ಆಸ್ಪತ್ರೆ ಉಪಕರಣಗಳ ಮೇಲೆ 2,800%ಗೂ ಹೆಚ್ಚು ಕೃತಕ ಬೆಲೆ ಏರಿಕೆ ಮಾಡಿ ರೋಗಿಗಳನ್ನು ಶೋಷಿಸಲಾಗುತ್ತಿದೆ. 11ರೂ.ಗಳ ಐವಿ ಸೆಟ್‌ಗೆ 325 ರೂಪಾಯಿ, 6.75 ರೂ.ಗಳ ಸಿರಿಂಜ್‌ಗೆ 57.20 ರೂಪಾಯಿ ಹಾಗೂ 40 ರೂ.ಗಳ ಆಕ್ಸಿಜನ್ ಮಾಸ್ಕ್‌ಗೆ 715 ರೂಪಾಯಿ MRP ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ‘ಆಹಾರ ಮತ್ತು ಔಷಧ ಆಡಳಿತ’ (FDA) ಆಯುಕ್ತ ತುಕಾರಾಂ ಮುಂಡೆ ಆರೋಪಿಸಿದ್ದಾರೆ. ಈ ವೈದ್ಯಕೀಯ ದಗಾಕೋರತನಕ್ಕೆ ಕಡಿವಾಣ ಹಾಕಲು ಆಸ್ಪತ್ರೆ ಉಪಕರಣಗಳನ್ನು ‘ಔಷಧ ಬೆಲೆ ನಿಯಂತ್ರಣ ಆದೇಶ-2013’ರ (DPCO) ಅಡಿಯಲ್ಲಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಫ್‌ಡಿಎ ಆಯುಕ್ತರಾಗಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತುಕಾರಾಂ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಸಂದರ್ಶನ ನೀಡಿದ್ದು, ತಮ್ಮ ಇಲಾಖೆಯ ಸುಧಾರಣೆಗಳು, ದೀರ್ಘಕಾಲದ ಸವಾಲುಗಳು ಹಾಗೂ ತಾವು ಕೈಗೊಂಡ ಕಠಿಣ ಕ್ರಮಗಳ ವಿಸ್ತೃತ ವರದಿಯನ್ನು ಹಂಚಿಕೊಂಡಿದ್ದಾರೆ.
“ಆಹಾರದ ಗುಣಮಟ್ಟ, ಔಷಧಗಳ ಸುರಕ್ಷತೆ, ಆಸ್ಪತ್ರೆ ಉಪಕರಣಗಳ ಕೃತಕ ಬೆಲೆ ಏರಿಕೆ ಹಾಗೂ ಶಾಲಾ ಮಕ್ಕಳ ಆಹಾರ ಪದ್ಧತಿ—ಇವು ಕೇವಲ ಆಡಳಿತಾತ್ಮಕ ವಿಷಯಗಳಲ್ಲ, ಜನರ ಜೀವಕ್ಕೆ ನೇರವಾಗಿ ಸಂಬಂಧಿಸಿದ ಗಂಭೀರ ಸಾರ್ವಜನಿಕ ಆರೋಗ್ಯ ಪ್ರಶ್ನೆಗಳು” ಎಂದು ಅವರು ಹೇಳಿದ್ದಾರೆ.
“ದೇಶದಲ್ಲಿ ಆಹಾರ ಸುರಕ್ಷತೆಯನ್ನು ಕೇವಲ ಕಲಬೆರಕೆಯಾಗಿ ನೋಡಬಾರದು. ಇದು ಸಾರ್ವಜನಿಕ ಆರೋಗ್ಯದ ಅತಿ ದೊಡ್ಡ ಸಂಕಷ್ಟವಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿದ್ದ ರೋಗಗಳಲ್ಲಿ 70%ರಷ್ಟು ಸಾಂಕ್ರಾಮಿಕ ರೋಗಗಳಾಗಿದ್ದವು. ಆದರೆ, ಇಂದು 70%ರಷ್ಟು ರೋಗಗಳು ಅಸಾಂಕ್ರಾಮಿಕ ರೋಗಗಳಾಗಿದ್ದು, ಕೊಬ್ಬು, ಉಪ್ಪು ಹಾಗೂ ಸಕ್ಕರೆ ಅಧಿಕವಾಗಿರುವ ಆಹಾರಗಳ ಅನಿಯಂತ್ರಿತ ಸೇವನೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ” ಎಂದು ಅವರು ತಿಳಿಸಿದ್ದಾರೆ.

“ಮಹಾರಾಷ್ಟ್ರದಲ್ಲಿ ಪ್ರತಿದಿನ 1.8ರಿಂದ 2 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿದ್ದರೂ, ರಾಜ್ಯದ ಜಾನುವಾರುಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಈ ಪ್ರಮಾಣ ಹೊಂದಾಣಿಕೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿದಿನ ಲಭ್ಯವಾಗುತ್ತಿರುವ ಹಾಲು ಎಲ್ಲಿಂದ ಬರುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
“ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬಳಸುವ ವೈದ್ಯಕೀಯ ಉಪಕರಣಗಳ ಖರೀದಿ ಬೆಲೆ ಮತ್ತು ಗರಿಷ್ಠ ಚಿಲ್ಲರೆ ಬೆಲೆ (MRP) ನಡುವೆ ಅಗಾಧ ವ್ಯತ್ಯಾಸವಿದೆ. ಉದಾಹರಣೆಗೆ, 11.05 ರೂ. ಖರೀದಿ ಬೆಲೆಯ ‘ಮೆಡಿಫ್ಯೂಷನ್ ಐವಿ ಸೆಟ್’ ಮೇಲೆ 325 ರೂ. ಎಂಆರ್‌ಪಿ ನಮೂದಿಸುವ ಮೂಲಕ 2,841%ರಷ್ಟು ಲಾಭಗಳಿಸಲಾಗುತ್ತಿದೆ. ಅದೇ ರೀತಿ 70 ರೂ.ಗಳ ‘ಆಟೋಫ್ಯೂಷನ್ ಸೆಟ್’ಅನ್ನು 393 ರೂ.ಗೆ, 6.75 ರೂ.ಗಳ ಸಿರಿಂಜ್ 57.20 ರೂ.ಗೆ, ಹಾಗೂ 40 ರೂ.ಗಳ ನೆಬ್ಯುಲೈಸರ್-ಆಕ್ಸಿಜನ್ ಮಾಸ್ಕ್‌ಗಳನ್ನು 715 ರೂ.ರವರೆಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಮಾಹಿತಿ ಅಸಮಾನತೆ ಮತ್ತು ಶೋಷಣೆಯನ್ನು ತಡೆಯಲು, ಆಸ್ಪತ್ರೆ ಉಪಕರಣಗಳನ್ನು ‘ಔಷಧ ಬೆಲೆ ನಿಯಂತ್ರಣ ಆದೇಶ-2013’ರ ಸೆಕ್ಷನ್ 4ರ ಅಡಿಯಲ್ಲಿ ತರಲು ಕೋರಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ಎಫ್‌ಡಿಎ ಪ್ರಸ್ತಾವನೆ ರವಾನಿಸಿದೆ” ಎಂದು ಅವರು ವಿವರಿಸಿದ್ದಾರೆ.
“ಪ್ರಯೋಗಾಲಯಗಳಲ್ಲಿ ನಿರಂತರ ಕೆಲಸ ನಿರ್ವಹಿಸದೆ ಕೆಲಸದ ವೇಳೆಯನ್ನು ಬೆಳಿಗ್ಗೆ 10 ರಿಂದ ಸಂಜೆ 6ಕ್ಕೆ ಸೀಮಿತಗೊಳಿಸಿದ್ದನ್ನು ಸರಿಪಡಿಸಿದ್ದೇವೆ. ಪರಿಣಾಮ, ಬಾಕಿ ಇದ್ದ 14,000 ಮಾದರಿಗಳು ಸೇರಿ, 35,000ಕ್ಕೂ ಹೆಚ್ಚು ಮಾದರಿಗಳನ್ನು ಕೇವಲ ಮೂರು ತಿಂಗಳಲ್ಲಿ ಪ್ರಕ್ರಿಯೆಗೆ ಒಳಪಡಿಸಿ 32,000ಕ್ಕೂ ಹೆಚ್ಚು ಪರೀಕ್ಷಾ ಫಲಿತಾಂಶಗಳನ್ನು ಹೊರತರಲಾಗಿದೆ. ಇದೇ ಅವಧಿಯಲ್ಲಿ 2,485 ಔಷಧ ಉತ್ಪಾದನಾ ಸಂಸ್ಥೆಗಳನ್ನು ಪರಿಶೀಲಿಸಿ, 230 ಸಂಸ್ಥೆಗಳ ಪರವಾನಗಿ ಅಮಾನತು ಮತ್ತು 38 ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಜೊತೆಗೆ ರಾಜ್ಯಾದ್ಯಂತ 11,780 ಔಷಧ ಅಂಗಡಿಗಳನ್ನು ಪರಿಶೀಲಿಸಿ, 2,075 ಪರವಾನಗಿಗಳನ್ನು ಅಮಾನತುಗೊಳಿಸಿ, 394 ಪರವಾನಗಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!
“ಶಾಲೆಗಳಲ್ಲಿ ಜಂಕ್ ಫುಡ್‌ಗೆ ಕಡಿವಾಣ ಹಾಕಿ, ಸಮತೋಲಿತ ಆಹಾರ ಜಾರಿಗೆ ಎಫ್‌ಡಿಎ ಆದೇಶ ಹೊರಡಿಸಿತು. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಈಗ ಬಹುತೇಕ ಶಾಲೆಗಳು ಮತ್ತು ಪೋಷಕರು ಈ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ” ಎಂದಿದ್ದಾರೆ.
“ಸಿಪ್ಲಾ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೂನ್‌ನಲ್ಲಿ ಕಂಡುಬಂದಿದ್ದ ಗುಣಮಟ್ಟದ ಸಮಸ್ಯೆಯ ನಂತರ ನೋಟಿಸ್ ನೀಡಿದ್ದರೂ ಕಂಪನಿ ಸರಿಯಾಗಿ ಸ್ಪಂದಿಸಿರಲಿಲ್ಲ. ವಿಚಾರಣೆಯನ್ನು ಸಾರ್ವಜನಿಕ ರಜಾದಿನದಂದು ನಡೆಸಿದ್ದನ್ನು ಮಾತ್ರ ನ್ಯಾಯಾಲಯ ಪ್ರಶ್ನಿಸಿದೆಯೇ ಹೊರತು ಎಫ್‌ಡಿಎ ತೆಗೆದುಕೊಂಡ ಕ್ರಮವನ್ನಲ್ಲ. ಹೀಗಾಗಿ ಪ್ರಕ್ರಿಯಾ ದೋಷಗಳನ್ನು ಸರಿಪಡಿಸಿ ಮತ್ತೆ ನೋಟಿಸ್ ನೀಡಲಾಗುವುದು” ಎಂದಿದ್ದಾರೆ.
ತಮ್ಮ 25 ವರ್ಗಾವಣೆಗಳ ಕುರಿತು ಮಾತನಾಡಿದ ಮುಂಡೆ, “ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಆದರೆ, ವ್ಯವಸ್ಥೆ ಮತ್ತು ಸುಧಾರಣೆಗಳು ಶಾಶ್ವತವಾಗಿರಬೇಕು. ಎಫ್‌ಡಿಎಯ 1,200 ಸಿಬ್ಬಂದಿಗಳ ಹಿತಕ್ಕಿಂತ ಮಹಾರಾಷ್ಟ್ರದ 12 ರಿಂದ 13 ಕೋಟಿ ಜನರ ಆರೋಗ್ಯವೇ ನಮಗೆ ಮುಖ್ಯ. ನಮ್ಮ ಪ್ರತಿಯೊಂದು ಕ್ರಮವೂ ಸಾರ್ವಜನಿಕರ ಹಿತಾಸಕ್ತಿಯನ್ನೇ ಕಾಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




