ಸಶಸ್ತ್ರ ಹೋರಾಟದಲ್ಲಿ ತೊಡಗಿದ್ದ ಆರು ಮಂದಿ ನಕ್ಸಲ್ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಾಗಲು ನಿರ್ಧರಿಸಿದ್ದಾರೆ. ಆ ಮೂಲಕ, ತಾವು ಮುಖ್ಯವಾಹಿನಿಗೆ ಬಂದು ಪ್ರಜಾತಾಂತ್ರಿಕವಾಗಿ ಹೋರಾಟ ಮುಂದುವರೆಸಲು ಸಜ್ಜಾಗಿದ್ದಾರೆ. ಅವರು ಮುಖ್ಯವಾಹಿನಿಗೆ ಬರುತ್ತಿರುವ ಬಗ್ಗೆ ಹೋರಾಟಗಾರ ಅಂಬಣ್ಣ ಅರೋಲಿಕರ್ ಅವರು ಕವಿತೆ ಬರೆದಿದ್ದಾರೆ. ಪ್ರಜಾತಾಂತ್ರಿಕ ಹೋರಾಟಕ್ಕೆ ಸ್ವಾಗತಿಸಿದ್ದಾರೆ. ಅವರ ಕವಿತೆ ಹೀಗಿದೆ ಕೇಳಿ – ಓದಿ;
ನಾಡಪ್ರೇಮಿಗಳೇ ನಿಮಗಿದೋ
ಜೈಭೀಮ್ …
ಲಾಲ್ ಸಲಾಮ್…
ಕನ್ನಡ ನಾಡಿನ ನೆಲ ಜಲಕ್ಕಾಗಿ ಶಪಥ ಮಾಡಿದಿರಾ ಕಾಮ್ರೇಡ್ಸ್ ..
-ಸಂಘ ಕಟ್ಟಿದಿರಾ..
ಜನರ ಸೈನ್ಯ ಕಟ್ಟಿದಿರಾ..
ಊಳುವವನಿಗೆ ಭೂಮಿಯೆಂದು
ಸರಣಿ ಧರಣಿ ಮಾಡಿದವರು..
ದರ್ಪ ದಮನ ನಡೆಯದೆಂದು ಧೈರ್ಯದಿಂದ ನುಗ್ಗಿದವರು..
-ಸಂವಿಧಾನ ನಮ್ಮದೆಂದು ಸಾರಿ ಹೇಳಿದಿರಾ..
ಜಾರಿಗೆ ಜಿದ್ದು ಮಾಡಿದಿರಾ…
ಆದಿವಾಸಿ ಹಕ್ಕಿಗಾಗಿ ಆತ್ಮಗೌರವ ಘನತೆಗಾಗಿ..
ಸುಲಿಗೆ ಸಹಿಸೋದಿಲ್ಲವೆಂದು..ಸಂಘರ್ಷವೆ ನಮ್ಮ ಸ್ಪೂರ್ತಿಯೆಂದು..
-ಜೀವದ ಹಂಗು ತೊರೆದು ನೀವು
ಚಳುವಳಿ ಕಟ್ಟಿದಿರಾ..
ನೊಂದವರ ಭಂದುಗಳಾದಿರಾ..
ಸಾವು ನೋವು ಸಹಜವೆಂದು
ಸಮ ಸಮಾಜ ಶ್ರೇಷ್ಠವೆಂದು..
ತ್ಯಾಗವಿಲ್ಲದ
ಪಯಣವಿಂದು ತಾರತಮ್ಯ ತಡೆಯದೆಂದು..
-ತಂದೆ ತಾಯಿ ಬಂಧು ಬಳಗವ ತ್ಯಜಿಸಿ ಬಂದವರು,
ತ್ಯಾಗಕೆ ನೀವೇ ವಾರಸರು..
ಜಾತಿಯಿಲ್ಲದ ನಾಡಿಗಾಗಿ ಭೀತಿಯಿಲ್ಲದ ದೇಶಕ್ಕಾಗಿ..
ಶಾಂತಿ ಸಹನೆ ನಮ್ಮದಾಗಲಿ..
ನ್ಯಾಯ ಪ್ರೀತಿ
ಉದಯವಾಗಲಿ..
-ನಾವೂ..ನೀವೂ ಸೇರಿ ನಡೆದು ಜಯವ ಗಳಿಸೋಣ..
ಜನಪರ ರಾಜ್ಯವ ಕಟ್ಟೋಣ
ಬುಧವಾರ, ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಎದುರು ಶರಣಾಗಲಿದ್ದಾರೆ. ಮುಖ್ಯವಾಹಿನಿಗೆ ಬರಲಿದ್ದಾರೆ. ತಮ್ಮ ನಿಲುವು ಮತ್ತು ಹಕ್ಕೊತ್ತಾಯಗಳ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.
ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಸರ್ಕಾರ ತಿಳಿಸಿದೆ.