ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ‘ಬಿ’ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಲೋಕಾಯುಕ್ತ ತನಿಖೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿಲ್ಲ ಎಂದು ED ಹೈಕೋರ್ಟ್ನಲ್ಲಿ ವಾದಿಸಿದೆ. ವಿಶೇಷವಾಗಿ, ED ತನಿಖೆಯ ವೇಳೆ ಬೆಳಕಿಗೆ ಬಂದ ಅಂಶಗಳನ್ನು ಲೋಕಾಯುಕ್ತ ಪೊಲೀಸರು ಗಣನೆಗೆ ತೆಗೆದುಕೊಂಡಿಲ್ಲ. ಕಾನೂನುಬಾಹಿರ ಡಿನೋಟಿಫಿಕೇಷನ್ ಹಾಗೂ ಭೂ ಪರಿವರ್ತನೆಗೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಸಮರ್ಪಕ ತನಿಖೆ ನಡೆದಿಲ್ಲ ಎಂದು ED ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅರವಿಂದ್ ಕಾಮತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ED ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಏಕಸದಸ್ಯ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 2ರಂದು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಮುಡಾ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2025ರ ಫೆಬ್ರವರಿ 12ರಂದು ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬೆಂಗಳೂರಿನ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸ ಸಿದ್ದರು. ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂಬ ನಿಲುವಿನ ಆಧಾರದಲ್ಲಿ ಈ ವರದಿ ಸಲ್ಲಿಸಲಾಗಿತ್ತು. ಈ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಜನವರಿ 28ರಂದು ಅಂಗೀಕರಿಸಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ: ‘ಹಠವಾದಿ’ಯಿಂದ ‘ರಾಜಿ’ ರಾಜಕಾರಣದತ್ತ?
ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯ ಕೃಷ್ಣ ಕೂಡ ಹೈಕೋರ್ಟ್ ಮೊರೆ ಹೋಗಿದ್ದರು. ಲೋಕಾಯುಕ್ತದ ‘ಬಿ’ ರಿಪೋರ್ಟ್ ಅನ್ನು ಮರುಪರಿಶೀಲಿಸಬೇಕು, ಅದನ್ನು ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಿ ಹೊಸದಾಗಿ ವರದಿ ಸಲ್ಲಿಸಲು ನಿರ್ದೇಶಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಇದೀಗ ಇದೇ ‘ಬಿ’ ರಿಪೋರ್ಟ್ ಅನ್ನು ED ಕೂಡ ಪ್ರಶ್ನಿಸಿರುವುದು ಪ್ರಕರಣಕ್ಕೆ ಮತ್ತೊಂದು ಕಾನೂನು ತಿರುವು ನೀಡಿದೆ. ಲೋಕಾಯುಕ್ತ ತನಿಖೆಯಲ್ಲಿ ಕಡೆಗಣಿಸಲಾಗಿದೆ ಎನ್ನಲಾದ ಅಂಶಗಳು ಮತ್ತು ತನ್ನ ತನಿಖೆಯಲ್ಲಿ ಪತ್ತೆಯಾದ ವಿಚಾರಗಳನ್ನು ಮುಂದಿಟ್ಟುಕೊಂಡು ED ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರಿಂದ, ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.




