ಮಹಾಧರಣಿ: ’ಭೂಮಿಯ ಹಕ್ಕು’ ಪಡೆಯಲು ಕಾದು ಕುಳಿತವರು

Date:

Advertisements

“ಕಳೆದ ಇಪ್ಪತ್ತು ವರ್ಷಗಳಿಂದ ಭೂಮಿಯ ಹಕ್ಕುಪತ್ರ ಪಡೆಯಲು ಕಾದು ಕುಳಿತ್ತಿದ್ದೇನೆ. ಈಗಲೋ ಆಗಲೋ ಆಗುತ್ತದೆ ಎಂದು ಹೇಳುತ್ತಲೇ ಇದ್ದಾರೆ” ಎನ್ನುತ್ತಾರೆ ದೇವನಹಳ್ಳಿಯ ಮುದುಕಿ ಮುನಿಯಮ್ಮ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆಯಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ದುಡಿಯುವ ಜನರ 72 ಗಂಟೆಗಳ ಮಹಾ ಧರಣಿಯಲ್ಲಿ ಭಾಗಿಯಾಗಿರುವ ಮನಿಯಮ್ಮ ಇಳಿವಯಸ್ಸಿನಲ್ಲೂ ಹೋರಾಟದ ಹುಮ್ಮಸ್ಸು ತೋರುತ್ತಿದ್ದರು.

ಎಲೆಅಡಕೆ ಜಗಿಯುತ್ತಾ ಕೂತಿದ್ದ ಅವರನ್ನು “ಈ ವಯಸ್ಸಲ್ಲಿ ಹೋರಾಟ ಮಾಡ್ತಾ ಇದ್ದೀಯಲ್ಲಜ್ಜಿ” ಅಂತ ಕೇಳಿದ್ರೆ, “ಯಾಕೆ ಹೋರಾಟ ಮಾಡಬಾರದಾ? ನಮಗೆ ಜಮೀನು ಮಾಡಿಕೊಡಬೇಕು. ಇಪ್ಪತ್ತು ವರ್ಷಗಳಿಂದ ನಾವೇ ಆ ಭೂಮಿಯನ್ನು ಉಳುಮೆ ಮಾಡುತ್ತಿದ್ದೇವೆ” ಎಂದರು.

Advertisements

ಇಂತಹ ನೂರಾರು ಬಡಪಾಯಿಗಳು ಫ್ರೀಡಂ ಪಾರ್ಕ್‌ನಲ್ಲಿ ಕೊರೆವ ಚಳಿಯಲ್ಲಿ ಕೂತಿದ್ದರು. ಭೂಮಿಯನ್ನು ಪರಭಾರೆ ಮಾಡಿಸುವುದಕ್ಕಾಗಿ ನಿರಂತರ ಆಗ್ರಹಗಳನ್ನು ಮಾಡುತ್ತಾ ಬಂದಿರುವ ’ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಹಲವರು ಮಹಾಧರಣಿಯಲ್ಲಿ ಭಾಗಿಯಾಗಿದ್ದರು.

ಈವರೆಗೂ ಭೂಮಿಯ ಹಕ್ಕನ್ನೇ ಅನುಭವಿಸದ ಕಂಪ್ಲಿ ತಾಲ್ಲೂಕಿನ ಅಸಹಾಯಕ ದೇವದಾಸಿಯರು, ಸರ್ಕಾರ ಯಾವುದಾದರೂ ತುಂಡು ಭೂಮಿಯನ್ನು ನಮಗೆ ನೀಡಲಿ ಎಂದು ಆಗ್ರಹಿಸುತ್ತಾ ಕುಳಿತ್ತಿದ್ದರು.

ನಾಲ್ಕು ದಶಕಗಳಿಂದಲೂ ಭೂಮಿ ಪರಭಾರೆಯಾಗದೆ ಬಡವರು ಪರಿತಪಿಸುತ್ತಿದ್ದಾರೆ. ವಿವಿಧ ಅರ್ಜಿಗಳು ವಿಲೇವಾರಿಯಾಗಿಲ್ಲ. ಮೊದಲಿಗೆ ಫಾರಂ 50, 53 ಅಡಿಯಲ್ಲಿ ಅರ್ಜಿ ಪಡೆಯಲಾಯಿತು. ಆರಂಭದಲ್ಲಿ ಅನೇಕರಿಗೆ ಭೂಮಿಯನ್ನೂ ಸರ್ಕಾರ ಮಂಜೂರು ಮಾಡಿತು. ಆದರೆ ಲಕ್ಷಾಂತರ ಜನರಿಗೆ ಹಕ್ಕುಪತ್ರ ನೀಡದೆ ಪೆಂಡಿಂಗ್ ಇಟ್ಟುಕೊಂಡರು. 20 ವರ್ಷಗಳ ಕಾಲ ಭೂ ಮಂಜೂರಾತಿ ಸಮಿತಿಯನ್ನು ರಚನೆ ಮಾಡಲೇ ಇಲ್ಲ. ಹೋರಾಟಗಳ ಒತ್ತಡದಿಂದಾಗಿ ತದನಂತರ ಸಮಿತಿ ರಚನೆಯಾಯಿತು. ಜೊತೆಗೆ ಫಾರಂ 57 ಅಡಿಯಲ್ಲಿ ಅರ್ಜಿಯನ್ನು ಕರೆದರು. ಇದರಲ್ಲಿ ಸುಮಾರು 12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಫಾರಂಗಳ ಅಡಿಯಲ್ಲಿ ಸಲ್ಲಿಕೆಯಾಗಿರುವ ಮನವಿಗಳನ್ನು ಲೆಕ್ಕ ಹಾಕಿದರೆ ಸುಮಾರು 30 ಲಕ್ಷ ಅರ್ಜಿಗಳು ಪೆಂಡಿಂಗ್ ಇವೆ. ಮೊದಲು 50, 53ಯಲ್ಲಿ ಅರ್ಜಿ ಹಾಕಿ, ಮತ್ತೆ 57ರ ಅಡಿಯಲ್ಲೂ ಮನವಿ ಸಲ್ಲಿಸಿದವರನ್ನು ತೆಗೆದರೂ ಕನಿಷ್ಠ 20 ಲಕ್ಷ ಅರ್ಜಿಗಳಾದರೂ ಬಾಕಿ ಉಳಿದಿವೆ ಎನ್ನುತ್ತಾರೆ ಹೋರಾಟಗಾರರು.

ನಿಯಮದ ಪ್ರಕಾರ ನಾಲ್ಕು ಮುಕ್ಕಾಲು ಎಕರೆ ಭೂಮಿಯನ್ನು ಅರ್ಜಿದಾರರಿಗೆ ಕೊಡಬೇಕಾಗಿತ್ತು. ಈಗ ಎರಡರಿಂದ ಮೂರು ಎಕರೆ ಕೊಡುವುದಾಗಿ ಹೇಳುತ್ತಿದ್ದಾರೆ. ಬಡವರಿಗೆ ಭೂಮಿಯನ್ನು ವಂಚಿಸಿ ಕಂಪನಿಗಳಿಗೆ ಕೊಡುವ ಹುನ್ನಾರ ಇದರಲ್ಲಿ ಅಡಗಿದೆ. ಸದ್ಯ ಎರಡು ಎಕರೆಯಾದರೂ ಭೂಮಿ ಸಿಗಲಿ ಎಂದು ಜನರು ಕಾಯುತ್ತಿದ್ದಾರೆ. ಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಭೂಮಿ – ಹೀಗೆ ಬೇರೆ ಬೇರೆ ನಮೂನೆಯ ಭೂಮಿಗಳು ಜನರಿಗೆ ಪರಭಾರೆ ಆಗಬೇಕಿದೆ. ಒಂದು ಊರಿನಲ್ಲಿ ಇಂತಿಷ್ಟು ಗೋಮಾಳ ಇರಬೇಕೆಂಬ ನಿಯಮ ಕೂಡ ತೊಡಕಾಗಿ ಪರಿಣಮಿಸಿದೆ. ಆದರೆ ಹೈನುಗಾರಿಕೆಯೇ ನಶಿಸುತ್ತಿರುವ ಹೊತ್ತಿನಲ್ಲಿ ಗೋಮಾಳ ಇರಬೇಕೆಂಬ ನಿಯಮವೇ ಅರ್ಜಿಗಳ ವಿಲೇವಾರಿಗೆ ತೊಡರುಗಾಲಾಗಿದೆ.

ಅರಣ್ಯ ಇಲಾಖೆಯ ಭೂಮಿ ವಿಚಾರವೂ ವಿವಾದದ ಕೇಂದ್ರವಾಗಿದೆ. ಅವೆಲ್ಲವೂ ಮೊದಲು ಕಂದಾಯ ಇಲಾಖೆಯ ಭೂಮಿಗಳೇ ಆಗಿದ್ದವು. 1985ರ ಕಾಲಘಟ್ಟದಲ್ಲಿ ಅರಣ್ಯ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಲಾಯಿತು. ಪಾಳು ಇವೆಯೆಂಬ ನೆಪವನ್ನು ನೀಡಲಾಯಿತು. ಅರಣ್ಯ ಇಲಾಖೆ ಅಕೇಶಿಯಾದಂತಹ ಅನುಪಯುಕ್ತ ಮರಗಳನ್ನು ಹಾಕಿತು. “ಇದು ನಮ್ಮದೇ ಭೂಮಿ, ಕಂದಾಯ ಇಲಾಖೆಗೆ ಕೊಡಲ್ಲ” ಎನ್ನುತ್ತಿದೆ ಅರಣ್ಯ ಇಲಾಖೆ. ಸರ್ಕಾರದ ಎರಡು ಡಿಪಾರ್ಟ್‌ಮೆಂಟ್‌ಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.

ನಗರ ಪ್ರದೇಶದಲ್ಲೂ ಭೂಮಿಯ ಸಮಸ್ಯೆ ದೊಡ್ಡದಾಗಿದೆ. ನಗರಮಿತಿ ಎಂಬ ನೆಪ ನೀಡಿ ಸಾಗುವಳಿ ಭೂಮಿಯನ್ನು ಪರಭಾರೆ ಮಾಡುತ್ತಿಲ್ಲ. ಒನ್ ಟೈಮ್ ಸೆಟಲ್‌ಮೆಂಟ್‌ ಮಾಡಿಕೊಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

’ಈ ದಿನ’ದೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಕುಮಾರ ಸಮತಳ ಅವರು, “ಭೂಮಿಗಳನ್ನು ಕಂಪನಿಗೆ ಕೊಡಬೇಕೆಂಬ ಹುನ್ನಾರದಿಂದ ನಿಯಮಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಡ ಜನರು ಭೂಮಿಯ ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಪರಭಾರೆ ಮಾಡಿಕೊಡುವುದು ನ್ಯಾಯೋಚಿತ. ಆದರೆ ಜನರ ಭೂಮಿಗೆ ನೆಪಗಳನ್ನು ಹೇಳಿಕೊಂಡು ತೊಂದರೆ ಮಾಡಬಾರದು. ಸರ್ಕಾರದ ಲಕ್ಷಾಂತರ ಎಕರೆ ಭೂಮಿಯನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಮಾಡಿ, ಭೂಮಿ ರಹಿತರಿಗೆ, ಇಂತಹ ದೇವದಾಸಿ ಸಮಾಜಕ್ಕೆ ಭೂಮಿ ಕೊಡಬೇಕು. ಭೂ ಸುಧಾರಣಾ ಕಾಯ್ದೆಯ ಪ್ರಕಾರ ಐವತ್ತನಾಲ್ಕು ಎಕರೆಗಿಂತ ಹೆಚ್ಚು ಭೂಮಿಯನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಆದರೆ ನೂರಾರು ಎಕರೆ ಭೂಮಿಯನ್ನು ಹೊಂದಿರುವವರು ಈಗಲೂ ಇದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟಗಾರ ಕರಿಯಪ್ಪ ಗುಡಿಮನಿ ಅವರು ಮಾತನಾಡಿ, “ಸರ್ಕಾರ ಜಮೀನನ್ನು ದೇವದಾಸಿಯರಿಗೆ ನೀಡಬೇಕೆಂದು ಕಂಪ್ಲಿ ತಾಲ್ಲೂಕಿನಲ್ಲಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಹೋರಾಟಗಾರ ಮರಿಯಪ್ಪ ಅವರು ಮಾತನಾಡಿ, “94 (ಸಿ) ಅರ್ಜಿ ಅಡಿ ಬೆಂಗಳೂರು ಹಾಗೂ ಇತರ ನಗರಗಳ ಬಡವರು ಮನವಿ ಸಲ್ಲಿಸಿದ್ದಾರೆ. ಕಳೆದ ಸರ್ಕಾರ ಜನರಿಂದ ಲಕ್ಷಗಟ್ಟಲೆ ಲಂಚ ವಸೂಲಿ ಮಾಡಿತು. ಹಕ್ಕುಪತ್ರ ಮಾತ್ರ ನೀಡಲೇ ಇಲ್ಲ. ನಂತರ ಕಾಂಗ್ರೆಸ್‌ ಸರ್ಕಾರ ಬಂತು. ಆದರೆ ಬಡವರಿಗೆ ಯಾವುದೇ ಭರವಸೆಯೂ ಸಿಕ್ಕಿಲ್ಲ. ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಲೇ ಇಲ್ಲ. ಜನರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ” ಎಂದರು.

“ಬೆಂಗಳೂರು ಸುತ್ತಮುತ್ತಲು ಹೆಚ್ಚು ಸರ್ಕಾರಿ ಭೂಮಿಯನ್ನು ಉಳ್ಳವರು ಕಬಳಿಸಿದ್ದಾರೆ. ಬಡವರು ಸಣ್ಣ ಮನೆಯನ್ನು ಕಟ್ಟಿಕೊಂಡರೂ ಒಡೆದು ಹಾಕುತ್ತಾರೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಿರುವ ನೆಲಗಳ್ಳರ ಮೇಲೆ ಯಾವುದೇ ಕ್ರಮ ಜರುಗಿಸಲ್ಲ. ವ್ಯವಸ್ಥೆ ನಿದ್ದೆ ಮಾಡುತ್ತಿದೆ. ಬಡವರಿಗೊಂದು ಕಾನೂನು, ಉಳ್ಳವರಿಗೊಂದು ಕಾನೂನು ಎಂಬಂತಾಗಿದೆ. ಸ್ಲಂ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟಗಾರರಾದ ಸತ್ಯಣ್ಣ ಮಲ್ಲಾಪುರ, ವಸಂತರಾಜ್ ಕಹಳೆ, ಆಂಜನೇಯ ಕುರುಬರದೊಡ್ಡಿ, ಮಾರಪ್ಪ ಹರವಿ, ದೇವದಾಸಿ ಮಹಿಳೆಯರಾದ ರೇಣುಕಮ್ಮ, ಹುಲಿಗಮ್ಮ, ದೇವಕಮ್ಮ ಮೊದಲಾದವರು ಹೋರಾಟದಲ್ಲಿ ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X