿಯನ್ನು ಹೊಂದಿದ್ದರೆ ಮಾತ್ರ. ಅಪಾರ ಪ್ರಮಾಣದ ಸಾರ್ವಜನಿಕ ದೇಣಿಗೆಗಳು, ಸಂಕೀರ್ಣ ಹಣಕಾಸು ವ್ಯವಹಾರಗಳು ಹಾಗೂ ವ್ಯಾಪಕ ದಾಖಲೆಗಳಿರುವ ಪ್ರಕರಣವನ್ನು ಕೇವಲ ಆಡಳಿತಾತ್ಮಕ ತನಿಖೆಯಿಂದ ನಿಭಾಯಿಸಲು ಸಾಧ್ಯವಿಲ್ಲ.

ಇಂತಹ ಪ್ರಕರಣಗಳಲ್ಲಿ ತನಿಖೆಯ ಉದ್ದೇಶ ಕೇವಲ ಸತ್ಯಾಂಶಗಳನ್ನು ಪತ್ತೆಹಚ್ಚುವುದಲ್ಲ; ನ್ಯಾಯಾಲಯದ ವಿಚಾರಣೆಯಲ್ಲಿ ಬಲಿಷ್ಠ ಪ್ರಕರಣವನ್ನು ನಿರ್ಮಿಸುವುದು. ಆದ್ದರಿಂದ ಪ್ರಕರಣದ ತನಿಖೆಯನ್ನು ಹಣಕಾಸು ಫೊರೆನ್ಸಿಕ್ ತಜ್ಞರು, ಸೈಬರ್ ತನಿಖಾ ಪರಿಣತರು, ಲೆಕ್ಕಪತ್ರ ತಜ್ಞರು, ಖರೀದಿ ಪ್ರಕ್ರಿಯೆ ಪರಿಣತರು, ಬ್ಯಾಂಕಿಂಗ್ ದಾಖಲೆಗಳ ವಿಶ್ಲೇಷಕರು, ಡಿಜಿಟಲ್ ಸಾಕ್ಷ್ಯ ತಜ್ಞರು, ಅನುಭವಿ ತನಿಖಾಧಿಕಾರಿಗಳು ಹಾಗೂ ಕಾನೂನು ಪರಿಣತರೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ತನಿಖೆಯನ್ನು ಅತ್ಯಂತ ಸಮರ್ಥ ಬಹುಶಾಖಾ ತಜ್ಞರ ತಂಡಕ್ಕೆ ವಹಿಸಬೇಕು. ಆದರೆ, ಅದೆಲ್ಲವೂ ಕಾರ್ಯರೂಪಕ್ಕೆ ಬಂದಿದೆಯೇ?

ಐದನೇ ಪ್ರಶ್ನೆ; ಸಂಸ್ಥೆಯ ಸ್ವತಂತ್ರತೆಯ ಕುರಿತಾಗಿದೆ. ಎಸ್‌ಐಟಿ ವರದಿಗಳು ಟ್ರಸ್ಟ್‌ಗೆ ಸಂಬಂಧಿಸಿದ ಹಿರಿಯ ಆಡಳಿತಾಧಿಕಾರಿಗಳ ಮೂಲಕವೇ ಸಾಗಿವೆ ಎಂಬ ವರದಿಗಳಿವೆ. ಇದರಿಂದ ತನಿಖೆ, ತನಿಖೆಗೆ ಒಳಪಟ್ಟಿರುವ ಅದೇ ಆಡಳಿತಾತ್ಮಕ ವ್ಯವಸ್ಥೆಯೊಳಗೆ ನಡೆಯುತ್ತಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಮೂಡುವುದು ಸಹಜ.

ಆರನೇ ಪ್ರಶ್ನೆ; ನಿವೃತ್ತ ಅಧಿಕಾರಿಯೊಬ್ಬರು ಮುಂದಿಟ್ಟಿರುವ ಆಶ್ಚರ್ಯಕರ ಸಲಹೆಯ ಕುರಿತಾಗಿದೆ. ಸಮಸ್ಯೆಗೆ ಪರಿಹಾರವೆಂದರೆ ಮತ್ತೊಬ್ಬ ಅಧಿಕಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಿಸುವುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಮನೋಭಾವವೇ ಅನೇಕ ಸಾರ್ವಜನಿಕ ಸಂಸ್ಥೆಗಳ ಆಡಳಿತವನ್ನು ದುರ್ಬಲಗೊಳಿಸಿದೆ.

ಪ್ರಶ್ನೆಯೇನೆಂದರೆ, ಸಿಇಒ ಅಧಿಕಾರಿಯಾಗಿರಬೇಕೋ ಅಥವಾ ಖಾಸಗಿ ವಲಯದವರಾಗಿರಬೇಕೋ ಎಂಬುದಲ್ಲ. ಮುಕ್ತ, ಪಾರದರ್ಶಕ ಹಾಗೂ ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ಅತ್ಯುತ್ತಮ ವೃತ್ತಿಪರರನ್ನು ಆಯ್ಕೆ ಮಾಡಲಾಗುತ್ತಿದೆಯೇ ಎಂಬುದಾಗಿದೆ. ಜಗತ್ತಿನ ಪ್ರಮುಖ ಧಾರ್ಮಿಕ ಸಂಸ್ಥೆಗಳಲ್ಲಿ ಒಂದನ್ನು ನಿರ್ವಹಿಸಲು ಹಣಕಾಸು, ಲೆಕ್ಕಪರಿಶೋಧನೆ, ಖರೀದಿ, ನಿಯಮಗಳ ಅನುಸರಣೆ, ತಂತ್ರಜ್ಞಾನ ಹಾಗೂ ಅಪಾಯ ನಿರ್ವಹಣೆಯ ಪರಿಣತಿ ಅಗತ್ಯ. ಹೀಗಿರುವಾಗ, ಹೊಣೆಗಾರಿಕೆಯನ್ನು ನಿಗದಿಪಡಿಸದೆ, ಒಂದು ಅಧಿಕಾರಶಾಹಿ ಹುದ್ದೆಯನ್ನು ಮತ್ತೊಬ್ಬ ಅಧಿಕಾರಿಯೊಂದಿಗೆ ಬದಲಾಯಿಸುವುದು ರೋಗವನ್ನು ಕಡೆಗಣಿಸಿ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡಿದಂತಾಗುತ್ತದೆ.

ಈ ಲೇಖನ ಓದಿದ್ದೀರಾ?: ಬಿಗಡಾಯಿಸಿದೆ ಸೋನಮ್ ಆರೋಗ್ಯ; ಇತಿಹಾಸದಲ್ಲಿ ಮೋದಿಯೇ ಅಪರಾಧಿ – ಸಿಗದು ಕ್ಷಮೆ!

ಏಳನೇ ಪ್ರಶ್ನೆ; ಪಾರದರ್ಶಕತೆ. ಈ ಹಣ ಭಕ್ತರದ್ದು. ಆದ್ದರಿಂದ ತನಿಖೆಯ ಪ್ರಗತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ನೈತಿಕ ಹಕ್ಕು ಅವರಿಗಿದೆ. ಯಾವ ಕ್ರಮಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ? ಯಾವ ವ್ಯವಸ್ಥಾತ್ಮಕ ವೈಫಲ್ಯಗಳು ಪತ್ತೆಯಾಗಿವೆ? ತನಿಖೆಗೆ ಧಕ್ಕೆಯಾಗದ ರೀತಿಯಲ್ಲಿ ನಿಯಮಿತ ಸಾರ್ವಜನಿಕ ಮಾಹಿತಿ ನೀಡುವುದು ಜನರ ವಿಶ್ವಾಸವನ್ನು ಬಲಪಡಿಸುತ್ತದೆ.

ಕೊನೆಗೆ, ಈ ಪ್ರಕರಣ ಸರ್ಕಾರ ಮತ್ತು ಪ್ರತಿಪಕ್ಷಗಳು ಹಾಗೂ ಧಾರ್ಮಿಕ ಸಂಸ್ಥೆಗಳ ನಡುವಿನ ಸಂಬಂಧವನ್ನು ಮರುಪರಿಶೀಲಿಸಬೇಕಾಗುತ್ತದೆ.

ಅಪಾರ ಪ್ರಮಾಣದ ಸಾರ್ವಜನಿಕ ದೇಣಿಗೆಗಳನ್ನು ಸ್ವೀಕರಿಸುವ ಸಂಸ್ಥೆಗಳು ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ನ್ಯಾಯಸಮ್ಮತ ಹೊಣೆಗಾರಿಕೆ. ಆದರೆ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಅಥವಾ ಗುರುದ್ವಾರಗಳಂತಹ ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಸಂಸ್ಥೆಗಳ ವೃತ್ತಿಪರ ಆಡಳಿತಕ್ಕೆ ಅಧಿಕಾರಶಾಹಿ ಮೇಲ್ವಿಚಾರಣೆ ಪರ್ಯಾಯವಾಗಬಾರದು.

ಅದಕ್ಕಾಗಿ, ವೃತ್ತಿಪರ ಆಯ್ಕೆ ಪ್ರಕ್ರಿಯೆಯ ಮೂಲಕ ನೇಮಕವಾಗುವ ಮುಖ್ಯ ಕಾರ್ಯನಿರ್ವಾಹಕರು, ಸ್ವತಂತ್ರ ಆಡಳಿತ ಮಂಡಳಿಗಳು, ಕಡ್ಡಾಯ ಫೊರೆನ್ಸಿಕ್ ಲೆಕ್ಕಪರಿಶೋಧನೆ, ಪಾರದರ್ಶಕ ಖರೀದಿ ಪ್ರಕ್ರಿಯೆ, ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ, ಹಿತಾಸಕ್ತಿ ಸಂಘರ್ಷ ಘೋಷಣೆ, ಮಾಹಿತಿ ಬಹಿರಂಗಪಡಿಸುವವರ (ವಿಸಲ್‌ಬ್ಲೋವರ್) ರಕ್ಷಣೆ ಹಾಗೂ ನಿಯಮಿತವಾಗಿ ಸಾರ್ವಜನಿಕರಿಗೆ ಲೆಕ್ಕಪರಿಶೋಧಿತ ವರದಿಗಳನ್ನು ಪ್ರಕಟಿಸುವ ವ್ಯವಸ್ಥೆಗಳು ಅಗತ್ಯ.

ಅಂದಹಾಗೆ, ರಾಮಮಂದಿರವು ಕೇವಲ ಕಲ್ಲಿನಿಂದ ನಿರ್ಮಿತವಾದ ಭವ್ಯ ಕಟ್ಟಡವಾಗಿರಲೆಂದು ನಿರ್ಮಿಸಲ್ಪಟ್ಟದ್ದಲ್ಲ. ಅದು ಶ್ರೀರಾಮನ ಆದರ್ಶಗಳಾದ ಸತ್ಯ, ಕರ್ತವ್ಯ, ತ್ಯಾಗ, ಪ್ರಾಮಾಣಿಕತೆ ಹಾಗೂ ನ್ಯಾಯದ ಪ್ರತೀಕವಾಗಿರಬೇಕಿತ್ತು. ಆದ್ದರಿಂದ, ಈಗ ಕೋಟ್ಯಂತರ ಜನರ ಆ ನಂಬಿಕೆಗೆ ಗೌರವ ಸಲ್ಲಿಸಬೇಕಾಗಿದೆ. ಅದು ಹೊಸ ಭರವಸೆಗಳು, ಹೊಸ ಸಮಿತಿಗಳು ಅಥವಾ ಮೇಲ್ನೋಟದ ಆಡಳಿತಾತ್ಮಕ ಬದಲಾವಣೆಗಳಿಂದ ಸಾಧ್ಯವಿಲ್ಲ. ಸಂಪೂರ್ಣ ಸ್ವತಂತ್ರ, ವೃತ್ತಿಪರ ಮತ್ತು ಪಾರದರ್ಶಕ ತನಿಖೆಯ ಮೂಲಕ ಮಾತ್ರ ಸಾಧ್ಯ.

ಏಕೆಂದರೆ, ಇದು ಕೇವಲ ಹಣ ಕಳುವಾದ ಪ್ರಕರಣವಲ್ಲ. ಇದು ಜನರ ವಿಶ್ವಾಸವೇ ಕಳುವಾದ ಪ್ರಕರಣ.

ಬರಹ: ಯಶೋವರ್ಧನ್ ಆಜ಼ಾದ್ (ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಿತ ಲೇಖನ)
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...