ರಾಜ್ಯದ ಜಲಾಶಯಗಳಿಂದ ನೆರೆಯ ರಾಜ್ಯ ತಮಿಳುನಾಡಿಗೆ 2024ರ ಜನವರಿ ತಿಂಗಳಿಡೀ ನಿತ್ಯ 1,030 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಸೂಚಿಸಿದೆ.
ದೆಹಲಿಯಲ್ಲಿ ಮಂಗಳವಾರ ನಡೆದ ಸಮಿತಿ ಸಭೆ ಈ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ ತಿಂಗಳ ಬಾಕಿ ಅವಧಿಗೆ ನಿತ್ಯ 3,128 ಕ್ಯುಸೆಕ್ ಹಾಗೂ ಜನವರಿ ತಿಂಗಳಿಡೀ ನಿತ್ಯ 1,030 ಕ್ಯುಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿದೆ. ಒಂದೆರಡು ದಿನಗಳಲ್ಲಿ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ, ಈ ಶಿಫಾರಸನ್ನು ಅನುಮೋದಿಸುವ ನಿರೀಕ್ಷೆಯಿದೆ.
ನೆರೆಯ ತಮಿಳುನಾಡು ರಾಜ್ಯವು ಹಿಂಬಾಕಿ 7.60 ಟಿಎಂಸಿ ಸೇರಿ ಒಟ್ಟು 14 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲು ಆಗ್ರಹಿಸಿತು. ಆದರೆ, ಈ ಬೇಡಿಕೆಯನ್ನು ತಳ್ಳಿಹಾಕಿದ ಕರ್ನಾಟಕ, “ಡಿಸೆಂಬರ್ 18ರವರೆಗೆ ಕಾವೇರಿ ನದಿ ಪಾತ್ರದ ಎಲ್ಲ ನಾಲ್ಕು ಜಲಾಶಯಗಳಿಗೆ ಶೇ.53.84 ರಷ್ಟು ಒಳಹರಿವಿನ ಕೊರತೆ ಇದೆ. ಜಲಾಶಯಗಳಿಗೆ ನೀರಿನ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಸದ್ಯ ಲಭ್ಯವಿರುವ ನೀರಿನಲ್ಲಿ ಬೆಳೆದಿರುವ ಬೆಳೆ ಹಾಗೂ ಕುಡಿಯುವ ನೀರಿನ ಅಗತ್ಯ ಭರಿಸುವುದೇ ಸವಾಲಾಗಿದೆ” ಎಂದು ವಾದಿಸಿತು. ಆದರೂ, ಮುಂದಿನ ತಿಂಗಳಲ್ಲಿ ನಿತ್ಯ 1,030 ಕ್ಯುಸೆಕ್ ನೀರು ಬಿಡಲು ಸಮಿತಿ ಶಿಫಾರಸು ಮಾಡಿದೆ.
“ಡಿಸೆಂಬರ್ 19ಕ್ಕೆ ಜಲಾಶಯದಲ್ಲಿ 96.7 ಅಡಿಯಷ್ಟು ನೀರಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟವು 124.8 ಅಡಿ ಆಗಿದೆ. ಸದ್ಯ 28 ಅಡಿಗಳಷ್ಟು ನೀರು ಕಡಿಮೆ ಇದೆ. ಇನ್ನು ಜಲಾಶಯದ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯವು 49.452 ಟಿಎಂಸಿ ಇದ್ದು, ಸದ್ಯ 20.363 ಟಿಎಂಸಿ ನೀರು ಸಂಗ್ರಹವಾಗಿದೆ. ಶೇ.60 ರಷ್ಟು ಜಲಾಶಯ ಖಾಲಿ ಇದೆ” ಎಂದು ಕೆಆರ್‌ಎಸ್ ಜಲಾಶಯ ನೀರಾವರಿ ನಿಗಮದ ಮಾಹಿತಿ ಹೊರಹಾಕಿದೆ.
ಬಳಸಲು ಯೋಗ್ಯವಾದ ನೀರಿನ ಪ್ರಮಾಣವು 11.9 ಟಿಎಂಸಿಯಷ್ಟಿದ್ದು, ಒಟ್ಟಾರೆ ಸಂಗ್ರಹವಿರುವ ನೀರಿನಲ್ಲಿ ಅರ್ಧದಷ್ಟು ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಜಲಾಶಯದ ಒಳಹರಿವು 1,177 ಕ್ಯುಸೆಕ್, ಹೊರ ಹರಿವು 574 ಕ್ಯುಸೆಕ್ ಇದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಹಸಿರು ಸೇನಾ ಪಡೆ ವತಿಯಿಂದ ಸರ್ಕಾರಕ್ಕೆ ಮಂಗಳಾರತಿ ಎತ್ತುವ ಮೂಲಕ ಪ್ರತಿಭಟನೆ ನಡೆಸಿದ್ದು, ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಕೇಂದ್ರ, ರಾಜ್ಯ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ
“ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಪದೇಪದೆ ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡುತ್ತಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಮೌನವಹಿಸಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಮಾಡಬೇಕು. ಆಗ ಮಾತ್ರ ಕರ್ನಾಟಕದ ಪಾಲಿಗೆ ನ್ಯಾಯ ಸಿಗುತ್ತದೆ. ಕಾವೇರಿ ನೀರು ನಿಲ್ಲಿಸುವವರೆಗೆ ಸಂಘಟನೆಯ ಹೋರಾಟ ಮುಂದುವರೆಯಲಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.