ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ 2ನೇ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗವು ರಾಜ್ಯಾದ್ಯಂತ ಬರೋಬ್ಬರಿ 43 ಲಕ್ಷ ಮತದಾರರನ್ನು ಅನುಮಾನಿಸಿದ್ದು, ಅವರೆಲ್ಲರಿಗೂ ನೋಟಿಸ್ ನೀಡಿದೆ. ಮತದಾರರು ತಮ್ಮ ಮತಹಕ್ಕನ್ನು ಉಳಿಸಿಕೊಳ್ಳಲು ದಾಖಲೆಗಳನ್ನು ಒದಗಿಸಿ, ತಾವು ಈ ದೇಶದ ನಾಗರಿಕರೆಂದು ಸಾಬೀತು ಮಾಡುವಂತೆ ಸೂಚಿಸಿದೆ. ಚುನಾವಣಾ ಆಯೋಗದ ನೋಟಿಸ್‌ನಿಂದಾಗಿ ಚಿಕ್ಕನಾಯಕನಹಳ್ಳಿಯ ಅಲೆಮಾರಿ ದಕ್ಕಲಿಗ ಸಮುದಾಯದ ಮತದಾರರ ಮತದಾರದ ಹಕ್ಕು ಅತಂತ್ರಗೊಂಡಿದೆ. ಈ ಸಮುದಾಯದ ನಾಗರಿಕರು ತಮ್ಮ ಹಕ್ಕು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 235ರಲ್ಲಿ 123 ಮತದಾರರಿಗೆ ಆಯೋಗವು ನೋಟಿಸ್ ನೀಡಿದೆ. ಇದರಲ್ಲಿ ಗಾಂಧಿನಗರ ಪ್ರದೇಶದ ಅಲೆಮಾರಿ ದಕ್ಕಲಿಗ ಸಮುದಾಯಕ್ಕೆ ಸೇರಿದ 28 ಕುಟುಂಬಗಳ 45 ಜನರಿದ್ದಾರೆ. ಈ ದೇಶದಲ್ಲೇ ಹುಟ್ಟಿ-ಬೆಳೆದ ಈ ಸಮುದಾಯದ ಜನರಿಗೆ ಸರ್ಕಾರದಿಂದ ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳೇ ಈವರೆಗೆ ದೊರೆತಿಲ್ಲ. ಹೀಗಿರುವಾಗ, ಅವರೆಲ್ಲರೂ ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಎಲ್ಲಿಂದ ತರುವುದು, ತಮ್ಮ ಹಕ್ಕನ್ನು ಹೇಗೆ ಉಳಿಸಿಕೊಳ್ಳುವುದು ಎಂದು ಚಿಂತಿತರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಗಾಂಧಿನಗರದ ಸ್ಮಶಾನದ ಪಕ್ಕದಲ್ಲೇ ಈ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿವೆ. ನೆಲೆ, ಮನೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಹಲವು ಸುತ್ತಿನ ಹೋರಾಟ ನಡೆಸಿದ ಬಳಿಕ 2009ರಲ್ಲಿ ಸರ್ಕಾರ ಕೆಲ ಕುಟುಂಬಗಳಿಗೆ ಇದೇ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ನೀಡಿದ್ದು, ಅದಕ್ಕೆ ಸಂಬಂಧಿಸಿದ ಇ-ಸ್ವತ್ತು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಈ ಸಮುದಾಯದ ಅರ್ಧಕ್ಕಿಂತ ಹೆಚ್ಚು ಜನರ ಬಳಿ ಚುನಾವಣಾ ಆಯೋಗ ಕೇಳಿರುವ ದಾಖಲೆಗಳ ಪೈಕಿ ಆಧಾರ್ ಅಥವಾ ಶಾಶ್ವತ ನಿವಾಸಿ ಪ್ರಮಾಣಪತ್ರ ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳೇ ಇಲ್ಲ. ಬಹುತೇಕರ ಬಳಿ ಆಧಾರ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ಮೊದಲಾದ ದೈನಂದಿನ ಬದುಕಿನಲ್ಲಿ ಬಳಸುವ ದಾಖಲೆಗಳಷ್ಟೇ ಇವೆ.
ಇದರ ಜೊತೆಗೆ, ಎಸ್‌ಐಆರ್ ಆರಂಭವಾದಾಗ, ಸುಮಾರು ಹತ್ತು ಜನರಿಗೆ ಎನ್ಯುಮರೇಷನ್ ಫಾರಂಗಳನ್ನೇ ನೀಡಲಾಗಿಲ್ಲ. ಅವರೆಲ್ಲರನ್ನೂ ‘ಎಎಸ್‌ಡಿಡಿಒ’ ಅಡಿಯಲ್ಲಿ ಅಳಿಸಿ ಹಾಕಲು ಪಟ್ಟಿ ಮಾಡಲಾಗಿದೆ. ಇನ್ನು, ಫಾರಂ ಪಡೆದವರು ‘ಸೆಲ್ಫ್’ ಅಥವಾ ‘ಪ್ರೊಜಿನಿ ಮ್ಯಾಪಿಂಗ್’ ಮೂಲಕ ದಾಖಲಾಗದೆ, ಮೂರನೇ ವರ್ಗದ ಮಾಹಿತಿಯಡಿ ವಿವರಗಳನ್ನು ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ, ಅವರೆಲ್ಲರಿಗೂ ನೋಟಿಸ್ ನೀಡಲಾಗಿದೆ.
ನೋಟಿಸ್ ಪಡೆದ 45 ಜನರಲ್ಲಿ ಸುಮಾರು 25 ಜನರು ಇಂದು ಇಆರ್‌ಒ ಮುಂದೆ ಹಾಜರಾಗಿದ್ದಾರೆ. ಕೆಲವರು ಆಧಾರ್ ಜೊತೆಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇನ್ನೂ ಕೆಲವರ ಬಳಿ ಆಧಾರ್ ಹೊರತುಪಡಿಸಿ ಬೇರೆ ದಾಖಲೆ ಇರಲಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಇವರು ನೀಡಿರುವ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳು ಹೇಗೆ ಪರಿಗಣಿಸುತ್ತಾರೆ, ಅವರ ಹೆಸರು ಅಂತಿಮ ಮತಪಟ್ಟಿಯಲ್ಲಿ ಉಳಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆದರೆ, ಇದು ಕೇವಲ ದಾಖಲೆಗಳ ಪ್ರಶ್ನೆಯಷ್ಟೇ ಇಲ್ಲ. ಬದುಕಿನ ಸ್ವರೂಪವೇ ಎಸ್‌ಐಆರ್ ಪ್ರಕ್ರಿಯೆಯೊಂದಿಗೆ ಮುಖಾಮುಖಿಯಾಗುತ್ತಿದೆ. ಗಾಂಧಿನಗರದ ಅಲೆಮಾರಿ ದಕ್ಕಲಿಗ ಸಮುದಾಯದ ಬಹುತೇಕ ಜನರು ದಿನಗೂಲಿ ಮತ್ತು ಅನೌಪಚಾರಿಕ ಉದ್ಯೋಗಗಳ ಮೇಲೆ ಅವಲಂಬಿತರಾಗಿದ್ದಾರೆ. ಕೆಲವರು ಪೊರಕೆ ಕಟ್ಟುವರು, ಕೆಲವರು ಹೇರ್‌ಪಿನ್ ಮತ್ತು ಹಣೆಬೊಟ್ಟು ಮಾರುವರು, ಚಿಂದಿ ಆಯುವರು, ಹಳೆಯ ಗುಜರಿ ವಸ್ತುಗಳ ವ್ಯಾಪಾರ ಮಾಡುವರು. ದಿನದ ದುಡಿಮೆ ತಪ್ಪಿದರೆ ಆ ದಿನದ ಆದಾಯವೇ ತಪ್ಪುವಂತಹ ಬದುಕು ಇವರದು.
ಹೀಗಿರುವಾಗ ಇಆರ್‌ಒ ಕಚೇರಿಗೆ ನಿರ್ದಿಷ್ಟ ದಿನದಂದು ಹಾಜರಾಗುವ ಪ್ರಕ್ರಿಯೆಯೇ ಇವರಿಗೆ ಮತ್ತೊಂದು ಹೊರೆಯಾಗಿದೆ. ಇಂದು ಇಆರ್‌ಒ ಎದುರು ಹಾಜರಾಗಬೇಕಿದ್ದ ಹಲವರು ಊರಲ್ಲಿರಲಿಲ್ಲ. ಅವರು ದಿನನಿತ್ಯದ ಬದುಕಿಗಾಗಿ ಬೇರೆಡೆ ಕೆಲಸಕ್ಕೆ ತೆರಳಿದ್ದರು. ಆದರೆ, ಇದೇ ಕಾರಣಕ್ಕಾಗಿ ಅವರನ್ನು ‘ಹಾಜರಾಗದವರು’ ಎಂದು ಉಲ್ಲೇಖಿಸಿ, ಅವರನ್ನು ಮತಪಟ್ಟಿಯಿಂದಲೇ ಅಳಿಸಿ ಹಾಕಿಬಿಡಬಹುದು. ಹೊಟ್ಟೆಪಾಡಿಗಾಗಿ ದುಡಿಯಲು ಹೊರಹೋದವರು, ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಬಹುದು.

ಆದ್ದರಿಂದಲೇ, ಎಸ್‌ಐಆರ್ ಪ್ರಕ್ರಿಯೆಯ ಸಾಮಾಜಿಕ ಪರಿಣಾಮದ ಬಗ್ಗೆಯೂ ಬಹಳಷ್ಟು ಚರ್ಚೆಗಳು ನಡೆದಿವೆ.
“ಶಾಶ್ವತ ಉದ್ಯೋಗ, ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಆಸ್ತಿ ದಾಖಲೆ, ಪಾಸ್ಪೋರ್ಟ್ ಅಥವಾ ಇತರ ಅಧಿಕೃತ ದಾಖಲೆಗಳ ಸರಪಳಿ ಹೊಂದಿರುವ ಮಧ್ಯಮ ಮತ್ತು ಮೇಲ್ವರ್ಗದ ಮತದಾರರಿಗೆ ದಾಖಲೆ ಸಲ್ಲಿಸುವುದು ಆಡಳಿತಾತ್ಮಕ ಕೆಲಸವಷ್ಟೇ ಆಗಬಹುದು. ಆದರೆ ಅಲೆಮಾರಿ, ವಲಸೆ, ಬೀದಿ ವ್ಯಾಪಾರಿ, ದಿನಗೂಲಿ ಹಾಗೂ ಅಂಚಿನ ಸಮುದಾಯಗಳಿಗೆ ದಾಖಲೆಗಳ ಕೊರತೆಯೇ ಅವರ ಸಾಮಾಜಿಕ ಸ್ಥಿತಿಯ ಭಾಗವಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.
ಈ ಲೇಖನ ಓದಿದ್ದೀರಾ?: ಜೆಡಿಎಸ್‌ನಿಂದ ಜಿಟಿಡಿ ದೂರ ದೂರ; ಕಾಂಗ್ರೆಸ್‌ನಲ್ಲಿ ಹೊಸ ನೆಲೆ ಹುಡುಕಾಟವೇ?
“ಅವರ ಬಳಿ ಸರ್ಕಾರವೇ ನೀಡಿರುವ ಮತದಾರರ ಗುರುತಿನ ಚೀಟಿ ಇದೆ. ರೇಷನ್ ಕಾರ್ಡ್ ಇದೆ. ಆಧಾರ್ ಕಾರ್ಡ್ ಇದೆ. ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ಇದೆ. ಕೆಲವರಿಗೆ ಸರ್ಕಾರವೇ ನೀಡಿರುವ ಹಕ್ಕುಪತ್ರ ಮತ್ತು ಇ-ಸ್ವತ್ತು ದಾಖಲೆಗಳೂ ಇವೆ. ಆದರೂ ಮತಪಟ್ಟಿಯಲ್ಲಿ ಉಳಿಯಲು ಮತ್ತೊಮ್ಮೆ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾದರೆ, ಎಸ್‌ಐಆರ್‌ನ ಉದ್ದೇಶವೇನು? ದಾಖಲೆಗಳು ಮತ್ತು ಸಣ್ಣ-ಪುಟ್ಟ ತಾರ್ಕಿಕ ವ್ಯತ್ಯಾಸಗಳ ಕಾರಣಕ್ಕಾಗಿ ಮತದಾರರ ಹಕ್ಕುಗಳನ್ನೇ ಕಸಿದುಕೊಳ್ಳುವುದೇ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗವು ಎಸ್‌ಐಆರ್‌ನ ಉದ್ದೇಶ ಮತಪಟ್ಟಿಯನ್ನು ಶುದ್ಧೀಕರಿಸುವುದು, ಅನರ್ಹ ಹೆಸರುಗಳನ್ನು ತೆಗೆದುಹಾಕುವುದು, ಪುನರಾವರ್ತಿತ ನೋಂದಣಿಯನ್ನು ಸರಿಪಡಿಸುವುದು ಎಂದು ಹೇಳಿಕೊಂಡಿತ್ತು. ಆದರೆ, ಇದೇ ಪ್ರಕ್ರಿಯೆ ದಾಖಲೆಗಳ ಕೊರತೆಯಿಂದ ಅಂಚಿನ ಸಮುದಾಯದ ನೈಜ ಮತದಾರರನ್ನೇ ಅನುಮಾನಿತರ ಪಟ್ಟಿಗೆ ತಳ್ಳುತ್ತಿದೆ. ಅವರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ವ್ಯವಸ್ಥೆಯಿಂದ ಹೊರಹಾಕುತ್ತಿದೆ.
ಈ ಹಿಂದೆ, ಚುನಾವಣಾ ಆಯೋಗವು ತನ್ನ ಸಿಬ್ಬಂದಿಗಳನ್ನು ಮನೆಮನೆಗೆ ಕಳಿಸಿ, ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯದಂತೆ ಹೆಸರು ಸೇರಿಸುವ ಕೆಲಸ ಮಾಡಿಸುತ್ತಿತ್ತು. ‘ಒಬ್ಬ ಅರ್ಹ ಮತದಾರನೂ ಹೊರಗುಳಿಯಬಾರದು’ ಎನ್ನುವುದು ಆಯೋಗದ ಆಶಯವಾಗಿತ್ತು. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆ ಮತ್ತು ತಾರ್ಕಿಕ ವ್ಯತ್ಯಾಸಗಳ ನೆಪವೊಡ್ಡಿ ಅರ್ಹ ಮತದಾರರನ್ನು ಅನುಮಾನಿಸುವ, ನೋಟಿಸ್, ವಿಚಾರಣೆ ಮತ್ತು ಮರುಪರಿಶೀಲನೆ ಹೆಸರಿನಲ್ಲಿ ಶೋಷಿಸುವ ಹಾಗೂ ಮತದಾನದ ಹಕ್ಕನ್ನೇ ಕಸಿದುಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಅರ್ಹರನ್ನೂ ಮತಪಟ್ಟಿಯಿಂದ ಹೊರಹಾಕುತ್ತಿದೆ.




