ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ಸಮೀಕ್ಷೆ ಅವಧಿಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಏಕಸದಸ್ಯ ಆಯೋಗ ಅಧ್ಯಕ್ಷ ಹೆಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಶಾಸಕರುಗಳು, ಹಲವು ಸಂಘ-ಸಂಸ್ಥೆಗಳು ಸಮೀಕ್ಷೆ ವೇಳೆ ಉದ್ಭವಿಸಿರುವ ಕೆಲವೊಂದು ಸಮಸ್ಯೆಗಳನ್ನು ಸರಿಪಡಿಸಲು ಸಮೀಕ್ಷಾ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲು ತೀರ್ಮಾನಿಸಲಾಗಿದೆ” ಎಂದರು.
“ಒಳ ಮೀಸಲಾತಿ ಜಾರಿ ವಿಚಾರವಾಗಿ ದತ್ತಾಂಶ ಸಂಗ್ರಹಕ್ಕೆ ನಡೆಯುತ್ತಿದೆ. ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷಾ ಅವಧಿ ವಿಸ್ತರಣೆ ಮಾಡಲಾಗಿದೆ. ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷೆ ಮೇ 25ರ ತನಕ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು.
“ವಿಶೇಷ ಶಿಬಿರದ ದಿನಾಂಕ ಮರು ನಿಗದಿ ಮಾಡಿದ್ದು, ಮೇ 26ರಿಂದ ಮೇ 28ರ ತನಕ ನಡೆಯಲಿದೆ. ಅನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ದಿನಾಂಕ ಮೇ 19ರಿಂದ ಮೇ 28ರ ತನಕ ನಿಗದಿ ಮಾಡಿದ್ದು, ಇಲ್ಲಿ ತನಕ 73.72% ಮನೆ ಮನೆ ಸಮೀಕ್ಷೆ ಪೂರ್ಣ ಆಗಿದೆ” ಎಂದರು.
ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಅಂದ್ರೆ ನೀರು, ಕರೆಂಟ್ ಏಕೆ ಬೇಕು?
“ಬೆಂಗಳೂರಿನಲ್ಲಿ ಕೇವಲ 36% ಮಾತ್ರ ಸಮೀಕ್ಷೆ ಆಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅವರ ಮಾಹಿತಿಯನ್ನೇ ನೀಡಲ್ಲ ಎಂದರೆ ಅವರಿಗೆ ನೀರು, ಕರೆಂಟ್ ಕಟ್ ಮಾಡಿದರೆ ಹೇಗೆ? ಅವರು ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಅಂದ್ರೆ ನೀರು, ಕರೆಂಟ್ ಏಕೆ ಬೇಕು? ಈಗಾಗಲೇ ಬಿಬಿಎಂಪಿಗೆ ಸೂಚನೆ ಕೊಟ್ಟಿದ್ದೇವೆ. ಸಮೀಕ್ಷೆ ಸಹಕರಿಸಲು ಎಚ್ಚರಿಕೆ ಕೊಡುವಂತೆ ಲಿಖಿತವಾಗಿ ಬಿಬಿಎಂಪಿಗೆ ಸೂಚಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ತೆರೆಯಲು ಸಹ ಸೂಚಿಸಿದ್ದೇವೆ. ಖಾಸಗಿ ಶಾಲೆಯ ಶಿಕ್ಷಕರನ್ನ ಸಮೀಕ್ಷೆಗೆ ನೇಮಿಸಲು ಸೂಚಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಮೆರೆಯುತ್ತಿರುವ ಕ್ರೌರ್ಯ ಮಕ್ಕಳ ಮನಸುಗಳನ್ನೂ ಆಳಿದರೆ ಅದರ ಹೊಣೆ ಯಾರದು?
“ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಅಡ್ಡಿಪಡಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಅಡ್ಡಿ ಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಸಮೀಕ್ಷೆ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮಲ್ಲಿನ ಮಾಹಿತಿ ನೀಡಿ ಅಷ್ಟೇ. ಯಾರೂ ಸಮೀಕ್ಷೆಗೆ ತಡೆ ಮಾಡುತ್ತಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಗೆ ಈ ಸಂಬಂಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ” ಎಂದರು.
“ಎಸ್ಸಿಯೇತರರು ಅಂದರೆ ಯಾವುದೇ ಮಾಹಿತಿ ಪಡೆಯುವುದು ಬೇಡ ಅಂದಿದ್ದೇವೆ. ಸಮೀಕ್ಷೆ ಮುಗಿದ ಮೇಲೆ ದತ್ತಾಂಶ ವಿಶ್ಲೇಷಣೆ ಮಾಡುತ್ತೇವೆ. ಮಾನದಂಡದ ಪ್ರಕಾರ ಏನೆಲ್ಲಾ ವರ್ಗೀಕರಣ ಆಗಬೇಕು ಅದನ್ನು ಮಾಡಲಿದ್ದೇವೆ. ಇನ್ನು ಯಾವುದೇ ವಿಳಂಬ ಆಗದಂತೆ ವರದಿ ನೀಡುತ್ತೇವೆ. ಆದಿ ಕರ್ನಾಟಕ, ಆದಿ ಆಂಧ್ರ, ಆದಿ ಜಾಂಬವ ಸಂಬಂಧ ಜಾತಿ ಹೆಸರು ಹೇಳಬೇಕು. ಒಂದು ವೇಳೆ ಆದಿ ಕರ್ನಾಟಕ ಅಂದರೆ ಈ 101ರಲ್ಲಿ ಯಾವ ಉಪಜಾತಿ ಎಂದು ಹೇಳಬೇಕು. ಹೇಳಿಲ್ಲವಾದರೆ ಹಾಗೇ ನಮೂದು ಮಾಡಲಾಗುತ್ತದೆ. ಕೆಲ ಮಾನದಂಡದ ಆಧಾರದ ಮೇಲೆ ನಾವು ಮುಂದೆ ಆದಿ ಕರ್ನಾಟಕ, ಆದಿ ಆಂಧ್ರದ ಜಾತಿಯವರನ್ನು ಯಾವ ಉಪಜಾತಿ ಎಂದು ತೀರ್ಮಾನಿಸುತ್ತೇವೆ” ಎಂದು ತಿಳಿಸಿದರು.
ಗಣತಿದಾರರಿಗೆ ಗೌರವಧನ
“ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶಿಕ್ಷರಿಗೆ ಶಿಕ್ಷಣ ಇಲಾಖೆಯ ಮಾನದಂಡದ ಪ್ರಕಾರ, ಗೌರವಧನ ನೀಡಲಾಗುತ್ತದೆ. ಶಿಕ್ಷಕೇತರರಿಗೆ ತಲಾ 5,000 ರೂ. ಕೊಡಲಾಗುತ್ತದೆ. ಜೊತೆಗೆ ಪ್ರತಿ ಮನೆಗೆ ತಲಾ 100 ರೂ. ಗೌರವಧನ ಪಾವತಿ ಮಾಡಲಾಗುತ್ತದೆ” ಎಂದು ಹೇಳಿದರು.