- ‘ಯಾರೂ ಆತಂಕ ಪಡುವ ಅಗತ್ಯವಿಲ್ಲ’
- ‘ರಾಜ್ಯದಲ್ಲಿ ಶಾಂತಿ ಕಾಪಾಡುತ್ತಿದ್ದೇವೆ’
ಶಿವಮೊಗ್ಗ ಗಲಾಟೆ ವಿಚಾರವಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯನ್ನೇ ನಾವು ಸ್ಥಳಕ್ಕೆ ಕಳುಹಿಸಿದ್ದೆವು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಘಟನೆಗೆ ಕಾರಣ ಏನು? ಅದರ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ” ಎಂದರು.
”ಗಲಾಟೆಯಲ್ಲಿ ಎರಡು ಧರ್ಮಿಯರಿಂದ ಕಲ್ಲು ತೂರಾಟ ನಡೆದಿದೆ. ಕೆಲವರ ಬಂಧನ ಆಗಿದ್ದು, ತನಿಖೆ ಮುಗಿದ ಮೇಲೆ ಸತ್ಯಾಂಶ ಗೊತ್ತಾಗಲಿದೆ” ಎಂದು ವಿವರಿಸಿದರು.
ಬಿಜೆಪಿ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, “ನಾನು ಸಣ್ಣ ಘಟನೆ ಅಂತ ಹೇಳಿದ್ದು ಆ ಕಾರಣಕ್ಕೆ ಅಲ್ಲ. ಹಿಂದೆಲ್ಲಾ ಇಂತಹ ಘಟನೆಗಳಾಗಿವೆ. ಆ ಅರ್ಥದಲ್ಲಿ ಹೇಳಿದ್ದೇನೆ. ಶಿವಮೊಗ್ಗದಲ್ಲಿ ಇಂತಹ ಘಟನೆ ನಡೆದೇ ಇಲ್ವಾ? ಆ ರೀತಿ ಹೇಳಿದ್ದಕ್ಕೆ ಅದನ್ನೇ ತಿರುಚುವ ಪ್ರಯತ್ನ ಬೇಡ” ಎಂದರು.
”ಬಿಜೆಪಿಯವರು ಹೇಳಿದ್ದರಲ್ಲಿ ಸಲಹೆ ಇದ್ದರೆ ಸ್ವೀಕರಿಸುತ್ತೇವೆ. ನಮ್ಮ ತಪ್ಪಿದ್ದರೆ ತಿದ್ದಿಕೊಳ್ತೀವಿ. ನಾವು ಜವಾಬ್ದಾರಿಯಿಂದ ಕೆಲಸ ಮಾಡ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತಿದ್ದೇವೆ. ಕಾನೂನು ವಿರೋಧಿ ಕೆಲಸಗಳು ಆಗಬಾರದು ಅಂತ ಎಲ್ಲ ಕ್ರಮಗಳನ್ನೂ ಆಗಿಂದಾಗ್ಗೆ ಕೈಗೊಳ್ಳುತ್ತಿದ್ದೇವೆ” ಎಂದು ಹೇಳಿದರು.
ಬಿಜೆಪಿ ಸರ್ಕಾರ ಒಪ್ಪಿದ್ದು
ಡಿಜೆ ಹಳ್ಳಿ ಕೆಜಿ ಹಳ್ಳಿ ಗೋಲಿಬಾರ್ ಕುರಿತ ಮ್ಯಾಜಿಸ್ಟ್ರೇಟ್ ವರದಿ ಅಂಗೀಕಾರ ವಿಚಾರವಾಗಿ ಮಾತನಾಡಿ, “2022 ರ ಡಿಸೆಂಬರ್ ನಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ವರದಿ ಕೊಡಲಾಗಿದೆ. ಆ ವರದಿಯನ್ನು ಅವರೇ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಂಡಿದ್ದನ್ನು ನಾವು ತಿರಸ್ಕರಿಸಲು ಆಗುತ್ತಾ? ಹಾಗಾಗಿ ಅದರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ” ಎಂದು ಸಮರ್ಥನೆ ನೀಡಿದರು.
ಬಿಹಾರ ರಾಜ್ಯದಂತೆ ಕರ್ನಾಟಕದಲ್ಲೂ ಜಾತಿ ಸಮೀಕ್ಷೆ ಅಂಗೀಕಾರಕ್ಕೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, “ಆ ಬಗ್ಗೆ ಚರ್ಚೆ ಮಾಡುವಾಗ ನನ್ನ ಅಭಿಪ್ರಾಯ ತಿಳಿಸುವೆ. ಸರ್ಕಾರ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರಲಿದೆ. ವರದಿ ಬಗ್ಗೆ ಮುಖ್ಯಮಂತ್ರಿಗಳು ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಲಿದ್ದಾರೆ” ಎಂದರು.