ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಎಸ್ ಜೈಶಂಕರ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಆದರೆ ಯಾವ ಕ್ಷೇತ್ರಗಳು ಎಂಬುದನ್ನು ನಿರ್ಧರಿಸಬೇಕಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಇಬ್ಬರು ಪ್ರಭಾವಿ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ನಿರ್ಧರಿಸಲಾಗಿಲ್ಲ. ಇಬ್ಬರೂ ಕರ್ನಾಟಕ ಅಥವಾ ಬೇರೆ ರಾಜ್ಯಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ” ಎಂದು ಪ್ರಲ್ಹಾದ್ ಜೋಷಿ ಹೇಳಿದ್ದಾರೆ.
ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರಾಗಿದ್ದಾರೆ.ಜೈಶಂಕರ್ ಕರ್ನಾಟಕದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇಂತಹ ಊಹಾಪೋಹಗಳಿಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಇಬ್ಬರು ಕರ್ನಾಟಕದಿಂದ ಸ್ಪರ್ಧಿಸಿದರೆ ಹಾಲಿ ಸಂಸದರು ತಮ್ಮ ಕ್ಷೇತ್ರ ಕಳೆದುಕೊಳ್ಳುತ್ತಾರಾ ಎಂಬ ಪ್ರಶ್ನೆಗೆ, ಇಬ್ಬರು ಸಚಿವರು ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದು ನಿರ್ಧಾರವಾಗಿಲ್ಲ ಎಂದು ಹೇಳಿದರು.
ಕಳೆದ ಬುಧವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಜೈಶಂಕರ್ ಬುದ್ಧಿಜೀವಿಗಳು, ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಪ್ರಮುಖ ಗಣ್ಯರೊಂದಿಗೆ ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಸಾಧನೆಯ ಬಗ್ಗೆ ಸಂವಾದ ನಡೆಸಿದರು ಹಾಗೂ ಪ್ರಹ್ಲಾದ್ ಜೋಷಿ ಸಾಧನೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಮಂಡ್ಯದಲ್ಲಿಯೇ ಸ್ಪರ್ಧಿಸುವ ಬಗ್ಗೆ ಹೇಳುತ್ತಿರುವ ಸುಮಲತಾ ಅಂಬರೀಶ್ ಅವರ ಬಗ್ಗೆ ಪ್ರಶ್ನೆ ಕೇಳಿದಾಗ ಕೇಂದ್ರ ನಾಯಕರು ಶೀಘ್ರದಲ್ಲಿಯೇ ಎಲ್ಲ ಗೊಂದಲಗಳಿಗೂ ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ತಿಳಿಸಿದರು.
ತಮಗೆ ಮಿತ್ರ ಪಕ್ಷ ಜೆಡಿಎಸ್‌ನೊಂದಿಗೆ ಯಾವುದೇ ಸಮಸ್ಯೆಯಿಲ್ಲ. ದೊಡ್ಡ ಪಕ್ಷಗಳಲ್ಲಿ ಇಂತಹ ವ್ಯತ್ಯಾಸಗಳು ಸಹಜ. ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಪ್ರಲ್ಹಾದ್ ಜೋಷಿ ಹೇಳಿದರು.
