- ರಾಜ್ಯದಲ್ಲಿ ಇನ್ಮುಂದೆ ಬಿಜೆಪಿ ಧೂಳೀಪಟ ಆಗಲಿದೆ: ಲಮಾಣಿ
- ಕಾಂಗ್ರೆಸ್ ಸೇರಲು 42 ನಾಯಕರು ಅರ್ಜಿ ಹಾಕಿದ್ದಾರೆ: ಡಿಕೆಶಿ
ಗದಗ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರವಾದ ಶಿರಹಟ್ಟಿಯ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಬಿಜೆಪಿ ತೊರೆದು ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕೈ ಹಿಡಿದರು. ಈ ವೇಳೆ ಸಚಿವ ಹೆಚ್.ಕೆ.ಪಾಟೀಲ್, ಶಾಸಕ ಲಕ್ಷ್ಮಣ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, “ಕಾಂಗ್ರೆಸ್ ಪಕ್ಷ ಸೇರ್ಪಡೆಗೆ 42 ನಾಯಕರು ಅರ್ಜಿ ಹಾಕಿದ್ದಾರೆ. ನಂಬರ್ ಹೇಳಬಾರದು ಅಂದುಕೊಂಡಿದ್ದೆ, ಹೇಳುವ ಪರಿಸ್ಥಿತಿ ಬಂದಿದೆ” ಎನ್ನುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
ಕಾಂಗ್ರೆಸ್ ಸೇರಿದ ಬಳಿಕ ರಾಮಪ್ಪ ಲಮಾಣಿ ಮಾತನಾಡಿ, “ಬಿಜೆಪಿಯಲ್ಲಿ ಆಗಿರುವ ನೋವಿನಿಂದ ಆ ಪಕ್ಷ ತೊರೆದಿದ್ದೇನೆ. ಈಗ ಯಾವುದೇ ಷರತ್ತು ಇಲ್ಲದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ನಾಯಕರು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ಅವರನ್ನು ಗೆಲ್ಲಿಸಲು ನಾನು ಶ್ರಮಿಸುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಪ್ರಕೃತಿ ವಿಕೋಪ ಅಲರ್ಟ್ ಮೆಸೇಜ್‌ಗೆ ಗಲಿಬಿಲಿಗೊಂಡ ಕಾಂಗ್ರೆಸ್ ನಾಯಕರು
“ಜಗದೀಶ ಶೆಟ್ಟರ್ ಹಾಗೂ ಡಿ ಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕ ಭಾಗದ ಅನೇಕ ನಾಯಕರಿಗೆ ಗಾಳ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಷ್ಟು ಧೂಳೀಪಟ ಆಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಶಾಸಕರು ಕೇವಲ 1,500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲದಿದ್ದರೆ, ಬಿಜೆಪಿ 40 ಸ್ಥಾನಗಳಿಗೆ ನಿಲ್ಲುತ್ತಿತ್ತು” ಎಂದರು.