ಸೆಪ್ಟೆಂಬರ್‌ನಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣದಿರುವುದರಿಂದ ಮುಂಬರುವ ವಾರಗಳಲ್ಲಿ ರಾಜ್ಯಾದ್ಯಂತ ಮಳೆ ಕೊರತೆ ಹೆಚ್ಚಾಗಬಹುದು. ಅಲ್ಲದೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸುಮಾರು ಶೇ.50ರಷ್ಟು ಬೆಳೆಹಾನಿ ಉಂಟಾಗುವ ಸಾಧ್ಯತೆಯಿದೆ.
ರಾಜ್ಯದ ಒಟ್ಟು 239 ತಾಲೂಕುಗಳ ಪೈಕಿ 102 ತಾಲೂಕುಗಳನ್ನು ‘ಬರ ಪೀಡಿತ’ ಎಂದು ಘೋಷಿಸಲಾಗಿದ್ದು, ಒಂದು ವಾರದಲ್ಲಿ ಇನ್ನೂ 26 ತಾಲೂಕುಗಳನ್ನು ಬರಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ತೀವ್ರ ಬೆಳೆ ನಷ್ಟ ಅನುಭವಿಸಿವೆ. ರಾಜ್ಯದ ಉತ್ತರ ಭಾಗಗಳಲ್ಲಿ, ಹಾವೇರಿ, ಬೀದರ್, ಕಲಬುರಗಿ ಹಾಗೂ ರಾಯಚೂರುಗಳಲ್ಲಿ ಬಿತ್ತನೆ ಪ್ರಮಾಣ ತೀವ್ರವಾಗಿ ಕುಸಿದಿದೆ.
“ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ 228 ತಾಲೂಕುಗಳಲ್ಲಿ, 122 ತಾಲೂಕುಗಳು ಸತತ ಮೂರು ವಾರಗಳಿಂದ ಮಳೆ ಕೊರತೆ ಅನುಭವಿಸಿವೆ. ಇದರಿಂದ ಬೆಳೆಗಳು ಕೈತಪ್ಪುವ ಪರಿಸ್ಥಿತಿ ಸ್ಪಷ್ಟವಾಗಿದ್ದು, ದಕ್ಷಿಣ ಒಳನಾಡಿನ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ನೀರಾವರಿ ಜಮೀನುಗಳಲ್ಲಿ ಕೆಲವು ಬೆಳೆಗಳನ್ನು ರಕ್ಷಿಸಲಾಗುತ್ತಿದ್ದರೂ ಮಳೆಯನ್ನು ಅವಲಂಬಿಸಿರುವವರಿಗೆ ಇಳುವರು ಕುಂಠತವಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಸುಮಾರು ಶೇ.50ರಷ್ಟು ಬೆಳೆ ನಷ್ಟವಾಗುವುದಾಗಿ ಅಂದಾಜಿಸಲಾಗಿದೆ” ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಮೋಡ ಬಿತ್ತನೆ ಮತ್ತು ಮಾಯಾ ಬಜಾರಿನ ತೆನೆ!
ರಾಜ್ಯದಲ್ಲಿ ಕಳೆದ ಮುಂಗಾರಿನಲ್ಲಿ 82.5 ಲಕ್ಷ ಹೆಕ್ಟೇರ್ ಕೃಷಿ ಉತ್ಪಾದನೆಯಾಗಿದ್ದರೆ, ಈ ವರ್ಷ ಕೇವಲ 36.5 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಬರಪೀಡಿತವೆಂದು ಘೋಷಿಸಲಾದ 101 ತಾಲೂಕುಗಳಿಗೆ ಪರಿಹಾರ ಕ್ರಮಗಳಿಗಾಗಿ ರಾಜ್ಯಕ್ಕೆ 2,600 ಕೋಟಿ ರೂ.ಗಳ ಅಗತ್ಯವಿರುವುದಾಗಿ ಸರ್ಕಾರ ಅಂದಾಜಿಸಿದೆ. ಮುಖ್ಯಮಂತ್ರಿಗಳೂ ಕೂಡ ಕೇಂದ್ರದಿಂದ ಹೆಚ್ಚುವರಿ ಪರಿಹಾರವನ್ನು ಕೋರುವ ಸಾಧ್ಯತೆಯಿದೆ” ಎಂದು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ತೀವ್ರ ಬೆಳೆ ನಷ್ಟ ಮತ್ತು ಮಳೆ ಕೊರತೆಯಿಂದಾಗಿ ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಅನ್ವಯ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಜಂಟಿ ಸಮೀಕ್ಷೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.






