ಶ್ರಾವಣದ ನಂತರ ಹುಬ್ಬಿ, ಉತ್ತರಿ ಮಳೆ ಸುರುವಾದಾಗ ಆಕಾಶ ಮತ್ತೆ ಬಣ ಬಣ ಅನ್ನತೊಡಗುತ್ತದೆ. ಮಹಾನವಮಿಗೆ ಮತ್ತೆ ಹಿಂಗಾರು ಆರಂಭಗೊಳ್ಳುತ್ತದೆ. ಅದರ ಪೂರ್ವದಲ್ಲಿ ಪಡುವಣಗಾಳಿ ಸೋತಂತಾಗಿ ಮೂಡಗಾಳಿ ಸುಳಿಯತೊಡಗುತ್ತದೆ.
ನಾವು ರೈತರು ಮೇ ಜೂನ್ನಿಂದ ಬಿತ್ತನೆ ಸುರು ಮಾಡ್ತೀವೀ. ಹೆಸರು, ಎಳ್ಳು ಕೃತ್ತಿಕಾ ಮಳೆಗೇ ಬಿತ್ತುವ ರೂಢಿ ಇದೆ. ಜೋಳ, ಗೆಜ್ಜೆಶೇಂಗಾ, ಈರುಳ್ಳಿ, ನವಣಿ, ಹತ್ತಿ ಮತ್ತಿತರ ಬೆಳೆಗಳನ್ನು ರೋಹಿಣಿ/ಮೃಗಶಿರಾ ಮಳೆಗೆ ಬಿತ್ತುತ್ತಾರೆ. ಆದ್ರಿ ಮಳೆಗೆ ಆರು ಕಾಯಿ ಹೆಚ್ಚು ಅಂತ ಮೆಣಸಿನ ಗಿಡಗಳನ್ನು ಆದ್ರಿ ಮಳೆಗೆ ಹಚ್ಚುತ್ತಾರೆ, ಸೂರ್ಯಪಾನ ಬಿತ್ತನೆ ಜುಲೈನಲ್ಲಿ ಅಂದರೆ, ಹೀರೆ ಪುಷ್ಯ/ ಚಿಕ್ಕಪುಷ್ಯ ಮಳೆಗೆ ಆಗುತ್ತದೆ…
ಇದು ಆಗಲೇ ಸಪ್ಟೆಂಬರ್ರು. ಹುಬ್ಬಿ ಮಳೆ ಸರಿದು ಇನ್ನೇನು ಉತ್ತರೀ ಆರಂಭವಾಗಲಿದೆ. ಮುಂಗಾರಿನ ಪೀಕುಗಳು ಬರಗಾಲದಲ್ಲೂ ಆಟೀಟು ಬೆಳೆದು ಇನ್ನೇನು ಕೊಯ್ಲಿಗೆ ಬರುತ್ತಲಿವೆ. ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಾಲನೆ ನೀಡಿದೆ. ಈಗಾಗಲೇ ಕೊಯ್ಲಿಗೆ ಬಂದಿರುವ ಮುಂಗಾರಿನ ಬೆಳೆಗಳಿಗೆ ಈ ಮೋಡ ಬಿತ್ತನೆಯಿಂದ ಯಾವ ರೀತಿಯ ಪ್ರಯೋಜನ ಆಗಲಿದೆ ಎಂಬ ಪ್ರಶ್ನೆ ಸಹಜ. ಒಮ್ಮೊಮ್ಮೆ ಕೈಗೇ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮಳೆಯಿಂದಾಗಿ ಕೊಯ್ಲಿಗೆ ಬಂದ ಬೆಳೆಗಳೂ ಹಾಳಾಗಿ ರೈತರು ಸಂಕಷ್ಟ ಅನುಭವಿಸೋದೂ ಉಂಟು. ರಾಜ್ಯ ಸರ್ಕಾರದ ಮೋಡ ಬಿತ್ತನೆಯಿಂದ ರೈತರಿಗೆ ಇಂಥ ಸಂಕಷ್ಟ ಎದುರಾಗದಿದ್ದರೆ ಅದೇ ಪುಣ್ಯ.
ಮೋಡ ಬಿತ್ತನೆಗೆ ಯಾವುದು ಸಕಾಲ?
ಸರ್ಕಾರಕ್ಕೆ ಕೃಷಿ ಕ್ಷೇತ್ರದ ಬಗ್ಗೆ, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಮೋಡ ಬಿತ್ತನೆ ಯೋಜನೆಯನ್ನು ಮುಂದಾಲೋಚನೆಯಿಂದ ಮೊದಲೇ ರೂಪಿಸಬೇಕು. ಮಳೆ ಅಭಾವ ಎದುರಿಸುವ ಪ್ರದೇಶಗಳನ್ನು ಸರಿಯಾಗಿ ಗುರುತಿಸಬೇಕು. ಅಲ್ಲದೇ, ಯಾವ ಅವಧಿಯಲ್ಲಿ ಮೋಡ ಬಿತ್ತನೆ ಕೈಗೊಂಡರೆ ಹೆಚ್ಚು ಪ್ರಯೋಜನ ಎಂಬುದನ್ನು ನಿರ್ಧರಿಸಬೇಕು. ಬಿತ್ತನೆಯ ಕಾಲ ಅಥವಾ ಬಿತ್ತನೆಯ ನಂತರದ ಒಂದೆರೆಡು ವಾರ ಇಲ್ಲವೇ, ಬೆಳೆಗಳು ತೆನೆ ಕೀಳುವ, ಹೂಫಲ ತೊಡುವ ಮುಂಚಿನ ಒಂದೆರಡು ವಾರ ಮೋಡ ಬಿತ್ತನೆ ಮಾಡಿದರೆ, ಅದರಿಂದ ಒಂದಿಷ್ಟು ಮಳೆ ಸುರಿದರೆ ಅದು ನಿಜಕ್ಕೂ ಪ್ರಯೋಜನಕಾರಿಯೇ! ಮೋಡ ಬಿತ್ತನೆಯ ಪರಿಣಾಮ ಕೂಡ ಅನಿಶ್ಚಿತ, ಅದನ್ನು ಖಚಿತವಾಗಿ ಹೀಗೇ ಎಂದು ಹೇಳಲಾಗದು.
ಮುಂಗಾರಿನ ಆರಂಭದಲ್ಲೆ ತಜ್ಞರ ಸಮಿತಿಯೊಂದನ್ನು ರಚಿಸಿ ಮೋಡ ಬಿತ್ತನೆಯ ಕಾರ್ಯಾಚರಣೆಯ ರೂಪರೇಷೆಗಳನ್ನು ರೂಪಿಸಿ ಅದರ ಪ್ರಕಾರ ಅದನ್ನು ಕಾರ್ಯಗತಗೊಳಿಸುವುದು ಸೂಕ್ತ. ಹೀಗಿರುವಾಗ, ಸರ್ಕಾರ ಮೋಡ ಬಿತ್ತನೆಗೆ ದಿಢೀರನೆ ನಿರ್ಧಾರ ಕೈಗೊಂಡು ತಿಥಿಮತಿ ನೋಡದೇ ಅದನ್ನು ಕಾರ್ಯಗತಗೊಳಿಸಲು ಹೊರಡುವುದು ಮೂರ್ಖತನವೇ ಸರಿ.
ಮೋಡ ಬಿತ್ತನೆಯ ಉದ್ದೇಶ ಏನು?
ಬೆಳೆಗಳೆಲ್ಲ ಕೊಯ್ಲಿಗೆ ಬಂದಿರುವ ಈ ಸಂದರ್ಭದಲ್ಲಿ ಸರ್ಕಾರ ಮೋಡ ಬಿತ್ತನೆಗೆ ಚಾಲನೆ ನೀಡಿರುವುದು ಅನೇಕ ಅನುಮಾನಗಳನ್ನು ಹುಟ್ಪು ಹಾಕಿದೆ. ಸಪ್ಟೆಂಬರ್ ನಲ್ಲಿ ಮೋಡ ಬಿತ್ತನೆ ಎಷ್ಪು ಪ್ರಯೋಜನಕಾರಿ ಅಥವಾ ನಿಷ್ಪ್ರಯೋಜಕ ಎಂಬ ಬಗ್ಗೆ ಸರ್ಕಾರ ಎಳ್ಳಷ್ಟೂ ಯೋಚಿಸಿದಂತೆ ಕಾಣುತ್ತಿಲ್ಲ. ಏಕೆಂದರೆ, ಮೋಡ ಬಿತ್ತನೆಗೆ ಮುನ್ನ ನಮ್ಮ ರಾಜ್ಯದಲ್ಲಿ ತೂಗುವ ಮಳೆ ಮಾರುತಗಳು ಮತ್ತು ಬೆಳೆ ಅವಧಿಗಳ ಪಾರಂಪರಿಕ ತಿಳಿವಳಿಕೆ ಇರಬೇಕಾದದ್ದು ಅತ್ಯಗತ್ಯ. ಇಂಥ ತಿಳಿವಳಿಕೆ ಇರುವ ಯಾರಿಗಾದರೂ ಸಪ್ಟೆಂಬರ್ ನಲ್ಲಿ ಮೋಡ ಬಿತ್ತನೆ ಮಾಡುವುದು ನಿಷ್ಪ್ರಯೋಜಕ ಎಂಬುದು ತಟ್ಟನೆ ಸ್ಪಷ್ಟವಾಗುತ್ತದೆ. ಏಕೆಂದರೆ, ಮೊದಲನೇಯದಾಗಿ ಸಪ್ಟೆಂಬರ್ನಲ್ಲಿ ನಮ್ಮ ಮುಂಗಾರು ಬೆಳೆಗಳೆಲ್ಲ ಕೊಯ್ಲಿಗೆ ಬಂದಿರುತ್ತವೆ. ಇನ್ನು ಎರಡನೇಯದಾಗಿ ಬಹು ಮುಖ್ಯವಾದದ್ದೆಂದರೆ ಈ ಸಪ್ಪೆಂಬರ್ನಲ್ಲಿ ಮೋಡ ಬಿತ್ತನೆಗೆ ಉಪಯುಕ್ತವಾದ ಮೋಡಗಳು ಇರುತ್ತವೆ ಎಂಬ ಖಚಿತತೆ ಇಲ್ಲ.
ಈ ಲೇಖನ ಓದಿದ್ದೀರಾ?: ಅವಳ ಕಣ್ಣೋಟ | ಗಂಟುಮೂಟೆ – ಪ್ರೀತಿಯ ನಂತರ ಉಳಿಯುವ ಮೀರಾ
ಹಿಂಗಾರು/ಮುಂಗಾರು
ನಮ್ಮ ಭಾರತೀಯ ಕೃಷಿ ಮುಖ್ಯವಾಗಿ ಎರಡು ಅವಧಿಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವಂಥದೇ. ಅವೇ ಮುಂಗಾರು ಮತ್ತು ಹಿಂಗಾರು. ಸಾಮಾನ್ಯವಾಗಿ ಮುಂಗಾರು ಪೂರ್ವ ಮಳೆಗಳು ಹೋಳಿ ಹುಣ್ಣಿಮೆಯಿಂದಲೇ ಆರಂಭವಾಗುತ್ತವೆ. ಅದು ಹಿಂಗಾರು ಕೊನೆಗೊಂಡು ಮುಂಗಾರು ಆರಂಭವಾಗುವ ಘಟ್ಟ. ಮೂಡ ಗಾಳಿ (ಮೂಡಣ ದಿಕ್ಕಿನಿಂದ ಬೀಸುವ ಗಾಳಿ)ಯ ತೀವ್ರತೆ ಕಡಿಮೆ ಆಗುತ್ತಿರುತ್ತದೆ, ಪಡುವಣ ಗಾಳಿ ( ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿ) ನಿಧಾನಕ್ಕೆ ಸುಳಿದು ಸುತ್ತಿ ಬರುತ್ತಿರುತ್ತದೆ. ಈ ಮಾರುತಗಳ ಸಂಘರ್ಷದ ಪರಿಣಾಮ ಸ್ಥಳೀಯ ತಾಪಮಾನ, ತೇವಾಂಶದ ಪರಿಣಾಮ ಉದ್ಭವಿಸುವ ಮಳೆಗಳಿವು. ಸಾಮಾನ್ಯವಾಗಿ ಇವು ಮಿಂಚು, ಗುಡುಗು, ಬಿರುಗಾಳಿಯೊಂದಿಗೆ ಮಳೆ ತರುತ್ತವೆ. ರೋಹಿಣಿಯ ಎರಡನೇ ಪಾದ ಇಲ್ಲವೇ ಮೃಗಶೀರಾ ಮಳೆಯಿಂದ ಮಾನ್ಸೂನ್ ಆರಂಭಗೊಳ್ಳುತ್ತದೆ. ಅಂದರೆ, ಪಶ್ಚಿಮ ನೈರುತ್ಯ ಮಾರುತಗಳು. ಇವು ಆಕಾಶವನ್ನೆಲ್ಲ ತಬ್ಬಿಕೊಂಡು ಸಾಲು ಸಾಲಾಗಿ ಎದ್ದು ಬರುವ ಇವನ್ನು ವರಕವಿ ಬೇಂದ್ರೆಯವರು. ತಮ್ಮ ಸಖೀಗೀತದಲ್ಲಿ “ಆಷಾಢದ ಮೋಡ ಈಸಾಡಿ ಬಂದವು” ಎಂದು ವರ್ಣಿಸಿದ್ದಾರೆ. ಇಂಥ ವಾತಾವರಣ ಪಂಚಮಿವರೆಗೂ ಇರುತ್ತದೆ. ಶ್ರಾವಣದ ನಂತರ ಹುಬ್ಬಿ, ಉತ್ತರಿ ಮಳೆ ಸುರುವಾದಾಗ ಆಕಾಶ ಮತ್ತೆ ಬಣ ಬಣ ಅನ್ನತೊಡಗುತ್ತದೆ. ಮಹಾನವಮಿಗೆ ಮತ್ತೆ ಹಿಂಗಾರು ಆರಂಭಗೊಳ್ಳುತ್ತದೆ. ಅದರ ಪೂರ್ವದಲ್ಲಿ ಪಡುವಣಗಾಳಿ ಸೋತಂತಾಗಿ ಮೂಡಗಾಳಿ ಸುಳಿಯತೊಡಗುತ್ತದೆ. ಗಾಳಿಗಳ ಈ ಸಂಘರ್ಷದ ಸಮಯದಲ್ಲಿ ಉಸಿರು ಕಟ್ಟುವ ನಿರ್ವಾತ, ಬಿಸಿಲಿನ ಪ್ರಖರತೆ ಹೆಚ್ಚುತ್ತದೆ. “ಉತ್ತರಿ ಮಳೆಗೆ ಎತ್ತು ಕೆರಿಗೆ ಎಳೆದಿದ್ದವು” ಎಂಬ ಗಾದೆ ಮಾತಿನ ಮೂಲಕ ನಮ್ಮ ಜನಪದರೂ ಇದನ್ನು ಗುರ್ತಿಸಿದ್ದಾರೆ.
ಮಾಯಾಬಜಾರಿನ ಮುತ್ತಿನ ತೆನೆ
ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಾಲನೆ ನೀಡುವ ಮುನ್ನ ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿದೆಯೇ? ಚಿಂತಿಸಿದೆಯೇ? ಬಹುಶಃ ಸಮಾಲೋಚನೆ, ಚಿಂತನೆ ನಡೆಸಿದ್ದರೆ ಸರ್ಕಾರ ಸಪ್ಟೆಂಬರ್ನ ನಿರ್ವಾತದ ಕಾಲಘಟ್ಟದಲ್ಲಿ ಮೋಡಬಿತ್ತನೆಗೆ ಚಾಲನೆ ನೀಡುತ್ತಿರಲಿಲ್ಲವೇನೋ ಎಂದು ಯಾರಿಗಾದರು ಅನಿಸುತ್ತದೆ. ನಮ್ಮ ರೈತರು ಎಷ್ಟೆಲ್ಲ ಬೆವರು ಸುರಿಸಿ ದುಡಿದರೂ ಒಂದು ತುಂಬು ತೆನೆ ಕಾಣದೇ ಎಷ್ಟೋ ಸಲ ವಿವಶರಾಗಿರುತ್ತಾರೆ, ಸಾಲಸೋಲ ಮಾಡಿ ಬೀಜಗೊಬ್ಬರ ಹಾಕಿ, ಕ್ರಿಮಿನಾಶಕ ಸಿಂಪಡಿಸಿ ಹೈರಾಣಾಗುತ್ತಾರೆ. ಕನಸಿನ ತೆನೆ ಕಾಣದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಆತ್ಮಹತ್ಯಾ ಸರಣಿ ಇನ್ನೂ ಮುಂದುವರೆದೇ ಇದೆ. ಇಂಥ ಸಂದರ್ಭದಲ್ಲಿ ಇದ್ಯಾವುದರ ಬಗ್ಗೆಯೂ ಚಿಂತಿಸದೇ, ಕೆಲವರು ಮಾಯಾಬಜಾರಿನ ಮುತ್ತಿನ ತೆನೆಯನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಪ್ರಯತ್ನವೇ- ಈ ಮೋಡ ಬಿತ್ತನೆ? ಸರ್ಕಾರ ಉತ್ತರಿಸಬೇಕಿದೆ!




