ಕಳೆದ ಏಳು ತಿಂಗಳುಗಳಿಂದ ರಾಜ್ಯ ಪಠ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ನಮ್ಮ ನಾಡು ನಮ್ಮಆಳ್ವಿಕೆ ತಂಡವು ಮುಂದಿನ ಆನ್‌ಲೈನ್ ಸಹಿ ಅಭಿಯಾನಕ್ಕೆ ಬೆನ್ನಿಗೆ ನಿಲ್ಲುವಂತೆ ಕೋರಿಕೊಂಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ನಮ್ಮ ನಾಡು ನಮ್ಮಆಳ್ವಿಕೆ ತಂಡ, ಚಿತ್ರಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಮ್ಮ ನಾಡು ನಮ್ಮ ಆಳ್ವಿಕೆಯ ಸದಸ್ಯರಾದ ಕವಿರಾಜ್ ಅವರು ಅಭಿಯಾನಕ್ಕೆ 2024ರಲ್ಲಿ ಚಾಲನೆ ಕೊಟ್ಟಿದ್ದರು ಎಂದು ಹೇಳಿದೆ.
ಚಿತ್ರ ನಿರ್ದೇಶಕರಾದ ಬಿ ಎಮ್ ಗಿರಿರಾಜ್, ನವೆಂಬರ್ 1ರಂದು ಬೆಂಗಳೂರಿನಲ್ಲಿ ಬೈಕ್ ರ್‍ಯಾಲಿಯನ್ನು, ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 1 ಲಕ್ಷ ಕರಪತ್ರ ಹಂಚುವುದರ ಮೂಲಕ ಜಾಗೃತಿ ಅಭಿಯಾನ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸಿದ ಎರಡು ನುಡಿ-ಜಾಗೃತಿಯ ಕಿಡಿ ಸಭೆಯ ಬಗ್ಗೆ ವಿವರಿಸಿದರು.
“ಶಿಕ್ಷಣ ಸಚಿವರಾದ ಮಾನ್ಯ ಮಧು ಬಂಗಾರಪ್ಪರವರನ್ನು ತಂಡವು ಭೇಟಿ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಿಗೂ ನಮ್ಮ ಮನವಿ ಸಲ್ಲಿಸಿ, ಅವರು ತಮ್ಮ ಟಿಪ್ಪಣಿಯೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸಿದೆ” ಎಂದು ಹೇಳಿದರು.
“ಜೊತೆಗೆ 2023-24 ರ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಹಿಂದಿ ಒಂದರಲ್ಲೇ 90,000ಕ್ಕೂ ಹೆಚ್ಚು ಮಕ್ಕಳು ಮೂರನೇ ಬಾಷೆ ಹಿಂದಿ ಒಂದರಲ್ಲೇ ಅನುತ್ತೀರ್ಣರಾಗಿದ್ದು, ಇದು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ” ಎಂದು ತಿಳಿಸಿದರು.
“ಹಿಂದಿಯನ್ನು ಯಾರೂ ದ್ವೇಷಿಸುತ್ತಿಲ್ಲ. ನಮಗೆ ಹಿಂದಿ ಸಿನಿಮಾ, ಹಾಡುಗಳು ವಯಕ್ತಿಕವಾಗಿ ಇಷ್ಟವಿದ್ದರೂ ಕಲಿಕೆಯಲ್ಲಿ ಕರ್ನಾಟಕದ ಮಕ್ಕಳಿಗೆ ಮೂರನೇ ಭಾಷೆಯು ಹೊರೆಯಾಗಿದೆ. ಇದು ಹಿಂದಿ ಸಾಮ್ರಾಜ್ಯಶಾಹಿಯ ಹಿಂದಿ ಹೇರಿಕೆಯ ಕುತಂತ್ರ” ಎಂದು ಆರೋಪಿಸಿದರು.
ಸಜಿತ್ ಗೌಡ ಮಾತನಾಡಿ, “ಕನ್ನಡ ನೆಲದಲ್ಲಿ ಹಿಂದಿ ಕಡ್ಡಾಯ ಕಲಿಕೆಯು ಸಾಂಸ್ಕೃತಿಕ ದಾಳಿ” ಎಂದು ಹೇಳಿದರು.
ಕನ್ನಡ ಹೋರಾಟಗಾರ ಅರುಣ್ ಜಾವಗಲ್ ಮಾತನಾಡಿ, “ಮೂರನೆಯ ಭಾಷೆಯಾಗಿ ಹಿಂದಿ ಕಲಿಸುವುದು ಹಿಂದಿ ಹೇರಿಕೆಯ ಒಂದು ಭಾಗವಾಗಿದ್ದು ನಾವು ಅದನ್ನು ಹಿಮ್ಮೆಟ್ಟಬೇಕು” ಎಂದು ಹೇಳಿದರು
ಶೃತಿ ಮರುಳಪ್ಪ ಮಾತನಾಡಿ, “ತ್ರಿಭಾಷಾ ಸೂತ್ರವನ್ನು ಉತ್ತರ ಭಾರತದ ರಾಜ್ಯಗಳು ಅಳವಡಿಸಿಕೊಂಡಿಲ್ಲ, ತಮಿಳು ನಾಡು ಹಿಂದಿಯನ್ನು ಒಪ್ಪದೆಯೇ ಉತ್ತಮ ಸಾಮಾಜಿಕ-ಆರ್ಥಿಕ ಏಳಿಗೆ ಸಾಧಿಸಿದೆ, ಮಹಾರಾಷ್ಟ್ರದಲ್ಲಿಯೂ ಅಲ್ಲಿನ ಮುಖ್ಯಮಂತ್ರಿಗಳು ಇಂಗ್ಲಿಶ್ ಮತ್ತು ಮರಾಠಿ ಕಲಿಕೆಯನ್ನು ಪ್ರತಿಪಾಸಿದ್ದಾರೆ. ಕರ್ನಾಟಕದ ಮಕ್ಕಳಿಗೆ ಮಾತ್ರ ಮೂರನೆಯ ಭಾಷೆ ಹೊರೆಯಾಗಿದೆ, ಇದು ಕೊನೆಯಾಗಬೇಕು” ಎಂದು ಹೇಳಿದರು.
ರಮೇಶ್ ಬೆಲ್ಲಂಕೊಂಡ ಮಾತನಾಡಿ, “ಅಭಿಯಾನ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿಯನ್ನು ಆಗ್ರಹಿಸಿ ಶುರುವಾದ ಆನ್ಲೈನ್ ಪಿಟಿಶನ್ನಿಗೆ 25,000ಕ್ಕೂ ಹೆಚ್ಚು ಸಹಿ ಬಂದಿದೆ” ಎಂದು ತಿಳಿಸಿದರು.