- ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ, ಮಗು ಸಾವು
- ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ: ಕೆ ಜೆ ಜಾರ್ಜ್
ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸ್ವತಂತ್ರ ಸಮಿತಿಯಿಂದ ನಡೆಸಲಾಗುವುದು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಇದೊಂದು ದುಖಃಕರ ಘಟನೆ. ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಐದು ಜನರನ್ನು ಅಮಾನತು ಮಾಡಲಾಗಿದೆ” ಎಂದರು.
“ಘಟನೆಯಲ್ಲಿ ಸೌಂದರ್ಯ ಹಾಗೂ ಅವರ 9 ತಿಂಗಳ ಮಗು ಮೃತಪಟ್ಟಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ, ತುರ್ತಾಗಿ ಯಾರೊಬ್ಬರೂ ಸ್ಥಳಕ್ಕೆ ಬರಲಿಲ್ಲ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ” ಎಂದು ಹೇಳಿದರು.
“ಕಾಡುಗೋಡಿ ಪ್ರಕರಣದ ಸಂಪೂರ್ಣ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚನೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ, ಪೊಲೀಸ್ ಇಲಾಖೆ ಹಾಗೂ ಎಲೆಕ್ಟ್ರಿಕ್ ಇನ್ ಪೆಕ್ಟರ್‌ನಿಂದ ತನಿಖೆ ನಡೆಸಲಾಗುತ್ತಿದೆ. ಇದಷ್ಟೇ ಅಲ್ಲದೆ, ನಿವೃತ್ತ ಚೀಫ್ ಎಂಜಿನಿಯರ್ ನೇತೃತ್ವದಲ್ಲಿ ನಾಲ್ಕು ಜನರ ಸಮಿತಿ ಸ್ವತಂತ್ರ ತನಿಖೆ ನಡೆಸಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’
ಈ ಘಟನೆಯ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶಕೊಟ್ಟಿದ್ದೇವೆ. ನಾವು ಯಾವುದೇ ರೀತಿಯಲ್ಲಿ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದರು.
“ವಿದ್ಯುತ್ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ವಿದ್ಯುತ್ಗೆ ಈ ಬಾರಿ ಬೇಡಿಕೆ ಇದೆ. ಈ ವರ್ಷ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಒನ್ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ನಮಗೆ ಮುಖ್ಯಮಂತ್ರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ. ವಿದ್ಯುತ್ ಖರೀದಿ ಮಾಡಲು ಹಣ ಬಿಡುಗಡೆ ಮಾಡಿದ್ದಾರೆ. ಪಂಚಾಬ್ ಮತ್ತು ಯುಪಿಯಿಂದ ವಿದ್ಯುತ್ ಖರೀದಿಗೆ ಮುಂದಾಗುತ್ತಿದ್ದೇವೆ” ಎಂದು ಇದೇ ವೇಳೆ ಸಚಿವ ಜಾರ್ಜ್ ಮಾಹಿತಿ ಹಂಚಿಕೊಂಡರು.