ಪ್ರತಿ ವರ್ಷ ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಶಾಲಾ ಪ್ರವಾಸಗಳು ಮತ್ತು ಕಾರ್ತಿಕ ಮಾಸದ ವಿವಾಹಗಳು ನಡೆಯುತ್ತವೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಪ್ರವಾಸಕ್ಕಾಗಿ ಸರ್ಕಾರಿ ಬಸ್‌ಗಳನ್ನು ಕ್ಯಾಶುಯಲ್ ಗುತ್ತಿಗೆ (ಸಿಸಿ) ಆಧಾರದ ಮೇಲೆ ಕಾಯ್ದಿರಿಸುತ್ತವೆ. ಆದರೆ, ಈ ವರ್ಷ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಾರಿಗೆ ಬಸ್‌ಗಳನ್ನು ಕಾಯ್ದಿರಿಸುವುದು ಶಾಲೆಗಳಿಗೆ ಸವಾಲಾಗಿದೆ. ಹಲವು ಶಾಲೆಗಳು ಬಸ್‌ಗಳು ದೊರೆಯದೆ ಪ್ರವಾಸಗಳನ್ನು ರದ್ದುಗೊಳಿಸುವ ಚಿಂತನೆ ನಡೆಸಿವೆ.
ಸಾರಿಗೆ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಒದಗಿಸಲು ಸಾರಿಗೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಹೆಚ್ಚಾಗಿದೆ. ಯೋಜನೆಯಿಂದಾಗಿ ಮರುಪಾವತಿ ಮೂಲಕ ಸರ್ಕಾರದಿಂದ ಉತ್ತಮ ಆದಾಯವನ್ನೂ ಸಾರಿಗೆ ಘಟಕಗಳು ಪಡೆಯುತ್ತಿವೆ. ಅಲ್ಲದೆ, ಬಸ್‌ಗಳ ಸಂಚಾರ ಮಾರ್ಗದಲ್ಲಿ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಆದ್ಯತೆ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ವರದಿಯಾಗಿದೆ
ಹೀಗಾಗಿ, ಶಾಲೆಗಳು ಬಸ್‌ಗಳ ಲಭ್ಯತೆಗೆ ಅನುಗುಣವಾಗಿ ತಮ್ಮ ಪ್ರವಾಸಗಳನ್ನು ಯೋಜಿಸಬೇಕು ಮತ್ತು ಬಸ್‌ಗಳ ಲಭ್ಯತೆಗಾಗಿ ಕಾಯುವಂತೆ ಮಾಡಿದೆ. ಪರಿಣಾಮ, ಬಸ್‌ಗಳ ಅಲಭ್ಯತೆಯಿಂದ ಹಲವು ಶಾಲೆಗಳು ಶೈಕ್ಷಣಿಕ ಪ್ರವಾಸಗಳನ್ನು ರದ್ದುಗೊಳಿಸಲು ಮಂದಾಗಿವೆ ಎಂದು ತಿಳಿದುಬಂದಿದೆ.
ವಿಶೇಷವಾಗಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಲವು ಘಟಕಗಳಲ್ಲಿ ಬಸ್‌ಗಳ ಕೊರತೆ ಇದೆ. ಪ್ರಸ್ತುತ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಲ್ಲಿ ಟೈರ್‌ಗಳು ಮತ್ತು ಬಿಡಿಭಾಗಗಳ ಕೊರತೆಯಿಂದ ಹಲವು ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಅಲ್ಲದೆ, ಸಾರಿಗೆ ಇಲಾಖೆಯ ನಾಲ್ಕು ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಬಿಎಂಟಿಸಿ) ಸಿಸಿ ಬಸ್‌ಗಳ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಬೆಂಗಳೂರಿನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟಿಒಐ ವರದಿ ಮಾಡಿದೆ.
“ಸಾಮಾನ್ಯ ಪ್ರಯಾಣಿಕರ ಹಿತದೃಷ್ಟಿಯಿಂದ ಹೊಸ ಬಸ್‌ಗಳು ಬರುವವರೆಗೆ ಸಿಸಿ ಬುಕಿಂಗ್ ಅನ್ನು ಮುಂದೂಡಲಾಗಿದೆ. ಸ್ಥಳೀಯ ಅಗತ್ಯಗಳನ್ನು ಪೂರೈಸಲು ನಾವು ಅಂತರ-ರಾಜ್ಯ ಸೇವೆಗಳನ್ನು ನಿಲ್ಲಿಸಿದ್ದೇವೆ. ಈಗಿರುವ ಬಸ್‌ಗಳನ್ನು ಸಿಸಿ ಬುಕ್ಕಿಂಗ್‌ಗೆ ಒದಗಿಸಿದರೆ ಬಸ್ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ” ಎಂದು ಬೆಳಗಾವಿ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ತಿಳಿಸಿದ್ದಾರೆ.
“ಸಿಸಿ ಬುಕ್ಕಿಂಗ್‌ಗೆ ಬಸ್ ಒದಗಿಸದಂತೆ ಆದೇಶವಿದೆ ಎಂದು ಸ್ಥಳೀಯ ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ. ಆದೇಶದ ಪ್ರತಿಯನ್ನು ಒದಗಿಸುವಂತೆ ನಾನು ಅವರನ್ನು ಕೇಳಿದಾಗ, ಅವರು ಅದನ್ನು ನೀಡಲು ನಿರಾಕಿರಿಸದರು” ಎಂದು ಬೆಳಗಾವಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ಹೇಳಿದ್ದಾರೆ.