ಕೇರಳಂನ ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ತಮ್ಮ ರಾಜ್ಯದ ಆರ್ಥಿಕ ಸ್ಥಿತಿ- ಗತಿಯ ನೈಜ ಚಿತ್ರಣವನ್ನು ಜನರ ಮುಂದಿಡುವ ಉದ್ದೇಶದಿಂದ ಹಣಕಾಸು ಶ್ವೇತಪತ್ರ ಮಂಡಿಸಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಈ ಕುರಿತು ಅಶೋಕ್ ಅವರು ಟ್ವೀಟ್ ಮಾಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಬಿಟ್ಟುಹೋಗಿರುವ ಆರ್ಥಿಕ ಬಳುವಳಿ ಏನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯದ ಜನರಿಗಿದೆ. ರಾಜ್ಯದ ಸಾಲ ಎಷ್ಟು ಹೆಚ್ಚಾಗಿದೆ? ಸರ್ಕಾರದ ಖಜಾನೆಯ ನಿಜವಾದ ಸ್ಥಿತಿಗತಿ ಏನು? ಅವೈಜ್ಞಾನಿಕ ಯೋಜನೆಗಳು, ಮತಬ್ಯಾಂಕ್ ರಾಜಕಾರಣ ಮತ್ತು ದುಂದುವೆಚ್ಚಗಳಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ? ಮುಂದಿನ ಪೀಳಿಗೆಯ ಹೆಗಲ ಮೇಲೆ ಎಷ್ಟು ಸಾಲದ ಹೊರೆ ಹಾಕಲಾಗಿದೆ ಎಂದು ತಿಳಿಯಬೇಕಿದೆ ಎಂದರು.
ಇದನ್ನು ಓದಿದ್ದೀರಾ? ಬಾಂಬ್, ಬೆದರಿಕೆಗಳಿಗೆ ಬಗ್ಗದ ಜ್ಞಾನದೀವಿಗೆ: ಬಡವರ ಪಾಲಿನ ಅಕ್ಷರ ಸಂತ ‘ಖಾನ್ ಸರ್’
ಮುಚ್ಚಿಡಲು, ಮರೆಮಾಚಲು ಏನೂ ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ತಕ್ಷಣವೇ ವಿಧಾನಸಭೆಯಲ್ಲಿ ಹಣಕಾಸು ಶ್ವೇತಪತ್ರ ಮಂಡಿಸಬೇಕು. ಸತ್ಯವನ್ನು ಹೊರಗೆ ಬರಲು ಬಿಡಬೇಕು. ಕರ್ನಾಟಕಕ್ಕೆ ಪಾರದರ್ಶಕತೆ ಬೇಕು. ಕನ್ನಡಿಗರಿಗೆ ಉತ್ತರದಾಯಿತ್ವ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಬಿಟ್ಟುಹೋಗಿರುವ ನಿಜವಾದ “ಸಾಕ್ಷಿಗುಡ್ಡೆ” ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.





