ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಆರು ತಿಂಗಳ ಕಾಲಾವಕಾಶ ನೀಡಬೇಕು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿರುವವರಿಗೂ ಮೇಲ್ಮನವಿ ಸಲ್ಲಿಸಿ ಮತ್ತೆ ಸೇರ್ಪಡೆಯಾಗಲು ಅವಕಾಶ ಕಲ್ಪಿಸಬೇಕು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಗರಿಕ ಸಮಾಜ ಹಾಗೂ ಹೋರಾಟಗಾರರು ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಕ್ಕೊತ್ತಾಯ ಮಂಡಿಸಿದ ನೂರ್ ಶ್ರೀಧರ್, “SIR ಪ್ರಕ್ರಿಯೆಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಬದಲು ಆಕ್ಷೇಪಣೆ ಮತ್ತು ಮೇಲ್ಮನವಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: BREAKING NEWS | ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಎಸ್ಐಆರ್ ಸಂತ್ರಸ್ತರ ಬಂಧನ
“ಡಿಲೀಟ್ ಮಾಡಲಾಗಿರುವ ಮತದಾರರಿಗೂ ಅಪೀಲ್ ಮಾಡುವ ಅವಕಾಶ ನೀಡಬೇಕು. ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸಲು ಜನರಿಗೆ ಸಮಯ ಬೇಕು. ಹೀಗಾಗಿ ಇಡೀ ಪ್ರಕ್ರಿಯೆಗೆ ಒಟ್ಟು ಆರು ತಿಂಗಳ ಕಾಲಾವಕಾಶ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ” ಎಂದು ಹೇಳಿದರು
SIR ಕುರಿತು ಜನರಲ್ಲಿರುವ ಗೊಂದಲ ಮತ್ತು ಸಮಸ್ಯೆಗಳನ್ನು ಚುನಾವಣಾ ಆಯೋಗ ನೇರವಾಗಿ ಆಲಿಸಬೇಕು ಎಂದು ನೂರ್ ಶ್ರೀಧರ್ ಒತ್ತಾಯಿಸಿದರು. “ನಾವು ಜನರನ್ನು ಸುಮ್ಮನೆ ಸೇರಿಸಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದಾರೆ. ಸುಮಾರು 20 ಜಿಲ್ಲೆಗಳ ಪ್ರತಿನಿಧಿಗಳು ನಮ್ಮೊಂದಿಗಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಬಂದು ಇವರ ಸಮಸ್ಯೆಗಳನ್ನು ನೇರವಾಗಿ ಕೇಳಬೇಕು. ಆಗ ಮಾತ್ರ ನೆಲದ ವಾಸ್ತವ ಸ್ಥಿತಿ ಅವರಿಗೆ ಅರ್ಥವಾಗುತ್ತದೆ” ಎಂದರು.
ಚುನಾವಣಾ ಆಯೋಗದ ಕಚೇರಿಗೆ ತೆರಳಿದಾಗ ಕೇವಲ ಮೂವರು ಪ್ರತಿನಿಧಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದ ಅವರು, ಚರ್ಚೆ ಸಾರ್ವಜನಿಕವಾಗಿ ಮತ್ತು ಕ್ಯಾಮೆರಾಗಳ ಮುಂದೆ ನಡೆಯಬೇಕು ಎಂದು ಆಗ್ರಹಿಸಿದರು.
“ಮೂರು ಜನರನ್ನು ಒಳಗೆ ಕರೆಸಿಕೊಂಡು ಅವರ ಮಾತು ಕೇಳಿ, ಬಳಿಕ ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ಎಂದು ಹೇಳುವ ವ್ಯವಸ್ಥೆ ಸಾಕಾಗಿದೆ. ಚುನಾವಣಾ ಆಯೋಗ ತನ್ನ ಉತ್ತರವನ್ನು ಸಾರ್ವಜನಿಕವಾಗಿ ನೀಡಬೇಕು. ನಾವು ಹೇಳುತ್ತಿರುವುದು ತಪ್ಪಾಗಿದ್ದರೆ, ಅದು ಏಕೆ ತಪ್ಪು ಎಂಬುದನ್ನು ತರ್ಕಬದ್ಧವಾಗಿ ವಿವರಿಸಬೇಕು. ಕೇವಲ ‘ರೂಲ್ಸ್ನಲ್ಲಿ ಇದೆ’ ಎಂಬ ಉತ್ತರ ನೀಡಿದರೆ ಸಾಲದು” ಎಂದು ನೂರ್ ಶ್ರೀಧರ್ ಹೇಳಿದರು.
ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೂ ಹೋರಾಟಗಾರರು ಶಾಂತಿಯುತವಾಗಿ ಆಯೋಗದ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಮಂಡಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಮತದಾನದ ಹಕ್ಕು ಕಿತ್ತುಕೊಳ್ಳುವ ಹುನ್ನಾರ; ಸಂವಿಧಾನ ಬದಲಿಸಿ ಮನುವಾದಿ ವ್ಯವಸ್ಥೆ ತರುವ ಷಡ್ಯಂತ್ರ: ನಟ ಕಿಶೋರ್
“ರಾಜ್ಯ ಸರ್ಕಾರದ ಬಳಿ ಇರುವ ಸಮಗ್ರ ಯೋಜನೆ ಏನು”
SIR ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವನ್ನೂ ನೂರ್ ಶ್ರೀಧರ್ ಪ್ರಶ್ನಿಸಿದರು. “ರಾಜ್ಯದ ಎಲ್ಲ ಮತದಾರರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೂ ಇದೆ. ಆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೀರಿ? ನಿಮ್ಮ ಯೋಜನೆ ಏನು” ಎಂದು ಪ್ರಶ್ನಿಸಿದರು.
SIR ಕುರಿತು ಆರಂಭದಿಂದಲೂ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತಿದ್ದರೂ, ಸರ್ಕಾರದಿಂದ ಸಮಗ್ರ ಪ್ರತಿಕ್ರಿಯೆ ಅಥವಾ ಯೋಜನೆ ಕಂಡುಬಂದಿಲ್ಲ ಎಂದು ಆರೋಪಿಸಿದರು.
“ರಾಜ್ಯ ಸರ್ಕಾರ ನಿಧಾನವಾಗಿ ಪ್ರತಿಕ್ರಿಯಿಸುತ್ತಿದೆ. ಆದರೆ ಈ ವಿಚಾರದಲ್ಲಿ ಸಮಗ್ರವಾದ ಯೋಜನೆ ಸರ್ಕಾರದ ಬಳಿ ಇರಬೇಕು. ಚುನಾವಣಾ ಆಯೋಗ ನಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಏನು ಮಾಡಬೇಕು ಎಂಬುದನ್ನು ಸರ್ಕಾರವೇ ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ ನಾಗರಿಕ ಸಮಾಜ ನೀಡುವ ಪರಿಹಾರ ಕ್ರಮಗಳನ್ನಾದರೂ ಪರಿಗಣಿಸಬೇಕು” ಎಂದರು.
“ಅಗತ್ಯವಿದ್ದರೆ ಜೈಲಿಗೂ ಹೋಗಲು ಸಿದ್ಧ”
ಹೋರಾಟವನ್ನು ಮುಂದುವರಿಸುವ ಎಚ್ಚರಿಕೆ ನೀಡಿದ ನೂರ್ ಶ್ರೀಧರ್, ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರವಾಗುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. “ಒಂದು ದಿನ ರಾಜ್ಯದ ಹಿತಕ್ಕಾಗಿ ಗಟ್ಟಿಯಾದ ತೀರ್ಮಾನ ಮಾಡೋಣ. ಅಗತ್ಯವಿದ್ದರೆ ಒಂದು ದಿನ ಜೈಲಿನಲ್ಲಿ ಕಳೆದರೂ ಏನೂ ಆಗುವುದಿಲ್ಲ. ನಮ್ಮ ಬೇಡಿಕೆಗಳ ಕುರಿತು ತೀರ್ಮಾನವಾಗುವವರೆಗೆ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: SIR | ಒಂದೂವರೆ ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವುದನ್ನು ಕರ್ನಾಟಕ ಒಪ್ಪುವುದಿಲ್ಲ: ನಟ ಪ್ರಕಾಶ್ ರಾಜ್ ಆಕ್ರೋಶ
“ಪ್ರತಿಭಟನಾಕಾರರನ್ನು ಬಂಧಿಸುವ ಪರಿಸ್ಥಿತಿ ಎದುರಾದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ತಿಳಿಸಿದರು. ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೂ ಈ ಕುರಿತು ಮಾಹಿತಿ ನೀಡಲಾಗಿದೆ” ಎಂದು ಹೇಳಿದರು.
ಐದು ಪ್ರಮುಖ ಹಕ್ಕೊತ್ತಾಯಗಳು
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೋರಾಟಗಾರರು ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
- ಮತದಾರರ ಹೆಸರು ಕೈಬಿಡುವ ಮುನ್ನ ಸಮರ್ಪಕ ಕಾರಣ:
ಯಾವುದೇ ಮತದಾರರನ್ನು ಸಮರ್ಪಕ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಹೊರಗಿಡಬಾರದು. ಈಗಾಗಲೇ ಹೆಸರು ಡಿಲೀಟ್ ಆಗಿರುವ ಮತದಾರರಿಗೆ ಮೇಲ್ಮನವಿ ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ವಿಸ್ತರಿಸಬೇಕು. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಪ್ರತಿ ಬೂತ್ನ ಪ್ರತಿ ಮನೆಗೂ ತಲುಪುವ ವಿಶೇಷ ಅಭಿಯಾನ ನಡೆಸಬೇಕು.
- ಸ್ಥಳಾಂತರಗೊಂಡ ಮತದಾರರಿಗೆ ಫಾರಂ 8 ಅವಕಾಶ:
ಬೇರೆ ಪ್ರದೇಶಗಳಿಂದ ಸ್ಥಳಾಂತರಗೊಂಡು ಪ್ರಸ್ತುತ ಬೇರೆಡೆ ನೆಲೆಸಿರುವ ಮತದಾರರಿಗೆ ಫಾರಂ 8 ಸಲ್ಲಿಸಿ, ತಾವು ಈಗ ವಾಸಿಸುತ್ತಿರುವ ವಿಳಾಸಕ್ಕೆ ಮತದಾರರ ನೋಂದಣಿಯನ್ನು ವರ್ಗಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
- 43 ಲಕ್ಷ ಮತದಾರರಿಗೆ ನೀಡಿರುವ ನೋಟಿಸ್ಗಳ ವಿವರ ಬಹಿರಂಗ:
ನೋಟಿಸ್ ನೀಡಲಾಗುತ್ತಿರುವ ಸುಮಾರು 43 ಲಕ್ಷ ಮತದಾರರ ಹೆಸರುಗಳು ಮತ್ತು ನೋಟಿಸ್ಗೆ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಮತದಾರರಿಂದ ಎರಡು ದಾಖಲೆಗಳಿಗಿಂತ ಹೆಚ್ಚು ದಾಖಲೆಗಳನ್ನು ಕೇಳಬಾರದು ಎಂಬುದು ಮತ್ತೊಂದು ಬೇಡಿಕೆಯಾಗಿದೆ.
- ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು:
ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಸಮರ್ಪಕವಾಗಿ ಆಯೋಜಿಸಿ, ಸಾಕಷ್ಟು ಪ್ರಚಾರ ನೀಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಸಭೆಗಳು ಕೇವಲ ಔಪಚಾರಿಕವಾಗಿರದೆ, ಜನರ ಸಮಸ್ಯೆಗಳನ್ನು ಆಲಿಸುವ ಅರ್ಥಪೂರ್ಣ ವೇದಿಕೆಗಳಾಗಬೇಕು.
- ಆಕ್ಷೇಪಣೆ ಮತ್ತು ಮೇಲ್ಮನವಿಗೆ ಆರು ತಿಂಗಳ ಕಾಲಾವಕಾಶ:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವ ಹಿನ್ನೆಲೆಯಲ್ಲಿ SIR ಪ್ರಕ್ರಿಯೆಯಲ್ಲಿ ಯಾವುದೇ ಗಡಿಬಿಡಿ ಮಾಡದೆ, ಆಕ್ಷೇಪಣೆ ಮತ್ತು ಮೇಲ್ಮನವಿ ಸಲ್ಲಿಸುವ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಲಾಗಿದೆ.
SIR ಪ್ರಕ್ರಿಯೆಯಲ್ಲಿ ಜನರ ಹಕ್ಕುಗಳಿಗೆ ಧಕ್ಕೆಯಾಗದಂತೆ ಪಾರದರ್ಶಕತೆ, ಸಮರ್ಪಕ ಕಾಲಾವಕಾಶ ಮತ್ತು ಸಾರ್ವಜನಿಕರೊಂದಿಗೆ ನೇರ ಸಂವಾದಕ್ಕೆ ಅವಕಾಶ ನೀಡಬೇಕು. ಈ ಕುರಿತು ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ನೂರ್ ಶ್ರೀಧರ್ ಹಾಗೂ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.




