ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ಯುಪಿಎಸ್ಸಿ, ಬಿಪಿಎಸ್ಸಿ, ಎಸ್ಎಸ್ಸಿ, ರೈಲ್ವೆ ಪರೀಕ್ಷೆಗಳ ಕೋಚಿಂಗ್ ಜಗತ್ತಿನಲ್ಲಿ, ‘ಖಾನ್ ಸರ್’ ಕೇಳುವುದು ಕೇವಲ 200 ರೂಪಾಯಿ! ಹೌದು, ದಿನಗೂಲಿ ನೌಕರ, ರಿಕ್ಷಾ ಚಾಲಕ, ಕೂಲಿ ಕಾರ್ಮಿಕರ ಮಕ್ಕಳೂ ಸಹ ಐಎಎಸ್ ಅಧಿಕಾರಿಯಾಗುವ ಕನಸು ಕಾಣುವಂತೆ ಮತ್ತು ಅದನ್ನು ನನಸು ಮಾಡುವಂತೆ ಮಾಡಿದ ಕೀರ್ತಿ ಈ ಅಕ್ಷರ ದಾಸೋಹಿಗೆ ಸಲ್ಲುತ್ತದೆ. ಬಡತನ ಯಾವತ್ತೂ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದೇ ಅವರ ಮೂಲ ಮಂತ್ರ
ಬಿಹಾರದ ಪಾಟ್ನಾ ಬೀದಿಗಳಲ್ಲಿ ಹುಟ್ಟಿಕೊಂಡ ‘ಖಾನ್ ಸರ್’ ( ಮೂಲ ಹೆಸರು ಫೈಸಲ್ ಖಾನ್) ಎಂಬ ಹೆಸರು ಇಂದು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಅದು ಕೋಟ್ಯಂತರ ಬಡ ವಿದ್ಯಾರ್ಥಿಗಳ ಪಾಲಿನ ಅಕ್ಷರ ಕ್ರಾಂತಿ. ಬಡತನವೆಂಬ ಕತ್ತಲಲ್ಲಿ ಕಮರಿಹೋಗುತ್ತಿದ್ದ ಲಕ್ಷಾಂತರ ಕನಸುಗಳಿಗೆ ಇವರು ಬೆಳಗಿದ ಆಶಾಕಿರಣ. ಉತ್ತರ ಪ್ರದೇಶದ ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು, ಇಂದು ಇಡೀ ದೇಶವೇ ತಿರುಗಿ ನೋಡುವಂತಹ ಶಿಕ್ಷಣದ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ. ‘ಖಾನ್ ಜಿಎಸ್ ರಿಸರ್ಚ್ ಸೆಂಟರ್’ ಕೇವಲ ಒಂದು ಪಾಠಶಾಲೆಯಲ್ಲ, ಅದು ಅಸಹಾಯಕರ ಪಾಲಿನ ಆಶಾಕೇಂದ್ರ.
ಅವರ ಬೋಧನಾ ಶೈಲಿಯೇ ಒಂದು ಅದ್ಭುತ. ಎಷ್ಟೇ ಕಠಿಣವಾದ ವಿಜ್ಞಾನ, ಇತಿಹಾಸ ಅಥವಾ ಭೂಗೋಳದ ವಿಷಯವಿರಲಿ, ಅದನ್ನು ತಮ್ಮದೇ ಆದ ಹಾಸ್ಯಮಿಶ್ರಿತ, ಅಚ್ಚುಮೆಚ್ಚಿನ ಭೋಜ್ಪುರಿ ಹಾಗೂ ಹಿಂದಿ ಭಾಷೆಯಲ್ಲಿ ಅತ್ಯಂತ ಸರಳವಾಗಿ ವಿವರಿಸುತ್ತಾರೆ. ಪುಸ್ತಕದ ಬದನೆಕಾಯಿಗಿಂತ, ದೈನಂದಿನ ಜೀವನದ ಉದಾಹರಣೆಗಳ ಮೂಲಕ ಅವರು ಹೇಳಿಕೊಡುವ ಪಾಠ ನೇರವಾಗಿ ವಿದ್ಯಾರ್ಥಿಗಳ ಮನಸ್ಸಿಗೆ ನಾಟುತ್ತದೆ. ಯೂಟ್ಯೂಬ್ನಲ್ಲಿ ಕೋಟ್ಯಂತರ ಫಾಲೋವರ್ಗಳನ್ನು ಹೊಂದಿರುವ ಅವರು, ಕಠಿಣ ಶಿಕ್ಷಣವನ್ನು ಹಳ್ಳಿಯ ಕಟ್ಟಕಡೆಯ ಗುಡಿಸಲಿನವರೆಗೂ ಕೊಂಡೊಯ್ದ ನೈಜ ಸಾಧಕ.
ಖಾನ್ ಸರ್ ಅವರ ಮತ್ತೊಂದು ದೊಡ್ಡ ಸಾಧನೆಯೆಂದರೆ, ಅವರು ಕಟ್ಟಿರುವ ಭಾವೈಕ್ಯತೆಯ ಸೇತುವೆ. ಹಿಂದೂ-ಮುಸ್ಲಿಂ ಎಂಬ ಯಾವುದೇ ಭೇದಭಾವವಿಲ್ಲದೆ, ಎರಡೂ ಸಮುದಾಯಗಳ ವಿದ್ಯಾರ್ಥಿಗಳನ್ನು ಒಡಹುಟ್ಟಿದವರಂತೆ ಅವರು ಪ್ರೀತಿಸುತ್ತಾರೆ. ಅವರ ತರಗತಿಯಲ್ಲಿ ಈದ್ ಹಬ್ಬದಷ್ಟೇ ಸಡಗರದಿಂದ ರಕ್ಷಾಬಂಧನ, ದೀಪಾವಳಿ ಮತ್ತು ಸರಸ್ವತಿ ಪೂಜೆಯೂ ನಡೆಯುತ್ತದೆ. ಧರ್ಮ, ಜಾತಿಗಳ ಗಡಿಗಳನ್ನು ಮೀರಿ, ‘ಮನುಷ್ಯತ್ವ ಮತ್ತು ಶಿಕ್ಷಣವೇ ಅತಿದೊಡ್ಡ ಧರ್ಮ’ ಎಂದು ಸಾರುವ ಅವರ ಜಾತ್ಯತೀತ ನಿಲುವು ಎಲ್ಲರ ಹೃದಯವನ್ನು ಗೆದ್ದಿದೆ.
ಅವರ ಸೇವಾ ಮನೋಭಾವದ ಅಸಲಿ ಪ್ರತಿರೂಪ ಕಾಣುವುದು ಅವರು ನಿಗದಿಪಡಿಸಿರುವ ಶುಲ್ಕದಲ್ಲಿ. ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ಯುಪಿಎಸ್ಸಿ, ಬಿಪಿಎಸ್ಸಿ, ಎಸ್ಎಸ್ಸಿ, ರೈಲ್ವೆ ಪರೀಕ್ಷೆಗಳ ಕೋಚಿಂಗ್ ಜಗತ್ತಿನಲ್ಲಿ, ಖಾನ್ ಸರ್ ಕೇಳುವುದು ಕೇವಲ 200 ರೂಪಾಯಿ! ಹೌದು, ದಿನಗೂಲಿ ನೌಕರ, ರಿಕ್ಷಾ ಚಾಲಕ, ಕೂಲಿ ಕಾರ್ಮಿಕರ ಮಕ್ಕಳೂ ಸಹ ಐಎಎಸ್ ಅಧಿಕಾರಿಯಾಗುವ ಕನಸು ಕಾಣುವಂತೆ ಮತ್ತು ಅದನ್ನು ನನಸು ಮಾಡುವಂತೆ ಮಾಡಿದ ಕೀರ್ತಿ ಈ ಅಕ್ಷರ ದಾಸೋಹಿಗೆ ಸಲ್ಲುತ್ತದೆ. ಬಡತನ ಯಾವತ್ತೂ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದೇ ಅವರ ಮೂಲ ಮಂತ್ರ.
ಆದರೆ, ಒಳಿತು ಮಾಡುವವರ ಹಾದಿ ಎಂದಿಗೂ ಸುಗಮವಾಗಿರುವುದಿಲ್ಲ. ಅವರ ಈ ಅಗಾಧ ಜನಪ್ರಿಯತೆ ಮತ್ತು ಬಡಪರ ಕಾಳಜಿ ವ್ಯವಸ್ಥೆಯ ಕೆಲವರಿಗೆ ನುಂಗಲಾರದ ತುತ್ತಾಯಿತು. ಮೊದಲಿಗೆ ಖಾನ್ ಸರ್ ಅವರ ಸಂಸ್ಥೆಗಳನ್ನು ಮುಚ್ಚಿಸಬೇಕೆಂದೇ ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಸಂಸ್ಥೆ ಸೇರಿಕೊಳ್ಳುವಂತೆ ಅವರಿಗೆ ಹಲವು ಕೋಟಿಗಳನ್ನು ನೀಡುವುದಾಗಿ ಆಹ್ವಾನ ನೀಡಿದರು. ಅವರು ಬಡ ವಿದ್ಯಾರ್ಥಿಗಳನ್ನು ಬಿಟ್ಟು ಬರುವುದಿಲ್ಲ ಎಂದದು ತಿರಸ್ಕರಿಸಿದಾಗ ಬೇರೆ ಆಟಗಳನ್ನು ಶುರುವಿಟ್ಟುಕೊಂಡರು. ಒಮ್ಮೆ ರಾಷ್ಟ್ರೀಯ ವಾಹಿನಿಯೊಂದರ ಆ್ಯಂಕರ್ ಅಂಜನಾ ಓಂ ಕಶ್ಯಪ್ ಅವರು, ಯೂಟ್ಯೂಬ್ ಹಾಗೂ ಸಣ್ಣಪುಟ್ಟ ತರಗತಿಗಳ ಶಿಕ್ಷಕರನ್ನು ಕಡೆಗಣಿಸಿ ‘ಕವಡೆ ಕಿಮ್ಮತ್ತಿಲ್ಲದವರು’ ಎಂದು ಅತ್ಯಂತ ಕೀಳಾಗಿ ನಿಂದಿಸಿದ್ದರು. ಹವಾನಿಯಂತ್ರಿತ ಸ್ಟುಡಿಯೋದಲ್ಲಿ ಕುಳಿತು ಮುಖ್ಯವಾಹಿನಿಯ ಮಾಧ್ಯಮಗಳು ತೋರಿದ ಈ ಅಹಂಕಾರದ ಮಾತುಗಳು ಇಡೀ ಶಿಕ್ಷಕ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿತ್ತು.
ಇದನ್ನು ಓದಿದ್ದೀರಾ? ದಬ್ಬಾಳಿಕೆಗೆ ಬೆದರದ ಹೆಜ್ಜೆ: ವಿದೇಶದಲ್ಲಿ ಒಂದಾದ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡ
ಮಾಧ್ಯಮಗಳ ಈ ಅಹಂಕಾರಕ್ಕೆ ಖಾನ್ ಸರ್ ನೀಡಿದ ತಿರುಗೇಟು ಅತ್ಯಂತ ಮಾರ್ಮಿಕ ಹಾಗೂ ತೀಕ್ಷ್ಣವಾಗಿತ್ತು. “ಯಾರನ್ನು ನೀವು ಕವಡೆ ಕಿಮ್ಮತ್ತಿಲ್ಲದವರು ಎನ್ನುತ್ತಿದ್ದೀರೋ, ಅದೇ ಸಣ್ಣ ಶಿಕ್ಷಕರು ಇಂದು ಪ್ರತಿಷ್ಠಿತ ಶಾಲೆಗಳ ಮೆಟ್ಟಿಲು ಹತ್ತಲಾಗದ ಬಡವರ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ರಾಷ್ಟ್ರ ನಿರ್ಮಾಣದ ನಿಜವಾದ ಕೆಲಸ ನಡೆಯುತ್ತಿರುವುದು ಎಸಿ ಸ್ಟುಡಿಯೋಗಳಲ್ಲಲ್ಲ, ಬದಲಾಗಿ ಸೋರುವ ಸೂರುಗಳ ಕೆಳಗಿರುವ ಇಂತಹ ತರಗತಿಗಳಲ್ಲಿ,” ಎಂದು ಉತ್ತರಿಸುವ ಮೂಲಕ ಖಾನ್ ಸರ್ ಶಿಕ್ಷಕರ ಘನತೆಯನ್ನು ಎತ್ತಿಹಿಡಿದರು.
ಇಷ್ಟೇ ಅಲ್ಲದೆ, ಶಿಕ್ಷಣವನ್ನು ಸೇವೆ ಎಂದು ಭಾವಿಸಿದ ಖಾನ್ ಸರ್, ಕೋಚಿಂಗ್ ಅನ್ನೇ ದಂಧೆ ಮಾಡಿಕೊಂಡಿದ್ದ ಪಾಟ್ನಾದ ‘ಶಿಕ್ಷಣ ಮಾಫಿಯಾ’ದ ನಿದ್ದೆಗೆಡಿಸಿದ್ದರು. ಲಕ್ಷಾಂತರ ರೂಪಾಯಿ ದೋಚುತ್ತಿದ್ದವರ ಹೊಟ್ಟೆ ಮೇಲೆ ಇವರ 200 ರೂಪಾಯಿಯ ಕ್ರಾಂತಿ ತಣ್ಣೀರು ಎರಚಿತ್ತು. ಇದೇ ದ್ವೇಷದಿಂದ, ಅವರನ್ನು ಹೆದರಿಸಿ ಸಂಸ್ಥೆ ಮುಚ್ಚಿಸಲು ಅವರ ಕೋಚಿಂಗ್ ಸೆಂಟರ್ ಮೇಲೆ ದುಷ್ಕರ್ಮಿಗಳು ನಾಡಬಾಂಬ್ ಎಸೆದು, ಗುಂಡಿನ ದಾಳಿ ನಡೆಸಿ ಭಾರಿ ದಾಂಧಲೆ ಸೃಷ್ಟಿಸಿದ್ದರು. ಇದು ಶಿಕ್ಷಣ ವ್ಯವಸ್ಥೆಗೆ ಅಂಟಿದ ಭ್ರಷ್ಟಾಚಾರದ ಕರಾಳ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿತ್ತು.
ಎರಡು ದಿನಗಳ ಹಿಂದಷ್ಟೆ ಈ ಭೀಕರ ದಾಳಿಗೆ ಸಂಬಂಧಿಸಿದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಹಾಗೂ ಆಡಳಿತ ವ್ಯವಸ್ಥೆ, ಖಾನ್ ಸರ್ ಸಂಸ್ಥೆಯ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ತನಿಖೆಯ ಬಳಿಕ, ಈ ಕೃತ್ಯದ ಹಿಂದಿದ್ದ ಸ್ಥಳೀಯ ಕೋಚಿಂಗ್ ಮಾಫಿಯಾದ ಪ್ರಮುಖ ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದಕ್ಕೆ ತಳ್ಳಲಾಗಿದೆ. ಸತ್ಯ ಮತ್ತು ನಿಸ್ವಾರ್ಥ ಸೇವೆಗೆ ಎಂದೆಂದಿಗೂ ಜಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಆರೋಪಿಗಳ ಬಂಧನದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ಶಿಕ್ಷಣ ಮಾಫಿಯಾದ ಸೊಕ್ಕು ಅಡಗಿಸಿದಂತಾಗಿದೆ. ಇದರಿಂದ ಖಾನ್ ಸರ್ ಅವರ ಶೈಕ್ಷಣಿಕ ಕ್ರಾಂತಿಗೆ ಮತ್ತಷ್ಟು ನೈತಿಕ ಬಲ ಬಂದಂತಾಗಿದೆ.
ಎಷ್ಟೇ ಗುಂಡಿನ ದಾಳಿಗಳಾಗಲಿ, ಬಾಂಬ್ ಬೆದರಿಕೆಗಳಿರಲಿ ಅಥವಾ ಮಾಧ್ಯಮಗಳ ನಿಂದನೆಯಿರಲಿ, ಯಾವುದೂ ಈ ಅಕ್ಷರ ಸಂತನ ಆತ್ಮಸ್ಥೈರ್ಯವನ್ನು ಅಲುಗಾಡಿಸಲಿಲ್ಲ. ನ್ಯಾಯದ ಗೆಲುವಿನೊಂದಿಗೆ, ಅವರು ಬಡ ವಿದ್ಯಾರ್ಥಿಗಳ ಕೈಬಿಡದೆ ಇನ್ನಷ್ಟು ದೃಢವಾಗಿ ಎದ್ದು ನಿಂತರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಎಂಬ ಅವರ ಈ ಅವಿರತ ಹೋರಾಟ ಮತ್ತು ನಿಸ್ವಾರ್ಥ ಸೇವೆ, ಇಂದು ಅವರನ್ನು ಕೇವಲ ಒಬ್ಬ ಶಿಕ್ಷಕನನ್ನಾಗಿ ಉಳಿಸಿಲ್ಲ; ಬದಲಾಗಿ ದೇಶದ ಲಕ್ಷಾಂತರ ಯುವಮನಸ್ಸುಗಳನ್ನು ಬಡಿದೆಬ್ಬಿಸಿದ ನೈಜ ನಾಯಕನನ್ನಾಗಿ ರೂಪಿಸಿದೆ.





