ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ ಕುಟುಂಬದ ಸಮೇತ ಬೇರೆ ಬೇರೆ ಪ್ರದೇಶಗಳಿಗೆ ಕೆಲಸದ ನಿಮಿತ್ತ ವಲಸೆ ಹೋಗುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗೆ ಯಾವುದೇ ರೀತಿಯ ಸೌಕರ್ಯಗಳಿರುವುದಿಲ್ಲ. ಅವರ ಮಕ್ಕಳು ಶಾಲೆಗಳಿಗೆ ಸೇರಿ ಕಲಿಯುವಂತಹ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಆ ಮಕ್ಕಳಿಗಾಗಿ ಹೆಚ್ಚಾಗಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು ಎಂದು ಅಂಕಣಕಾರ, ಹವ್ಯಾಸಿ ಛಾಯಾಚಿತ್ರಕಾರ ಕೆ.ಎಸ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
“ವಲಸೆ ಕಾರ್ಮಿಕರ ಪುಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಂದು ವರ್ಗದ ಕುಟುಂಬಗಳ ಮಕ್ಕಳು ಕೇವಲ ದುಡಿಯುವ ಸಲುವಾಗಿಯೇ ಬದುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಯೋಜನೆಯಿಂದ ಸಂಗ್ರಹವಾಗುತ್ತಿರುವ ಅಪಾರ ಪ್ರಮಾಣದ ಹಣದಲ್ಲಿ ಎಲ್ಲ ತಾಲೂಕು ಮಟ್ಟದಲ್ಲಿ ಅಥವಾ ಜಿಲ್ಲಾಮಟ್ಟದಲ್ಲಾದರೂ ವಸತಿ ಶಾಲೆಗಳನ್ನು ತೆರೆಯಬೇಕು. ವಲಸೆ ಕಾರ್ಮಿಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕವಾದರೂ ವಲಸೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಓದುವಂತಹ ಅವಕಾಶ ಕಲ್ಪಿಸಿ ಕೊಡಬೇಕು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಾಲೆಗೆ ಸೇರಿಸದ ಕಾರ್ಮಿಕರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿ, ವಿದ್ಯೆಯ ಮಹತ್ವವನ್ನು ಅವರಿಗೆ ತಿಳಿಸಿಕೊಡಬೇಕು. ಸರ್ಕಾರದಿಂದ ಸಿಗುವ ಯೋಜನೆಗಳನ್ನು ಮನದಟ್ಟು ಮಾಡಿಕೊಟ್ಟು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವಂತೆ ವ್ಯವಸ್ಥೆಯನ್ನು ಮಾಡಬೇಕು” ಎಂದು ಸಲಹೆ ನೀಡಿದ್ದಾರೆ.
“ಕಟ್ಟಡಗಳನ್ನ ಕಟ್ಟುವ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ, ರಾಜ್ಯ ಹೆದ್ದಾರಿಗಳನ್ನ ಅಭಿವೃದ್ಧಿಪಡಿಸುವ, ಸೇತುವೆಗಳು ಮತ್ತು ಮೆಟ್ರೋ ಮಾರ್ಗ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕುಟುಂಬದ ಮಕ್ಕಳು ಶಾಲೆಗೆ ಹೋಗದೆ ರಸ್ತೆಯಲ್ಲಿ ಆಟವಾಡುವುದನ್ನು ಎಲ್ಲರೂ ಗಮನಿಸುತ್ತೇವೆ. ಆ ಪುಟ್ಟ ಮಕ್ಕಳಿಗೆ ಸೂಕ್ತ ಬದುಕನ್ನ ಕಲ್ಪಿಸಿಕೊಡದಿದ್ದರೆ ಸಮಾಜಕ್ಕೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ. ಆ ಮಕ್ಕಳ ಬದುಕು ನಿರಂತರವಾಗಿ ಸ್ಪಷ್ಟ ದಾರಿ ಇಲ್ಲದೆ ಸಾಗುತ್ತದೆ. ಇದು ಎರಡು ವಿಭಿನ್ನ ವರ್ಗಗಳನ್ನು ಸೃಷ್ಟಿಸುತ್ತದೆ. ಶಿಕ್ಷಣ ಪಡೆಯುವ ಉಳ್ಳವರ ಮಕ್ಕಳ ವರ್ಗ, ಶಿಕ್ಷಣದಿಂದ ವಂಚಿತರಾದ ಶ್ರಮಿಕರ ಮಕ್ಕಳ ವರ್ಗ – ಈ ರೀತಿಯ ವರ್ಗಗಳ ಸೃಷ್ಟಿಗೆ ಸರ್ಕಾರಗಳು ಕಾರಣವಾಗಬೇಕಾಗುತ್ತದೆ. ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಹಾಗೂ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯವಾದಂತಹ ಆಲೋಚನೆಯನ್ನು ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಡವನ್ನು ಹೇರಬೇಕು” ಎಂದು ಆಗ್ರಹಿಸಿದ್ದಾರೆ.