ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವು ಹಲವಾರು ಆಯಾಮಗಳನ್ನು ಪಡೆಯುತ್ತಿದೆ. ಮಂಗಳೂರು ಬಾಂಬ್ ಸ್ಪೋಟ, ಬೆಂಗಳೂರು ಬಾಂಬ್ ಸ್ಪೋಟಕ್ಕೂ ಸಾಮ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ನಡುವೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಈ ಬಾಂಬ್ ಸ್ಪೋಟವು ಬಿಜೆಪಿಯ ರಾಜಕೀಯ ಪಿತೂರಿ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಆರೋಪಿಸಿದ್ದಾರೆ.
ಶನಿವಾರ ಮಾಧ್ಯಮಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ, “ಇದು ಬೇರೆ ಏನು ಅಲ್ಲ, ಚುನಾವಣೆಗಾಗಿ ಬಿಜೆಪಿಯವರೇ ಮಾಡಿದ ಒಂದು ಪಿತೂರಿಯಾಗಿದೆ. ಚುನಾವಣೆ ಸಮೀಪವಾಗುತ್ತಿದ್ದಂತೆ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ,” ಎಂದು ದೂರಿದ್ದಾರೆ.
ಚುನಾವಣೆ ವೇಳೆ ಮತದಾರರ ಗಮನವನ್ನು ಸೆಳೆಯಲು ಒಂದೊಂದು ಪಕ್ಷ ಒಂದೊಂದು ಮಾರ್ಗ ಹುಡುಕುತ್ತೆ. ಯಾವ ಪಕ್ಷದವರು ಚುನಾವಣಾ ಪ್ರಚಾರಕ್ಕಾಗಿ ಏನು ಮಾಡುತ್ತಾರೆ ಅನ್ನೋದು ನಮಗೇನು ಗೊತ್ತಿಲ್ಲ, ಅದು ಎಲ್ಲರಿಗೂ ಗೊತ್ತಿದೆ ಎಂದು ಸಚಿವರು ಹೇಳಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಮಾಡಿಸಿದವರು ಯಾರು ಎಂದು ಇಡೀ ವಿಶ್ವಕ್ಕೆ ತಿಳಿದ ವಿಚಾರ. ಆದರೆ ಇದಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ಈ ಕೃತ್ಯ ಯಾರು ಎಸಗಿದ್ದರೂ ಅವರ ವಿರುದ್ಧ ನಮ್ಮ ರಾಜ್ಯ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟವನ್ನು ಬಿಜೆಪಿಯವರೇ ಮಾಡಿಸಿದ್ದಾ ಎಂದು ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಬಿಜೆಪಿಯವರು ಈವರೆಗೆ ನಡೆದ ಚುನಾವಣೆಗೂ ಮುನ್ನ ಯಾವುದರಲ್ಲಿ ಅಭಿವೃದ್ಧಿ ಪರವಾಗಿ ಮಾತನಾಡಿದ್ದಾರೆ? ಬಡವರ ಪರವಾಗಿ ಎಲ್ಲಿ ಮಾತನಾಡಿದ್ದಾರೆ? ಅವರು ಬರೀ ಇಂತದ್ದೆ ಮಾಡಿ ಚುನಾವಣೆಯನ್ನು ಎದುರಿಸೋದು ಅಲ್ವ ಎಂದರು.
15 ಲಕ್ಷ ರೂಪಾಯಿ ಹಣ ಬಂತಾ?
ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಏನು ಬೇಕಾದರೂ ಮಾಡುತ್ತಾರೆ. ಯಾವ ಕಥೆಯನ್ನು ಬೇಕಾದರೂ ಸೃಷ್ಟಿಸುತ್ತಾರೆ. ಬಿಜೆಪಿ ಈ ಹಿಂದೆ ಎಲ್ಲರ ಖಾತಗೆ 15 ಲಕ್ಷ ರೂಪಾಯಿ ಹಣ ಜಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಯಾರೊಬ್ಬರಿಗಾದರೂ ಹಣ ಬಂದಿದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಯಾವತ್ತಾದ್ರು ಒಂದು ನಿಜ ಹೇಳುತ್ತಾರಾ? ಅವರಿಗೆ ಚುನಾವಣಾ ಪ್ರಚಾರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯವಿಲ್ಲ. ಅದಕ್ಕೆ ಈಗ ಮತ್ತೆ ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಚುನಾವಣೆ ಪ್ರಚಾರವನ್ನು ಮಾಡುತ್ತಿದ್ದಾರೆ. ಪ್ರತಿ ಬಾರಿ ಮೋದಿ ಹೆಸರು ಹೇಳಿ ಮತ ಕೇಳ್ತಾರೆ. ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದರು.
ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಭರದಿಂದ ಸಾಗುತ್ತಿದೆ. ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಪತ್ರಕರ್ತೆ, ನಾಲ್ಕು ವರ್ಷಗಳ ಅನುಭವ. ರಾಜಕೀಯ, ಬ್ಯುಜಿನೆಸ್ ಸುದ್ದಿಯಲ್ಲಿ ಆಸಕ್ತಿ, ಹಿಡಿತ.