ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಪೊಲೀಸರು ನಡೆಸಿದ ಲಘು ಲಾಠಿ ಪ್ರಹಾರದಲ್ಲಿ ನಾಲ್ಕು ವರ್ಷದ ಬಾಲಕನಿಗೆ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಹೈವೇ ವೃತ್ತದ ಬಳಿ ಬುಧವಾರ ಸಂಜೆ ನಡೆದಿದೆ. ಗಾಯಗೊಂಡ ಬಾಲಕ ಶಿಶಿರ್ ಪ್ರಸ್ತುತ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾನೆ.
ತಮ್ಮ ಪೋಷಕರೊಂದಿಗೆ ದಸರಾ ವೀಕ್ಷಿಸಲು ಬಂದಿದ್ದಾಗ, ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ಪೋಷಕರ ಪಕ್ಕದಲ್ಲೇ ನಿಂತಿದ್ದ ಬಾಲಕನ ತಲೆಗೆ ಲಾಠಿ ಬಲವಾಗಿ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಹೊಲಿಗೆ ಹಾಕಲಾಗಿದೆ. ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಲೆಬುರುಡೆಯನ್ನು ತೆರೆಯಬೇಕಾಗಬಹುದು ಎಂದು ವೈದ್ಯರು ತಿಳಿಸಿರುವುದಾಗಿ ಮಗುವಿನ ತಂದೆ ಗಿರೀಶ್ ಆತಂಕ ವ್ಯಕ್ತಪಡಿಸಿದ್ದಾರೆ. “ಸಣ್ಣ ಮಗುವಿನ ಮೇಲೆ ಲಾಠಿ ಬೀಸುವ ಅಗತ್ಯವಿತ್ತೇ?” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಬಾಲಕನಿಗೆ ಪೊಲೀಸರ ಲಾಠಿಯಿಂದಲೇ ಪೆಟ್ಟು ಬಿದ್ದಿದೆಯೇ ಮತ್ತು ಇದರಲ್ಲಿ ಪೊಲೀಸರ ನಿರ್ಲಕ್ಷ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆಯ ಅಗತ್ಯವಿದೆ. ಈ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಅಧಿಕೃತ ದೂರು ದಾಖಲಿಸಲಾಗುವುದು ಎಂದು ಮಾಜಿ ಕಾರ್ಪೊರೇಟರ್ ರಂಗಸ್ವಾಮಿ ತಿಳಿಸಿದ್ದಾರೆ.





