ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್‌ ಆಗ್ತದೆ ಎನ್ನುತ್ತಿರುವ ಮಹಿಳೆಯರು

Date:

Advertisements

ಸರ್ಕಾರ ಪೈಲೆ ಸಾರಾಯಿ ಬಂದ್‌ ಮಾಡದ್‌ ಅಷ್ಟೇ ಅಲ್ಲ, ಸಾರಾಯಿ ದುಕಾನ್‌ ತೆಗಿಲಾಕ್‌ ಲೈಸೆನ್ಸ್‌ ಕುಡೋದು ಪೈಲೇ ಬಂದ್‌ ಮಾಡ್ಬೇಕ್. ಯಾವತ್ತು ಸಾರಾಯಿ ಬಂದ್‌ ಆಗ್ತುದೋ ಆಗೊತ್ತೇ ಹೆಣ್ಮಕ್ಕಳ ಜೀವಕ್ಕೂ ಥೋಡೆ ನೆಮ್ಮದಿ ಸಿಗ್ತುದ್. ಇಲ್ಲಂದುರ್ ಕುಡುಕು ಗಂಡಸುರದಿಂದ ಹೆಂಡ್ತಿ ಮಕ್ಕುಳ ಜಿಂದಗಿ ಬರ್ಬಾದ್‌ ಆಗಾದ್‌ ತಪ್ಪಲ್ಲ.

ರಾಜ್ಯದ ಸಣ್ಣ ಗ್ರಾಮ ಪಂಚಾಯತಿಗಳು, ನಗರದ ಸೂಪರ್‌ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟಕ್ಕೆ ಹೊಸ ಪರವಾನಗಿ ನೀಡುವುದು, ಬಳಕೆಯಿಲ್ಲದ ದೀರ್ಘಕಾಲದ ಪರವಾನಗಿಗಳಿಗೆ ಮರುಜೀವ ನೀಡುವುದು ಸೇರಿದಂತೆ ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಮದ್ಯದಂಗಡಿ ತೆರೆಯಲು ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ರಾಜ್ಯದ್ಯಂತ ತೀವ್ರವಾಗಿ ಖಂಡನೆ ವ್ಯಕ್ತವಾಗಿದೆ. ಅದರಲ್ಲೂ ಮದ್ಯಪಾನ ನಿಷೇಧ ಆಂದೋಲನ ಸಮಿತಿಯ ಮಹಿಳೆಯರು ಸರ್ಕಾರದ ನಿರ್ಧಾರದ ವಿರುದ್ಧ ಅಕ್ಟೋಬರ್‌ 2 (ಗಾಂಧಿ ಜಯಂತಿ)ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಧರಣಿ ಸತ್ಯಾಗ್ರಹ ನಡೆಸುವ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ನಿರಂತರವಾಗಿ ಕೇಳಿ ಬರುತ್ತಿವೆ. ಪೊಲೀಸ್‌ ಹಾಗೂ ಅಬಕಾರಿ ಇಲಾಖೆ ಕಾರ್ಯಚರಣೆ ನಡೆಸಿ ಅಕ್ರಮ ದಂಧೆಕೋರರನ್ನು ಮಟ್ಟ ಹಾಕಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಿ ಮದ್ಯ ಜಪ್ತಿ ಮಾಡಿದರೂ ಅಕ್ರಮ ಮದ್ಯ ಮಾರಾಟ ದಂಧೆ ಮಾತ್ರ ನಿಲ್ಲುತ್ತಿಲ್ಲ. ಅಬಕಾರಿ ಇಲಾಖೆ, ಪೊಲೀಸ್‌ ಇಲಾಖೆ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡರೂ “ನೀನು ಚಾಪೆ ಕೆಳಗೆ ಹೋದರೆ ನಾನು ರಂಗೋಲಿ ಕೆಳಗೆ ನುಗ್ಗುವೆ” ಎಂಬಂತೆ ಹೊಸ ಉಪಾಯ ಹುಡುಕುವ ದಂಧೆಕೋರರಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಕಟು ಸತ್ಯ.

Advertisements

ಅಕ್ರಮ ಮದ್ಯ ಮಾರಾಟ ಸ್ವರೂಪ ಹೇಗೆ?

ಪೊಲೀಸ್‌ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ಮಾಡುವ ಅಡ್ಡೆಗಳ ಮೇಲೆ ದಾಳಿ ನಡೆಸುವುದು ದಂಡ ವಿಧಿಸುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅಕ್ರಮ ಮದ್ಯ ಮಾರಾಟ ದಂಧೆ ವ್ಯಾಪಕವಾಗಿ ನಡೆಯುವುದು ಬಹುತೇಕ ಗ್ರಾಮೀಣ ಭಾಗದಲ್ಲಿ. ಕಾರಣ ಕೂಲಿಕಾರ್ಮಿಕರು, ಬಡಜನರೇ ಟಾರ್ಗೆಟ್‌ ಮಾಡಿಕೊಂಡ ದಂಧೆಕೋರರು ಹಳ್ಳಿಗಳಲ್ಲಿ ತಮ್ಮ ಕಳ್ಳಾಟ ನಡೆಸುವುದು ರೂಢಿಸಿಕೊಂಡಿದ್ದಾರೆ.

ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಕಿರಾಣಿ ಅಂಗಡಿ, ಹೋಟೆಲ್ ಗಳಲ್ಲಿ ಬೆಳಗ್ಗೆ ಕುಡಿಯಲು ಸಮಯಕ್ಕೆ ಹಾಲು ಸಿಗುವುದಿಲ್ಲ, ಆದರೆ‌ ಮದ್ಯ ಮಾತ್ರ ಪಕ್ಕಾ ಸಿಕ್ಕೇ ಸಿಗುತ್ತದೆ. ಅದರಲ್ಲೂ ಪರವಾನಗಿ ಇಲ್ಲದಿದ್ದರೂ ಮದ್ಯ ಮಾರಾಟ ಕೇಂದ್ರಗಳಾಗಿ ರೂಪಿಸಿಕೊಂಡ ಅಂಗಡಿಗಳಲ್ಲಿ ಅಕ್ರಮ ಮದ್ಯ ಅಷ್ಟೇ ಅಲ್ಲದೇ ನಕಲಿ ಮದ್ಯ ಮಾರಾಟ ದಂಧೆ ನಡೆದರೂ ಯಾರೂ ಕೇಳುವರಿಲ್ಲ. ಇದರಿಂದ ದಿನದಿಂದ ದಿನಕ್ಕೆ ಈ ಕಳ್ಳಾಟ ದಂಧೆ ಮಿತಿಮೀರಿದೆ, ಪರಿಣಾಮ ಲೆಕ್ಕವಿಲ್ಲದಷ್ಟು ಕುಟುಂಬಗಳು ಸರ್ವನಾಶವಾಗಿದ್ದು ಅಲ್ಲದೆ ಸಮಾಜದ ಸ್ವಾಸ್ಥ್ಯ ಹಾಳಾಗಿದ್ದು ಸುಳ್ಳಲ್ಲ ಎಂಬುದು ಪ್ರಜ್ಷಾವಂತ ನಾಗರಿಕರ ಅಭಿಮತ.

“ಇವತ್ತು ಪ್ರತಿಯೊಂದು ಹಳ್ಳಿಯ ಕಿರಾಣಿ ಅಂಗಡಿ, ಹೋಟೆಲ್‌, ಪಾನ್‌ ಶಾಪ್‌ ಅಲ್ಲದೆ ಮನೆಗಳಲ್ಲಿಯೂ ಅಕ್ರಮ ಮದ್ಯ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಮೇಲ್ಗಡೆ ಬಿಸ್ಕಿಟ್‌ ಕೊಡ್ತಾರೆ, ಕೆಳಗಡೆ ಸಾರಾಯಿ ಪಾಕೆಟ್ ಕೊಡ್ತಾರೆ. ಇದರಿಂದ ಬಡಜನರು ಅದರಲ್ಲೂ ಕೂಲಿಕಾರ್ಮಿಕ ವರ್ಗದವರೇ ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗುವ ಕಾರಣ ಅದೆಷ್ಟೋ ಕುಟುಂಬಗಳಲ್ಲಿ ಮಾನಸಿಕ ಕಿರುಕುಳ, ಕೊಲೆ, ಆತ್ಮಹತ್ಯೆ, ಮಹಿಳಾ ದೌರ್ಜನ್ಯ ಸೇರಿದಂತೆ ಬಾಲಕಾರ್ಮಿಕರ ಸಂಖ್ಯೆ ಏರಿಕೆಗೆ ಮದ್ಯ ಮಾರಾಟವೇ ಮೂಲ ಕಾರಣವಾಗಿದೆ. ಅಕ್ರಮ ಮದ್ಯ ಮಾರಾಟ ದಂಧೆ ಬಂದ್‌ ಜೊತೆಗೆ ಸಂಪೂರ್ಣ ಮದ್ಯ ನಿಷೇಧ ಮಾಡಬೇಕೆಂದು “ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತೆ ಸುಶೀಲಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೊಸ ಮದ್ಯದಂಗಡಿ ತೆರೆಯುವುದು ಜನವಿರೋಧಿ ನೀತಿ:

“ಈಗಾಗಲೇ ಮದ್ಯಪಾನದ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನರ ಜೀವನ ತತ್ತರಿಸಿ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಕೌಟುಂಬಿಕ ಕಲಹ, ಸಮಾಜಘಾತಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುತ್ತದೆ. ಅಸಂಖ್ಯಾತ ಅಪ್ರಾಪ್ತ ಜೀವಗಳು ಕುಡಿತದಿಂದ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಭೀಕರ ಪರಿಣಾಮ ಕಂಡಿಯೂ ಕಂಡರಿಯದಂತೆ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲು ಹೊರಟಿದ ಸರ್ಕಾರದ ನಡೆ ಜನವಿರೋಧಿ ನೀತಿಗೆ ಹಿಡಿದ ಕನ್ನಡಿ” ಎಂದು ಎಐಡಿಎಸ್‌ಓ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಆಕ್ರೋಶ ವ್ಯಕ್ತಪಡಿಸುತ್ತಾರೆ.

WhatsApp Image 2023 10 10 at 3.19.15 PM

“ಮದ್ಯಪಾನದಿಂದ ಗ್ರಾಮೀಣ ಭಾಗದ ಮನೆ-ಮನೆಗಳಲ್ಲಿ ಪ್ರತಿನಿತ್ಯ ಕಿರಿಕಿರಿ, ಜಗಳ, ಹೊಡೆದಾಟ ನಡೆಯುತ್ತಿವೆ. ಕುಡಿತದಿಂದ ಹೆಣ್ಣು ಮಕ್ಕಳಿಗೆ ಮಾನಸಿಕ ಹಿಂಸೆ ಸೇರಿದಂತೆ ಮಕ್ಕಳ ಅಮೂಲ್ಯ ಭವಿಷ್ಯ ಹಾಳಾಗುತ್ತಿದೆ. ಶ್ರಮಿಕ ವರ್ಗದ ಕುಟುಂಬಗಳಲ್ಲಿ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗದೆ ಬದುಕು ದೂಡುವುದು ಅಸಾಧ್ಯ, ಕುಟುಂಬ ನಿರ್ವಹಣೆ ಜವಾಬ್ದಾರಿ ಜೊತೆಗೆ ಮಕ್ಕಳ ಪೋಷಣೆ ನಡೆಸುವುದು ತೀರ ಕಷ್ಟಕರವಾಗಿದೆ. ಇಂಥ ಪರಿಸ್ಥಿತಿಯಲ್ಲಿದ್ದ ಕುಟುಂಬದ ಯಜಮಾನ ಕುಡಿತಕ್ಕೆ ಬಲಿಯಾದರೆ ಇಡೀ ಸಂಸಾರವೇ ನಾಶವಾಗುತ್ತಿದೆ. ಸರ್ಕಾರ ಮತ್ತೆ ಹೊಸ ಮದ್ಯಪಾನ ಅಂಗಡಿ ತೆರದರೆ ಮನೆಗಳು ಸ್ಮಶಾನ ಆಗುವುದು ಗ್ಯಾರಂಟಿ. ಜನರಿಗೆ ಆರ್ಥಿಕ ಬಲವರ್ಧನೆಗೆ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು ಶ್ಲಾಘನೀಯ, ಆದರೆ ಹೊಸ ಮದ್ಯದಂಗಡಿಗೆ ಪರವಾನಗಿ ಕೊಟ್ಟು ʼಗ್ಯಾರಂಟಿʼ ರೂಪದಲ್ಲಿ ಜಾರಿಗೊಳಿಸಲು ಮುಂದಾದರೆ ಈಗಾಗಲೇ ಜಾರಿಯಾದ ಗ್ಯಾರಂಟಿಗಳು ನಿರುಪಯುಕ್ತ” ಎಂಬುದು ಕಲಬುರಗಿ ಜಿಲ್ಲೆ ಚಿಂಚೋಳಿಯ ಲಕ್ಷ್ಮಿ ಪಾಟೀಲ್ ಅವರ ಅಭಿಪ್ರಾಯ.

ಅತಿಯಾದ ಮದ್ಯ ಸೇವನೆ; ಕುಟುಂಬಗಳು ಬೀದಿಪಾಲು:

“ನನ್ನ ಗಂಡ ಉದ್ಯೋಗಿಮ ತಿಂಗಳಿಗೆ 35 ಸಾವಿರ ಸಂಬಳ, ಆದರೆ ಒಂದೇ ಒಂದು ರೂಪಾಯಿ ಮನೆಗೆ ತರಲಾರದೆ ಎಲ್ಲವೂ ಕುಡಿತಕ್ಕೆ ಹಾಕುತ್ತಾರೆ. ಸ್ನೇಹಿತರೊಂದಿಗೆ ಕುಡಿದು ರಾತ್ರಿ ಬೀದಿಯಲ್ಲಿ, ಬಸ್‌ ನಿಲ್ದಾಣದಲ್ಲಿ ಮಲಗುತ್ತಾರೆ. ಖುದ್ದು ನಾನೇ ಹೋಗಿ ಕರೆದುಕೊಂಡು ಬರಬೇಕು. ದಿನಕ್ಕೆ ಮೂನ್ನೂರು ರೂಪಾಯಿಗೆ ಕೂಲಿ ಮಾಡಿ ಕುಟುಂಬ ನಿರ್ವಹಣೆ ಜೊತೆಗೆ ನಾಲ್ಕು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವೆ. ನಮ್ಮ ಕುಟುಂಬದ ಸಂತಸ, ನೆಮ್ಮದಿ ಜೊತೆಗೆ ಬದುಕಿನ ಉತ್ಸಾಹವೇ ಕಳೆದು ಹೋಗಿದೆ. ವಿಪರೀತ ಕುಡಿತದಿಂದಾಗಿ ಗಂಡನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಇಂತಹ ಚಟಗಳಿಗೆ ಬಲಿಯಾದವರಿಗೆ ಕಡಿವಾಣ ಹಾಕಲು ಮಹಿಳೆಯರಿಂದ ಸಾಧ್ಯವೇ? ಏನಾದರೂ ಬುದ್ಧಿವಾದ ಹೇಳಿದರೆ ನಮ್ಮ ಮೇಲೆಯೇ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ಈ ನರಕಯಾತನೆ ಅನುಭವಿಸುವ ಅಸಂಖ್ಯೆ ಬಡ ಹೆಣ್ಣು ಮಕ್ಕಳ ಸಂಕಟ ಕಂಡು ಸರ್ಕಾರ ಮದ್ಯಪಾನ ಸಂಪೂರ್ಣ ನಿಷೇಧಕ್ಕೆ ಮುಂದಾಗಬೇಕೇ ಹೊರತು ಹೊಸ ಮದ್ಯದಂಗಡಿ ತೆರೆಯಲು ಯಾವುದೇ ಕಾರಣಕ್ಕೂ ನಿರ್ಧಾರ ತೆಗೆದುಕೊಳ್ಳಬಾರದು” ಎಂದು ಹೆಸರು ಹೇಳಲು ಇಚ್ಚಿಸದ ರಾಯಚೂರಿನ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

“ನನ್ನ ಅಳಿಯ ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಇಲ್ಲ. ದಿನಾಲೂ ಕುಡಿದು ಬಂದು ನನ್ನ ಮಗಳಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾರೆ. ಮೊನ್ನೆ ರಾತ್ರಿ 12 ಗಂಟೆಗೆ ಹೊಡೆದು ತವರಿಗೆ ಕಳಿಸಿದ್ದಾನೆ. ಮದ್ಯ ಸೇವನೆಗೆ ದುಡ್ಡು ಕೊಡದಿದ್ದರೆ ಮನೆಯಲ್ಲಿರುವ ದವಸ, ಧಾನ್ಯ ಸೇರಿದಂತೆ ಇತರೆ ಮನೆ ವಸ್ತುಗಳು ಮಾರಾಟ ಮಾಡುತ್ತಾನೆ. ಇಂತಹ ಸಂಕಷ್ಟದಲ್ಲಿ ಮಕ್ಕಳು ಭವಿಷ್ಯ ಏನಾಗಬೇಕು. ಪ್ರತಿ ಊರಿನ ಅಂಗಡಿ, ಹೋಟೆಲ್‌ , ಮನೆಗಳಲ್ಲಿ ಸಿಗುವ ಸಾರಾಯಿದಿಂದಲೇ ಕುಡುಕರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದ ಮದುವೆ ಮಾಡಿಕೊಟ್ಟ ಅದೆಷ್ಟೋ ಹೆಣ್ಣುಮಕ್ಕಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದೆ ತವರೂರಿಗೆ ವಾಪಸ್‌ ಆಗಿದ್ದಾರೆ” ಎಂದು ಬೀದರ್‌ ಜಿಲ್ಲೆ ಬಸವಕಲ್ಯಾಣ ಮೂಲದ ಮಹಿಳೆಯೊಬ್ಬರು ಸಂಕಟ ಬಿಚ್ಚಿಡುತ್ತಾರೆ.

ಸರ್ಕಾರ ಕುಡುಕರ ಬಗ್ಗೆ ಹೆಚ್ಚು ಚಿಂತಿಸುತ್ತಿದೆ:

“ಸರ್ಕಾರ ತನ್ನ ಆದಾಯದ ಖಜಾನೆ ಸರಿದೂಗಿಸಲು ಹೊಸ ಮದ್ಯದಂಗಡಿ ತೆರೆಯಲು ಮುಂದಾಗಿದ್ದು ಖಂಡನೀಯ, ಸರ್ಕಾರದ ಈ ನಿರ್ಧಾರ ಗಮನಿಸಿದರೆ ರಾಜ್ಯದ ಕುಡುಕರ ಮೇಲೆಯೇ ಹೆಚ್ಚು ಕಾಳಜಿ ತೋರುವುದು ಕಾಣಿಸುತ್ತಿದೆ. ಹೊರತು ಮಹಿಳೆಯರ ಸಂಕಷ್ಟದ ಕುರಿತು ಯೋಚಿಸುತ್ತಿಲ್ಲ. ಸರ್ಕಾರ ಕೂಡಲೇ ಸಾರಾಯಿ ನಿಷೇಧ ಮಾಡುವ ಮೂಲಕ ಮಹಿಳೆಯರ ಬದುಕಿಗೆ ಆಸರೆಯಾಗಬೇಕು. ಆದರೆ ಹೊಸ ಮದ್ಯದಂಗಡಿ ತೆರೆದು ಸಮಾಜದ ಸ್ವಾಸ್ಥ್ಯ ಕೆಡಿಸುವ ಜೊತೆಗೆ ಮಹಿಳೆಯರ ಬದುಕು ವಿನಾಶಗೊಳಿಸಲು ಮುಂದಾಗುತ್ತಿದೆ” ಎಂದು ಬೀದರ ನಗರದ ಸಂಘ ಮಿತ್ರಾ ಸೇವಾ ಸಂಸ್ಥೆಯ ಭೀಮ್‌ ಎನ್ನುವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರೈತ, ಕಾರ್ಮಿಕ, ದಲಿತ, ಮಹಿಳೆಯರ ಹಕ್ಕುಗಳಿಗಾಗಿ ನ.26ರಿಂದ ಮಹಾಧರಣಿ: ಸಂಯುಕ್ತ ಹೋರಾಟ ಕರ್ನಾಟಕ

“ನಮ್ಮೂರಲ್ಲಿ ಒಂದು ಪರಾವನಗಿ ಇರುವ ಮದ್ಯ ಮಾರಾಟ ಅಂಗಡಿ, ಆದರೆ ಸುಮಾರು ನಾಲ್ಕೈದು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಇದರಿಂದ ಮನೆಗಳ ನೆಮ್ಮದಿ, ಆರೋಗ್ಯ ಸಂಪೂರ್ಣ ಹಾಳಾಗುತ್ತಿದೆ. ಅಪಘಾತ ಪ್ರಕರಣ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಳಕ್ಕೆ ಮದ್ಯಪಾನ ಕೂಡ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು” ಕಲಬುರಗಿ ಜಿಲ್ಲೆಯ ಕಮಲಾಪುರದ ಗ್ರಾಕೂಸ್‌ ಕಾರ್ಯಕರ್ತೆ ಸುನೀತಾ ಆಗ್ರಹಿಸಿದ್ದಾರೆ.‌

“ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ, ಪರವಾನಗಿ ಇರುವ ಅಂಗಡಿಗಳಲ್ಲಿ ಮಾರಾಟ ಮಾಡುವ ಬಗ್ಗೆ ಅಭ್ಯಂತರವಿಲ್ಲ. ಆದರೆ ಪರವಾನಗಿ ಇಲ್ಲದೆ ಹೋಟೆಲ್‌, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲೇಬೇಕು. ಕೆಲ ವರ್ಷಗಳಿಂದ ಮದ್ಯ ನಿಷೇಧ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸುವ ವೇಳೆ ಕುಡಿತದಿಂದ ಬದುಕು ಹಾಳಾದ ಅನೇಕ ಕುಟುಂಬಗಳನ್ನು ಕಣ್ಣಾರೆ ಕಂಡಿದ್ದೇನೆ. ಮದ್ಯಪಾನ ಮಾರಾಟದಿಂದ ಸರ್ಕಾರದ ಬೊಕ್ಕಸ ತುಂಬುವುದು ಬಿಟ್ಟರೆ ಸಮಾಜದ ಒಳಿತಂತೂ ಅಲ್ಲವೇ ಅಲ್ಲ” ಎಂದು ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಲಲಿತಾ ಸಾಣೆಕಲ್‌ ಹೇಳುತ್ತಾರೆ.

ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು:

“ಸರ್ಕಾರ ಮದ್ಯ ಮಾರಾಟಕ್ಕೆ ಪರವಾನಗಿ ನೀಡುತ್ತದೆ. ಆದರೆ ಪರಾವಾನಗಿ ನಿಯಮಗಳನ್ನು ಗಾಳಿಗೆ ತೂರಿ ಮಾರಾಟ ದಂಧೆ ನಡೆಯುತ್ತಿದೆ. ನಗರ, ಪಟ್ಟಣಗಳಿಂದ ಹಳ್ಳಿಗಳ ಕಿರಾಣಿ ಅಂಗಡಿ, ಹೋಟೆಲ್‌, ಧಾಬಾ ಗಳಿಗೆ ಸರಬರಾಜುರಾಗುತ್ತಿರುವ ಅಕ್ರಮ ಮದ್ಯ ಕಡಿವಾಣಕ್ಕೆ ಸಂಬಂಧಪಟ್ಟ ಇಲಾಖೆಗಳು ಮುಂದಾಗುತ್ತಿಲ್ಲ. 2015 ರಿಂದ ಮದ್ಯಪಾನ ನಿಷೇಧ ಆಂದೋಲನ ಸಮಿತಿಯಿಂದ ಜನಜಾಗೃತಿ ಮೂಡಿಸಿ ಅನೇಕ ಹೋರಾಟಗಳು ನಡೆಸುತ್ತಲೇ ಬಂದಿದ್ದೇವೆ. ಆದರೂ ಸರ್ಕಾರಗಳು ಕ್ಯಾರೆ ಎನ್ನುತ್ತಿಲ್ಲ. ಹೊಸದಾಗಿ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರ ಖಂಡನೀಯವಾಗಿದೆ” ಎಂದು ಮದ್ಯಪಾನ ನಿಷೇಧ ಆಂದೋಲನ ಸಮಿತಿಯ ರಾಜ್ಯ ಸಂಚಾಲಕಿ ಸ್ವರ್ಣ ಭಟ್‌ ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

  1. ಯಾರ್ಯಾರ ಮನೆ ಮುರಿದು, ಅವರ ಸಂಪಾದನೆಯ ಹಣದಿಂದ ಒಂದು ವೇಳೆ ಸರಕಾರ ನಡೆಸಲು ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುತ್ತದೆಯಂತಾದರೆ , ಈಗ ಕೊಡುತ್ತಿರುವ ಉಚಿತ ಯೋಜನೆಗಳನ್ನು ರದ್ದು ಮಾಡಲಿ. ಅದಲ್ಲದೇ ಈಗ ಇರುವ ಎಲ್ಲಾ ರೀತಿಯ ಮದ್ಯ ವನ್ನು ನಿಷೇದಿಸಿ , ಮದ್ಯಪಾನ ಮುಕ್ತ ರಾಜ್ಯವನ್ನಾಗಿಸಲು ಸರಕಾರ ಮುಂದಡಿ ಇಡಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X