ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ನೀಟ್ ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ಜುಲೈ 20ರಿಂದ 25 ರವರೆಗೆ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ಬೃಹತ್ ಪ್ರತಿಭಟನೆಗಳ ವೇಳೆ ಯುವಕರು ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಲಾಗಿದ್ದ ಎಲ್ಲಾ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿ ಐತಿಹಾಸಿಕ ಆದೇಶ ನೀಡಿದೆ.
ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಿಮಿನಲ್ ನಡಾವಳಿಗಳನ್ನು ಮುಂದುವರಿಸುವುದಿಲ್ಲ ಮತ್ತು ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕೋರ್ಟ್ಗೆ ನೀಡಿದ ಭರವಸೆಯ ಆಧಾರದ ಮೇಲೆ ಅತ್ಯುನ್ನತ ನ್ಯಾಯಾಲಯ ಈ ನಿರ್ಧಾರ ತಳೆದಿದೆ.
ಇದನ್ನೂ ಓದಿ: ‘ರೀಲ್ಸ್ನಲ್ಲಿ ಅಷ್ಟೇ ಕ್ಷಮಿಸುವುದೋ, ಎಫ್ಐಆರ್ ವಾಪಸ್ ಪಡೆಯುತ್ತೀರೋ’: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ
ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ಮತ್ತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ನಾಗರಿಕರ ಮೂಲಭೂತ ಹಕ್ಕಾಗಿದೆ ಎಂಬುದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಸಂವಿಧಾನದ ‘ವಿಧಿ 142’ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಈ ಆದೇಶ ಅನ್ವಯಿಸಲಿದೆ.
ದೇಶಾದ್ಯಂತ ಪ್ರತಿಭಟನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎಲ್ಲಾ ಎಫ್ಐಆರ್ಗಳನ್ನು ರದ್ದುಗೊಳಿಸಲಾಗಿದ್ದು, ಈ ವಿಚಾರವಾಗಿ ಯಾವುದೇ ಹೊಸ ಎಫ್ಐಆರ್ ದಾಖಲಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಪ್ರತಿಭಟನೆ ವೇಳೆ ತೊಂದರೆಗೊಳಗಾದವರಿಗೆ ಹಾಗೂ ಜೀವ ಕಳೆದುಕೊಂಡ ಅಭ್ಯರ್ಥಿಗಳ ಕುಟುಂಬಸ್ಥರಿಗೆ ಮುಂದಿನ ಮೂರು ತಿಂಗಳೊಳಗೆ ಪರಿಹಾರ ರೂಪಿಸುವ ಮತ್ತು ವಿತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.
ಸಂಘಟಿತ ಅಪರಾಧ ಹಿನ್ನೆಲೆಯಿರುವ ಮತ್ತು ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವಿರುವ ಸುಮಾರು 2,800ಕ್ಕೂ ಹೆಚ್ಚು ವ್ಯಕ್ತಿಗಳ ವಿರುದ್ಧ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಲು ಪೋಲಿಸರಿಗೆ ನ್ಯಾಯಾಲಯ ಅವಕಾಶ ನೀಡಿದೆ.
ಸುಪ್ರೀಂ ಕೋರ್ಟ್ನಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ವೃಂದಾ ಗ್ರೋವರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣ ಸುಧಾರಣೆಗಾಗಿ ಧ್ವನಿ ಎತ್ತಿದ್ದ ಸಾವಿರಾರು ಯುವಕರ ಮತ್ತು ವಿದ್ಯಾರ್ಥಿಗಳ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವ ಮೂಲಕ ನ್ಯಾಯಾಲಯವು ಅವರಿಗೆ ಬಹುದೊಡ್ಡ ನೆಮ್ಮದಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.




