- ಬರದ ಸಂಕಷ್ಟದಲ್ಲಿರುವ ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲ
- ವಿಜಯಪುರ ಜಿಲ್ಲೆಯ ರೈತರ ಜಮೀನಿಗೆ ಭೇಟಿ ನೀಡಿದ ಬಿಜೆಪಿ ತಂಡ
ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಇನ್ನೂ ಆಡಳಿತ ನಡೆಸುವ ವಿಧಾನ ಗೊತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಟ ನಡೆಸಿರುವ ಕಾಂಗ್ರೆಸ್ ಸರ್ಕಾರ ಭೀಕರ ಬರದ ಸಂಕಷ್ಟದಲ್ಲಿರುವ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹರಿಹಾಯ್ದರು.
ಬಿಜೆಪಿಯಿಂದ ರಾಜ್ಯದ ಬರ ಅಧ್ಯಯನಕ್ಕಾಗಿ ತಮ್ಮ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನಿಗೆ ಶನಿವಾರ ಭೇಟಿ ನೀಡಿದ ಬಳಿಕ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
“ಬರದ ಸಂಕಷ್ಟದ ಸಂದಭದಲ್ಲೂ ಸಿದ್ಧರಾಮಯ್ಯ ಅವರು ರಾಜಕೀಯ ಮಾಡಲು ಹೊರಟಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾದಾಗ ಕೇಂದ್ರದ ಪರಹಾರ ನಿಧಿ ಬಿಡುಗಡೆ ಆಗುವವರೆಗೆ ಕಾಯದೆ, ಎನ್‍ಡಿಆರ್‍ಎಫ್ ನಿಮಯ ಅಂತೆಲ್ಲ ಸಮಯ ವ್ಯರ್ಥ ಮಾಡದೆ ತುರ್ತಾಗಿ ಸಂತ್ರಸ್ತರ ನೆರವಿಗೆ ಧಾವಿಸಿದ್ದರು” ಎಂದರು.
“ರಾಜ್ಯದಲ್ಲಿ ರೈತರು ಭೀಕರ ಬರದಿಂದ ಕಂಗೆಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದು, ರಾಜ್ಯದ ಜನ ಆಕ್ರೋಶಗೊಳ್ಳುವಂತೆ ಮಾಡಿದೆ. ಸಿದ್ಧರಾಮಯ್ಯ ಇನ್ನಾದರೂ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಬರದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂತರಾಜ್ ವರದಿಗೆ ಬಲಿಷ್ಠರ ವಿರೋಧ ಸಾಮಾಜಿಕ ನ್ಯಾಯದ ವಿರೋಧ
“ಕೇಂದ್ರ ಸರ್ಕಾರ ಕೂಡ ತನ್ನ ಅಧಿಕಾರಿಗಳ ತಂಡವನ್ನು ಕಳಿಸಿ ಅಧ್ಯಯನ ನಡೆಸಿದೆ. ಆದರೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಭೀಕರ ಬರದಿಂದಾಗಿ ಆಗಿರುವ ಒಟ್ಟು ನಷ್ಟದ ಕುರಿತು ವಿವರವನ್ನೇ ಈವರೆಗೆ ಕೇಂದ್ರಕ್ಕೆ ನೀಡಿಲ್ಲ. ಆದರೂ ಕೇಂದ್ರದ ವಿರುದ್ಧ ನೆರವು ನೀಡಿಲ್ಲ ಎಂದು ಆರೋಪಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಪಂಪ್‍ಸೆಟ್ ಆಧಾರಿತ ರೈತರು ಬೆಳೆ ಬೆಳೆಯಲು ಈ ಸರ್ಕಾರ ಸೂಕ್ತ ಹಾಗೂ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಅಲ್ಪ ಸ್ವಲ್ಪ ಬೆಳೆ ಬೆಳೆದುಕೊಂಡಿರುವ ತಮ್ಮ ಬೆಳೆ ಉಳಿಸಿ ಎಂದು ಪಂಪ್‍ಸೆಟ್ ಇರುವ ರೈತರು ಗೋಗರೆದರೂ ಅವರ ಬೇಡಿಕೆಗೆ ಸ್ಪಂದಿಸುವ ಸೌಜನ್ಯ ತೋರದ ಈ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ” ಎಂದರು.
“ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಬಳಿಕ ಬಿಜೆಪಿ ತಂಡಗಳು ಬರ ಪರಿಸ್ಥಿತಿ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಾಸ್ತವಿಕ ವರದಿ ನೀಡಲಿದೆ. ಅಲ್ಲದೇ ತುರ್ತಾಗಿ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸುತ್ತದೆ” ಎಂದು ತಿಳಿಸಿದರು.