ಇಲ್ಲಿನ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಸಾರ್ಟ್ ಮಾಲೀಕನನ್ನು ಬಂಧಿಸಿದ್ದಾರೆ.
ರೆಸಾರ್ಟ್‌ನಲ್ಲಿ ನಿಯಮ ಪಾಲನೆ ಮಾಡದಿರುವುದೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿರುವ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕ ಮನೋಹರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ಮುಗಿಯುವವರೆಗೆ ರೆಸಾರ್ಟ್‌ಅನ್ನು ಸೀಲ್‌ಡೌನ್ ಮಾಡಲಾಗಿದೆ.
ಇಲ್ಲಿನ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಇಂದು ಬೆಳಿಗ್ಗೆ ಈಜಾಡುವಾಗ ಮೂವರು ಯುವತಿಯರು ಏಕಾಏಕಿ ಮುಳುಗಿ ಮೃತಪಟ್ಟಿದ್ದರು. ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತರು. ಮೂವರು ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ಯುವತಿಯರು ಈಜು ಬಾರದಿದ್ದರೂ ಮೊದಲಿಗೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅದರಲ್ಲಿ ಓರ್ವ ಯುವತಿ ಈಜುಕೊಳದಲ್ಲಿದ್ದ ಟ್ಯೂಬ್ ಎತ್ತಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಈಜುಕೊಳ ಸ್ವಲ್ಪ ಆಳ(6 ಅಡಿ) ಇದ್ದ ಕಾರಣ ಮುಳುಗಲು ಯತ್ನಿಸಿದ್ದಾಳೆ. ಆಕೆಯನ್ನು ಮತ್ತೋರ್ವ ಯುವತಿ ರಕ್ಷಿಸಲು ಮುಂದಾಗಿದ್ದಾಳೆ.
ಈ ವೇಳೆ, ಇಬ್ಬರೂ ನೀರಿನಲ್ಲಿ ಮುಳುಗಿ ಒದ್ದಾಡುತ್ತಿದ್ದಾಗ ಮೂರನೇ ಯುವತಿ ರಕ್ಷಣೆಗೆ ಹೋಗಿದ್ದಾಳೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಮುಂದಾಗಿ ಸಾವನ್ನಪ್ಪಿದ್ದಾರೆ. ಮುಳುಗುವಾಗ ತಮ್ಮನ್ನು ರಕ್ಷಿಸುವಂತೆ ಕೂಗಿಕೊಂಡರು ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ನಾಲ್ಕೈದು ನಿಮಿಷಗಳಲ್ಲೇ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಯಂತೆಯೇ ಮಂಗಳೂರು ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ರೆಸಾರ್ಟ್‌ನ ಈಜುಕೊಳದಲ್ಲಿ ನಿಯಮ ಪಾಲಿಸದಿರುವುದು ತಿಳಿದುಬಂದಿದೆ.
