“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂಪರ ಕಾರ್ಯಕರ್ತರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ” ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ.
ನಿನ್ನಯಷ್ಟೇ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದ್ವೇಷಭಾಷಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ವಿರುದ್ಧ ಗಡಿಪಾರು ನೋಟಿಸ್ ಹೊರಡಿಸಲಾಗಿದೆ. ಪೊಲೀಸರ ಈ ಕ್ರಮವನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಈ ಮಧ್ಯೆ ಶೋಭಾ ದೂರು ನೀಡಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದ ಪೊಲೀಸರು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ವ್ಯಾಪಾರಿಗಳು ಮತ್ತು ನಾಗರಿಕರ ಮೇಲೂ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಪೊಲೀಸ್ ಅಧಿಕಾರಿಗಳು ಹಿಂದೂ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದಾರೆ. ಅವರ ನಿವಾಸಗಳ ಫೋಟೊ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ವಾರಂಟ್‌ಗಳು ಇಲ್ಲದೆಯೂ ಜಿಪಿಎಸ್ ಮುಖಾಂತರ ಫೋಟೋ ಸೆರೆಹಿಡಿಯುತ್ತಿದ್ದಾರೆ. ಪೊಲೀಸರ ಈ ಕ್ರಮಗಳು ಕಾನೂನು ಬಾಹಿರವಾಗಿದೆ. ಇದು ಮೂಲಭೂತ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ತಕ್ಷಣವೇ ತಾವು ಮಧ್ಯಪ್ರವೇಶ ಮಾಡಬೇಕು. ಪೊಲೀಸರ ಕಾನೂನು ಬಾಹಿರ ಕ್ರಮದ ವಿರುದ್ಧ ತನಿಖೆ ನಡೆಸಬೇಕು” ಎಂದು ಪ್ರಾಧಿಕಾರದ ಮುಖ್ಯಸ್ಥ ನ್ಯಾ. ಸುಧೀಂದ್ರ ರಾವ್ ಅವರಿಗೆ ಮನವಿ ಮಾಡಿದ್ದಾರೆ.